ಭಾನುವಾರ, ಜನವರಿ 19, 2020
23 °C
ಯೇಸು ಪ್ರತಿಮೆಗೆ ವಿರೋಧ: ‘ಕನಕಪುರ ಚಲೋ’ದಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಗುಡುಗು

ಕಪಾಲ ಬೆಟ್ಟದಲ್ಲಿ ದೇಗುಲ ನಿರ್ಮಾಣ: ಕಲ್ಲಡ್ಕ ಪ್ರಭಾಕರ ಭಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

RSS Leader Kaladka Prabhakar Bhat addressing at the public meeting against Jesus statue at the Kapali hill at Kanakapura

ಕನಕಪುರ (ರಾಮನಗರ): ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ಬದಲಿಗೆ ಮುನೇಶ್ವರನ ದೇಗುಲ ಕಟ್ಟುವುದು ಖಚಿತ ಎಂದು  ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ವಿಶ್ವಾಸ ವ್ಯಕ್ತಪಡಿಸಿದರು. 

ಯೇಸು ಪ್ರತಿಮೆ ನಿರ್ಮಾಣ ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ‘ಕನಕಪುರ ಚಲೋ’ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರತಿಮೆಗೆ ನೀಡಲಾದ ಜಾಗ ಹಿಂದಕ್ಕೆ ಪಡೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದರು.

ತಮ್ಮ ಭಾಷಣದುದ್ದಕ್ಕೂ ಡಿ.ಕೆ. ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಯೇಸು ಪ್ರತಿಮೆ ಕಟ್ಟಿ ಮತಾಂತರಕ್ಕೆ ಮುಂದಾದವರಿಗೆ ಡಿ.ಕೆ. ಸಹೋದರರು ಸಹಕಾರ ನೀಡುತ್ತಿದ್ದಾರೆ. ಆದರೆ, ಬಂಡೆ ಒಡೆದಂತೆ ಹಿಂದೂ ಧರ್ಮ ಒಡೆಯಲು ಬಿಡುವುದಿಲ್ಲ. ಧರ್ಮಕ್ಕಾಗಿ ಬಲಿದಾನಕ್ಕೆ ಸಿದ್ಧರಿದ್ದೇವೆ. ನಿಮ್ಮ ಬಲಿದಾನವನ್ನೂ ಮಾಡುತ್ತೇವೆ. ದೇಶದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಿಸಬೇಕೆ ಹೊರತು ಸೋನಿಯಾ ಗಾಂಧಿ ಕಡೆಯದ್ದವರಲ್ಲ’ ಎಂದು ತಿಳಿಸಿದರು.

‘ತಿರುಪತಿಯಲ್ಲಿ ಕ್ರೈಸ್ತರಿಗೆ ಅವಕಾಶ ಕಲ್ಪಿಸಿದ ರಾಜಶೇಖರ ರೆಡ್ಡಿ ಮುಂದೆ ಏನಾದರೆಂದು ಎಲ್ಲರಿಗೂ ಗೊತ್ತಿದೆ. ಯೇಸು ಪ್ರತಿಮೆ ನಿರ್ಮಾಣಕ್ಕೆ ಸಹಕರಿಸುವುದನ್ನು ಬಿಡದೇ ಹೋದಲ್ಲಿ ಡಿ.ಕೆ. ಸಹೋದರರ ವಿನಾಶ ಖಚಿತ’ ಎಂದು ಎಚ್ಚರಿಸಿದರು.

‘ನಿಮಗೆ ಶಿವ, ಸುರೇಶ ಎಂಬ ಹೆಸರಿಟ್ಟಿದ್ದಾರೆ. ನಿಮ್ಮ ಮಕ್ಕಳು ಕೃಷ್ಣ, ಮಾಧವ ಆಗಬೇಕೇ ಹೊರತು ಮಹಮ್ಮದ್ ಅಲ್ಲ. ಮಕ್ಕಳು, ಮೊಮ್ಮಕ್ಕಳು ಕೂತು ತಿಂದರೂ ಕರಗದಷ್ಟು ಆಸ್ತಿ ಮಾಡಿದ್ದೀರಿ. ಅದರಲ್ಲಿ ಸರ್ಕಾರ ಹಿಡಿದದ್ದು ಅತ್ಯಲ್ಪ. ಇನ್ನಾದರೂ ಧರ್ಮ ವಿರೋಧಿ ಬುದ್ಧಿ ಬಿಡಿ. ಹಿಂದಿನ ಸರ್ಕಾರದಲ್ಲಿ ಮಂತ್ರಿ ಆಗಿದ್ದವರು ಇಂದು ಕಂತ್ರಿ ಆಗಿದ್ದಾರೆ. ಮುಂದೆಮುನೇಶ್ವರದ ಪಾದತಲದಲ್ಲಿ ನಿಮ್ಮ ತಲೆ ಇಡುವ ದಿನ ಬರುತ್ತದೆ. ಇಂದು ನಿಮ್ಮದೇ ಕ್ಷೇತ್ರದಲ್ಲಿ ನಿಮ್ಮ ಜನರೇ ಧ್ವನಿ ಎತ್ತಿರುವುದು ಅದಕ್ಕೆ ಸಾಕ್ಷಿ' ಎಂದು ಕಿಡಿಕಾರಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು