ಕನ್ನಡಕ್ಕಾಗಿ ಭಿಕ್ಷೆ ಬೇಡಿದವರನ್ನು ಮರೆಯಲುಂಟೆ?

7
ಧಾರವಾಡದಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 100 ವರ್ಷ

ಕನ್ನಡಕ್ಕಾಗಿ ಭಿಕ್ಷೆ ಬೇಡಿದವರನ್ನು ಮರೆಯಲುಂಟೆ?

Published:
Updated:
Prajavani

ಹುಬ್ಬಳ್ಳಿ: ಕೋಟಿಗಟ್ಟಲೆ ಅನುದಾನದಲ್ಲಿ ವೈಭವೋಪೇತವಾಗಿ ನಡೆಯುವ ಈಗಿನ ಅಕ್ಷರ ಜಾತ್ರೆ ಎಲ್ಲಿ? ಕನ್ನಡಿಗರ ಮನೆ ಮನೆಗೆ ತೆರಳಿ, ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ತಂದ ದುಡ್ಡಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದೆಲ್ಲಿ? ಅಂಥದ್ದೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆಯೇ ಧಾರವಾಡದ ಮಣ್ಣಿನಲ್ಲಿ ಆಗಿಹೋಗಿದೆ.

1918ರ ಮೇ ತಿಂಗಳಿನಲ್ಲಿ ಧಾರವಾಡದಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರ್.ನರಸಿಂಹಾಚಾರ್ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿತ್ತು. ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ಈ ಸಮ್ಮೇಳನ ಅಖಿಲ ಭಾರತ ಮಟ್ಟದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಉತ್ತರ ಕರ್ನಾಟಕದಲ್ಲಿ ನಡೆದ ಮೊದಲ ದೊಡ್ಡ ಸಮ್ಮೇಳನ. ಅದಕ್ಕೆ ಕಾರಣ ಪುರುಷ ಧಾರವಾಡದ ಸಕ್ಕರಿ ಬಾಳಾಚಾರ್ಯರು (ಶಾಂತಕವಿ ಅಥವಾ ಶಾಂತೇಶ ಕಾವ್ಯನಾಮದಿಂದ ಬರೆಯುತ್ತಿದ್ದವರು). ಆದರೆ ಅವರನ್ನು ಈಗ ಯಾರೂ ಸ್ಮರಿಸುತ್ತಿಲ್ಲ ಎಂಬ ಕೊರಗು ಹಲವರದ್ದು.

‘ಧಾರವಾಡದಲ್ಲಿ ಮೊದಲ ಬೃಹತ್‌ ಸಾಹಿತ್ಯ ಸಮ್ಮೇಳನ ನಡೆಯಲು ಕಾರಣಕರ್ತರಾದ ಸಕ್ಕರಿ ಬಾಳಾಚಾರ್ಯರ ಹೆಸರನ್ನು ಯಾರೂ ಸ್ಮರಿಸಿಕೊಳ್ಳುವ ಕೆಲಸವನ್ನು ಮಾಡುತ್ತಿಲ್ಲ. ಈಗಲಾದರೂ ಇಲ್ಲಿಯೇ ನಡೆಯುತ್ತಿರುವ ಸಮ್ಮೇಳನದ ಮುಖ್ಯ ವೇದಿಕೆಯೊಂದಕ್ಕೆ ಅವರ ಹೆಸರನ್ನು ಇಡಬೇಕೆಂದು ಸೂಚಿಸಿದ್ದೆ. ಆದರೆ ಸಂಬಂಧಪಟ್ಟವರು ಪರಿಗಣಿಸಿದಂತಿಲ್ಲ’ ಎಂದು ವಿಷಾದಿಸುತ್ತಾರೆ ಹಿರಿಯ ಲೇಖಕ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು.

‘ಆ ಸಮ್ಮೇಳನ ಹಣಕಾಸಿನ ಕೊರತೆಯಿಂದಾಗಿ ಒಂದು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಆಗ ಬ್ರಿಟಿಷ್‌ ಸರ್ಕಾರ ಬೇರೆ ಇತ್ತು. ಅಂಥ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ, ಪ್ರವಚನಕಾರ, ನಾಟಕಕಾರ ಸಕ್ಕರಿ ಬಾಳಾಚಾರ್ಯರು ಮನೆ ಮನೆಗೆ ತೆರಳಿ, ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಸಮ್ಮೇಳನ ಆಯೋಜನೆ ಮಾಡಿ ಯಶಸ್ವಿಗೊಳಿಸಿದ್ದರು. ತಮ್ಮ ಮುಪ್ಪಿನ ಮತ್ತು ಅನಾರೋಗ್ಯದ ದಿನಗಳಲ್ಲಿಯೂ ಅವರು ಮೆರೆದ ಕನ್ನಡ ಕಳಕಳಿ ಅಪರೂಪದ್ದು. ಅವರು ತಮ್ಮ 62ನೇ ವಯಸ್ಸಿನಲ್ಲಿ, ಸ್ವತಃ ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಬಗಲಿಗೆ ಜೋಳಿಗೆ ಹಾಕಿಕೊಂಡು, ಕನ್ನಡದ ದಾಸಯ್ಯನಾಗಿ, ಕನ್ನಡಕ್ಕಾಗಿ ಭಿಕ್ಷೆ, ದಾನ, ಸಹಾಯದ ರೂಪದಲ್ಲಿ ಹಣಕಾಸು ಸಂಗ್ರಹಿಸಿ ತಂದು ಕೊಟ್ಟಿದ್ದು ಅವಿಸ್ಮರಣೀಯವಾದದ್ದು.’

‘ಬೇಡಲು ಕನ್ನಡ ದಾಸಯ್ಯ ಬಂದಿಹ, ನೀಡಿರಮ್ಮಾ! ತಡ ಮಾಡದಲೇ...’ ಎಂದು ಹಾಡುತ್ತ ಕನ್ನಡ ಜೋಳಿಗೆ ಹಾಕಿಕೊಂಡು ಶಾಂತಕವಿಗಳು ಅಡ್ಡಾಡಿದರು. ಸಕಾಲದಲ್ಲಿ ಅವರು ಒದಗಿಸಿ ಕೊಟ್ಟ ನೆರವಿನ ಆಧಾರವನ್ನು ಪಡೆದು, ಧಾರವಾಡದಲ್ಲಿ ಆಗ ನಡೆದ, ಆ ಮೊದಲ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಸ್ಮರಿಸಬೇಕು’ ಎನ್ನುತ್ತಾರೆ ಪಟ್ಟಣಶೆಟ್ಟರು.

ಧಾರವಾಡದಲ್ಲಿ ಹುಟ್ಟಿ ಬೆಳೆದ ಶಾಂತಕವಿಗಳು (1856–1920), ತಮ್ಮ 64 ವರ್ಷಗಳ ಜೀವಿತಾವಧಿಯಲ್ಲಿಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸೇರಿದ 65ಕ್ಕಿಂತ ಹೆಚ್ಚು ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. ಶಾಲಾ ಶಿಕ್ಷಕರಾಗಿ 40 ವರ್ಷ ಧಾರವಾಡ, ಬೆಳಗಾವಿ, ಗದಗ, ಹುಬ್ಬಳ್ಳಿ ಮುಂತಾದ ಕಡೆ ಸಾರ್ಥಕ ಶಿಕ್ಷಣ ಸೇವೆ ಹಾಗೂ ಕನ್ನಡ ಸಾಹಿತ್ಯ ಸೇವೆ ಮಾಡಿದ್ದ ಅವರು ಅವಿರತವಾಗಿ ಕನ್ನಡದ ದಾಸಯ್ಯನಾಗಿ ಗೆಜ್ಜೆ ಕಟ್ಟಿಕೊಂಡು ಕುಣಿದ ಅಪರೂಪದ ಅಕ್ಷರ ವ್ಯಕ್ತಿ.

ಸಂತ ಶಿಶುನಾಳ ಶರೀಫರು ಸಕ್ಕರಿ ಬಾಳಾಚಾರ್ಯರನ್ನು ‘ಇದು ಸಕ್ಕರಿಯಪ್ಪಾ, ನಿಜವಾಗಿಯೂ ಇದು ಸಕ್ಕರಿ!’ ಎಂದು ಉದ್ಗರಿಸಿದ್ದರಂತೆ. ಕವಿ ದ.ರಾ. ಬೇಂದ್ರೆ ಅವರು ತಮ್ಮ ‘ವಾಗ್ಭೂಷಣ’ ಪತ್ರಿಕೆಯಲ್ಲಿ ತಾವೇ ಕವಿತೆ ಬರೆದು, ಬರೆಸಿ ಪ್ರಕಟಿಸಿದ ವಿಶೇಷ ಲೇಖನಗಳು ಚಾರಿತ್ರಿಕ ದಾಖಲೆಯಾಗಿ ಉಳಿದಿವೆ.

ಧಾರವಾಡದಲ್ಲಿ ‘ಶ್ರೀ ಶಾಂತೇಶ ಧರ್ಮಾರ್ಥ ವಾಚನಾಲಯ’ ಹೊರತಾಗಿ, ಶಾಂತಕವಿಗಳ ಪ್ರಕಟಿತ ಕೃತಿಗಳನ್ನಾಗಲಿ, ಅಪ್ರಕಟಿತ ಹಸ್ತಪ್ರತಿಗಳನ್ನಾಗಲಿ, ಅವರ ಸಂಗಾತಿಗಳ, ರಂಗಭೂಮಿಯ ಒಡನಾಡಿಗಳ ಸಮಗ್ರ ವಿವರಗಳನ್ನಾಗಲಿ ಸಂಗ್ರಹಿಸಿ ಇಡುವ ಕಾರ್ಯ ಮಾತ್ರ ಈವರೆಗೂ ನಡೆದಿಲ್ಲ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 23

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !