ಬುಧವಾರ, ಅಕ್ಟೋಬರ್ 16, 2019
21 °C
ಕಲ್ಯಾಣಪರ್ವದಲ್ಲಿ ಬೈಲೂರು ನಿಜಗುಣಾನಂದ ಸ್ವಾಮೀಜಿ ಬಿಚ್ಚುನುಡಿ

ಸಾಮಾಜಿಕ ನ್ಯಾಯ ನೀಡುವುದೇ ನಿಜ ಕಲ್ಯಾಣ

Published:
Updated:
Prajavani

ಬಸವಕಲ್ಯಾಣ: ‘ಬಸವಣ್ಣನವರದು ಭಕ್ತಿ ಚಳವಳಿ ಅಲ್ಲ; ಆತ್ಮದ ಉತ್ಕ್ರಾಂತಿಯ ಚಳವಳಿ ಆಗಿತ್ತು. ಅವರ ಭಕ್ತಿ ಮೂಢನಂಬಿಕೆ ಆಗಿರಲಿಲ್ಲ, ಕಂದಾಚಾರವಲ್ಲ. ವೈಚಾರಿಕ ಪ್ರಜ್ಞೆ ಜಾಗೃತ ಗೊಳಿಸುವುದಾಗಿತ್ತು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ನುಡಿದರು.

ಇಲ್ಲಿನ ಬಸವ ಮಹಾಮನೆ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಲಾದ ಮೂರು ದಿನಗಳ 18ನೇ ‘ಕಲ್ಯಾಣ ಪರ್ವ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರ ಕಲ್ಯಾಣದ ಅರ್ಥ ಬೇರೇನೂ ಆಗಿರದೆ ಸಾಮಾಜಿಕ ನ್ಯಾಯ ಒದಗಿಸುವುದೇ ಆಗಿದೆ. ದಯೆ, ಕರುಣೆ, ಮಾನವ ಪ್ರೇಮವೇ ಕಲ್ಯಾಣವಾಗಿದೆ' ಎಂದರು.

‘ಬಸವಣ್ಣನವರು ಕಂಡಿದ್ದ ಕಲ್ಯಾಣ ರಾಜ್ಯದ ಕಲ್ಪನೆ ಬೇರೆಯೇ ಆಗಿತ್ತು. ಅದಕ್ಕಾಗಿಯೇ ಅವರು ಮನೆ, ಸ್ಥಾನಮಾನ ಬಿಟ್ಟು ಹೊಸ ಧರ್ಮ ಸ್ಥಾಪಿಸಿದರು. ಅನುಭವ ಮಂಟಪದಲ್ಲಿ ಎಲ್ಲ ಜಾತಿ, ಪಂಥದವರನ್ನು ಒಟ್ಟಾಗಿಸಿ ಎಲ್ಲ ವಿಚಾರಧಾರೆಗಳ ಬಗ್ಗೆ ಚರ್ಚಿಸಿ ನಿರ್ಣಯಕ್ಕೆ ಬರಲಾಗುತ್ತಿತ್ತು. ಇದು ಸಮ ಸಮಾಜದ ತಳಹದಿಯೇ‘ ಎಂದು ಅಭಿಪ್ರಾಯ ಪಟ್ಟರು.

‘ಶರಣ ಸಿದ್ಧಾಂತವು ಜೀವನ ಸಿದ್ಧಾಂತವಾಗಿದೆ. ಅದರ ಸಂರಕ್ಷಣೆ ಅಗತ್ಯವಾಗಿದೆ. ಈಚೆಗೆ ಏಕ ಸಂಸ್ಕೃತಿ ಜಾರಿಗೆ ತರುವ ಹುನ್ನಾರ ನಡೆದಿದ್ದು ಅದರ ವಿರುದ್ಧ ಹೋರಾಡಬೇಕಿದೆ. ಬಸವಣ್ಣ ಅವರನ್ನು ಎತ್ತು ಎಂದು ನಂಬಿದ್ದ ಕಾಲದಲ್ಲಿ ನಿಜ ಬಸವಣ್ಣ ಅವರನ್ನು ತೋರಿಸಿದವರು ಲಿಂಗಾನಂದ ಅಪ್ಪಗಳು ಹಾಗೂ ನಂತರದಲ್ಲಿ ಮಾತೆ ಮಹಾದೇವಿ ಅವರು. ಅವರ ಕಾರ್ಯವನ್ನು ಮುಂದುವರಿಸಿರುವ ಕೂಡಲಸಂಗಮ ಬಸವಧರ್ಮ ಪೀಠದ ನೂತನ ಅಧ್ಯಕ್ಷೆ ಮಾತೆ ಗಂಗಾದೇವಿ ಅವರು ನನಗೆ ದೀಕ್ಷೆ ನೀಡಿದ ಗುರುಗಳು. ಅವರು ಬರೀ 4ನೇ ತರಗತಿವರೆಗೆ ಓದಿದ್ದರೂ ಕನ್ನಡ, ಮರಾಠಿ, ಹಿಂದಿ ಮಾತನಾಡುತ್ತಾರೆ. ಉತ್ತಮ ಪ್ರವಚನಕಾರರಾಗಿದ್ದು ಅವರ ಕಾರ್ಯಕ್ಕೆ ಎಲ್ಲರೂ ಬೆಂಬಲಿಸಬೇಕು' ಎಂದರು.

ಮಾತೆ ಗಂಗಾದೇವಿ ಮಾತನಾಡಿ, ‘ಬಸವಣ್ಣನವರು ಅನೇಕ ಶರಣರನ್ನು ಸಂಘಟಿಸಿ ಗಣಪರ್ವಗಳನ್ನು ನಡೆಸುತ್ತಿದ್ದರು. ಅದಕ್ಕಾಗಿಯೇ ಮಾತೆ ಮಹಾದೇವಿ ಅವರು ಕಲ್ಯಾಣಪರ್ವ ಆಚರಣೆಗೆ ತಂದರು. ಇಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಂಡರು. ಸಮಾನತೆಗಾಗಿ ನಡೆದ ಇಲ್ಲಿನ ಕಲ್ಯಾಣಕ್ರಾಂತಿ ವಿಶ್ವಕ್ಕೆ ಮಾದರಿಯಾದುದು. ಎಲ್ಲರೂ ಬಸವತತ್ವವನ್ನು ತಪ್ಪದೇ ಆಚರಣೆಗೆ ತರಬೇಕು’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ‘ಬಸವತ್ವಕ್ಕೆ ಈಗ ಎಲ್ಲೆಡೆ ಮನ್ನಣೆ ದೊರಕುತ್ತಿದೆ. ಪ್ರಧಾನಿ ಮೋದಿ ಅವರು ಲಂಡನ್‌ನಲ್ಲಿ ಬಸವ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿದ್ದಾರೆ' ಎಂದರು.

ಶಾಸಕ ಬಿ.ನಾರಾಯಣರಾವ್, ಸಾಹಿತಿ ರಂಜಾನ್ ದರ್ಗಾ, ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಜಿ.ಶೆಟಗಾರ್, ಸುರೇಶ ಸ್ವಾಮಿ ಮಾತನಾಡಿದರು.

ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ, ಅಲ್ಲಮಪ್ರಭು ಯೋಗಪೀಠದ ಬಸವಕುಮಾರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಶಿವರಾಜ ನರಶೆಟ್ಟಿ, ಮನೋಜ ಮಾಶೆಟ್ಟೆ, ದಾವೂದ್ ಮಂಠಾಳ, ಬಸವರಾಜ ಪಾಟೀಲ ಶಿವಪುರ ಪಾಲ್ಗೊಂಡಿದ್ದರು.

ಬೀದರ್ ನೂಪುರ ಕಲಾ ತಂಡದಿಂದ ನೃತ್ಯ ಪ್ರದರ್ಶಿಸಲಾಯಿತು.

**

‘ರಾಷ್ಟ್ರಪತಿಗಳಿಂದ ಅನುಭವ ಮಂಟಪದ ಶಂಕುಸ್ಥಾಪನೆ’

ಬಸವಕಲ್ಯಾಣ: ‘ಇಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ₹ 50 ಕೋಟಿ ಮಂಜೂರು ಮಾಡಿದ್ದು, ರಾಷ್ಟ್ರಪತಿಗಳಿಂದ ಅದರ ಶಂಕುಸ್ಥಾಪನೆ ನೆರವೆರಿಸಲು ಯೋಚಿಸಲಾಗಿದೆ' ಎಂದು ಶಾಸಕ ಬಿ.ನಾರಾಯಣರಾವ್ ತಿಳಿಸಿದರು.

ಕಲ್ಯಾಣ ಪರ್ವದ ಉದ್ಘಾಟನೆ ಹಾಗೂ ಧರ್ಮಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಲಿಂಗಾಯತ ಧರ್ಮ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಲಾಯಿತಾದರೂ ಇದೂವರೆಗೆ ಪ್ರತ್ಯೇಕ ಧರ್ಮ ಮಾನ್ಯತೆ ದೊರೆತಿಲ್ಲ. ಲಿಂಗಾಯತ ಧರ್ಮಕ್ಕೆ ಯಾವುದೇ ಪಕ್ಷದವರಾಗಲಿ ಮಾನ್ಯತೆ ನೀಡಿದರೆ ಅವರನ್ನು ಬೆಂಬಲಿಸುತ್ತೇನೆ' ಎಂದರು.

‘ಮಾತೆ ಮಹಾದೇವಿಯವರ ನೇತೃತ್ವದಲ್ಲಿ ಪ್ರಥಮ ಸಲ ಕಲ್ಯಾಣಪರ್ವ ಆಯೋಜಿಸಿದ್ದಾಗ ಕೆಲವರ ವಿರೋಧದ ಕಾರಣ ತೊಂದರೆ ಆಗಿತ್ತು. ಈಗ ಅಂಥ ಸಮಸ್ಯೆ ಇಲ್ಲ. ಮಾತೆ ಮಹಾದೇವಿ ತಮ್ಮ ಕಾರ್ಯದ ಮೂಲಕ ಬದುಕಿದ್ದಾರೆ' ಎಂದು ಕೇಳಿಕೊಂಡರು.

ಹಿರಿಯ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ‘ನೂತನ ಅನುಭವ ಮಂಟಪ ಕಟ್ಟುವುದಕ್ಕೆ ವರದಿ ಸಿದ್ಧಪಡಿಸಿದ ಸಮಿತಿಯಲ್ಲಿ ನಾನೂ ಸದಸ್ಯನಾಗಿದ್ದೆ. ಒಟ್ಟು ₹ 650 ಕೋಟಿಯ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ನಂತರದಲ್ಲಿ ಇಲ್ಲಿನ ಶಾಸಕ ಬಿ.ನಾರಾಯಣರಾವ್ ಅವರು ಮಂಟಪದ ಕಾರ್ಯ ಆರಂಭಿಸಲು ವಿಧಾನಸಭೆಯಲ್ಲಿ ದನಿ ಎತ್ತಿದ್ದಾರೆ. ಇದರ ಫಲವಾಗಿ ಈಚೆಗೆ ಮುಖ್ಯಮಂತ್ರಿಯವರು ಅನುದಾನ ಬಿಡುಗಡೆ ಮಾಡಿರುವುದು ಸಂತಸ ತಂದಿದೆ' ಎಂದರು.

**
ಕಲ್ಯಾಣವು ಬಸವಣ್ಣ ಅವರಿಂದ 770 ಅಮರ ಗಣಂಗಳಿಗೆ ದೀಕ್ಷೆ ನೀಡಿದ ಅವಿಮುಕ್ತ ಕ್ಷೇತ್ರ. ಇಂಥ ಪವಿತ್ರ ನೆಲದ ಸ್ಪರ್ಶದಿಂದ ಬದುಕು ಪಾವನವಾಗುತ್ತದೆ
-ಮಾತೆ ಗಂಗಾದೇವಿ, ಅಧ್ಯಕ್ಷೆ, ಬಸವಧರ್ಮ ಪೀಠ

**

ಗುಡಿಗಳನ್ನು ಸುತ್ತಿ ನಾನೂ ಲಿಂಗಾಯತ ಎಂದರೆ ಬಸವ ತತ್ವದ ಪ್ರಚಾರ ಸಾಧ್ಯವಿಲ್ಲ. ಪಂಚಾಚಾರಗಳ ಆಚರಣೆ ಅಗತ್ಯವಾಗಿದೆ. ಇದು ಕಾಯಕ ಜೀವಿಗಳ ಧರ್ಮ
- ರಂಜಾನ್‌ ದರ್ಗಾ,  ಹಿರಿಯ ಸಾಹಿತಿ

**

ಪ್ರಜಾಪ್ರಭುತ್ವದ ತಳಹದಿಯಲ್ಲಿ ನಿರ್ಮಿಸಿದ್ದ ಅನುಭವ ಮಂಟಪ ಪುನರ್ ನಿರ್ಮಾಣ ಮಾಡಬೇಕಾಗಿದೆ. ಬಸವತತ್ವ ಆಚರಣೆ ಗಂಡಸರಿಂದ ಸಾಧ್ಯವಿಲ್ಲ. ಮಹಿಳೆಯರೂ ಕೈಗೂಡಿಸಬೇಕು
- ಬಿ.ನಾರಾಯಣರಾವ್, ಶಾಸಕ

Post Comments (+)