‘ಬರಿಗೈ–ಬರಗಾಲದ ಪ್ರತ್ಯೇಕ ರಾಜ್ಯ ಬೇಡ’

7
ಸಮಾನತೆ ಸಾಧಿಸದೆ ಪ್ರತ್ಯೇಕತೆ ಸಲ್ಲದು: ನಿವೃತ್ತ ಐಎಎಸ್‌ ಅಧಿಕಾರಿ ಜಾಮದಾರ

‘ಬರಿಗೈ–ಬರಗಾಲದ ಪ್ರತ್ಯೇಕ ರಾಜ್ಯ ಬೇಡ’

Published:
Updated:
Prajavani

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ’ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿದರೆ ಅದು ಬರಿಗೈ ಮತ್ತು ಬರಗಾಲದಿಂದ ಕೂಡಿದ ರಾಜ್ಯವಾಗಿರುತ್ತದೆ’ ಎಂದು ಹಿರಿಯ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ ಎಚ್ಚರಿಕೆ ನೀಡಿದರು.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ ‘ಉತ್ತರ ಕರ್ನಾಟಕ: ಅಭಿವೃದ್ಧಿಯ ಸವಾಲುಗಳು’ ಗೋಷ್ಠಿಯಲ್ಲಿ ‘ಬರಗಾಲ ಮತ್ತು ವಲಸೆ’ ವಿಷಯದ ಬಗ್ಗೆ ಅವರು ಮಾತನಾಡಿದರು.

‘ಶೇಕಡ 75ರಷ್ಟು ಆದಾಯ ಬೆಂಗಳೂರಿನಿಂದಲೇ ದೊರೆಯುತ್ತದೆ. ಶೇಕಡ 5ರಷ್ಟು ಆದಾಯ ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದ ನಗರಗಳಿಂದ ದೊರೆಯುತ್ತದೆ. ಉತ್ತರ ಕರ್ನಾಟಕದ ನೈರುತ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ಸದಾ ನಷ್ಟದಲ್ಲಿರುತ್ತವೆ. ಇಲ್ಲಿನ ಹೆಸ್ಕಾಂ ಮತ್ತು ಜೆಸ್ಕಾಂಗಳು ಆರ್ಥಿಕ ನಷ್ಟದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ, ಮುಂದಿನ ಕನಿಷ್ಠ ಮೂರು ತಲೆ
ಮಾರುಗಳವರೆಗೆಯಾದರೂ ಪ್ರತ್ಯೇಕ ಉತ್ತರ ಕರ್ನಾಟಕ ರಚನೆ ಬಗ್ಗೆ ಯೋಚಿಸಬಾರದು’ ಎಂದು ಪ್ರತಿಪಾದಿಸಿದರು.

ಇವನ್ನೂ ಓದಿ

ಧ್ವಜಾರೋಹಣದ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ​

ಮೊಳಗಿತು ಕನ್ನಡದ ಕಹಳೆ: ಅದ್ದೂರಿ ಮೆರವಣಿಗೆಗೆ ವರ್ಣರಂಜಿತ ಚಾಲನೆ​

’ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಮಾಡಬೇಕಾದ್ದನ್ನು ಮಾಡಿಲ್ಲ ಎನ್ನುವುದು ನಿಜ. ಇಲ್ಲಿನ ನೈಸರ್ಗಿಕ ಸಂಪನ್ಮೂಲ

ಗಳ ಸದ್ಬಳಕೆ ಆಗಿಲ್ಲ. ಆದರೂ, ನಮ್ಮ ಹಿರಿಯರು ಒಗ್ಗೂಡಿಸಿದ ಸಮಗ್ರ ಕರ್ನಾಟಕವನ್ನು ವಿಭಜಿಸಲು ಯಾರೂ ಪ್ರಯತ್ನಿಸಬಾರದು. ನಾಡು ಒಗ್ಗಟ್ಟಿನಿಂದ ಇರಬೇಕು. ಒಂದು ವೇಳೆ ಪ್ರತ್ಯೇಕ ರಾಜ್ಯವಾದರೆ ಅದು ದರಿದ್ರತನಿಂದ ಕೂಡಿದ ರಾಜ್ಯವಾಗಿರುತ್ತದೆ. ಈ ಸತ್ಯವನ್ನು ಅರಿತುಕೊಳ್ಳಬೇಕು. ಸಮಾನತೆ ಸಾಧಿಸದೆ ಪ್ರತ್ಯೇಕತೆ ಸಲ್ಲದು’ ಎಂದು ಅವರು ತೀಕ್ಷ್ಣ ಎಚ್ಚರಿಕೆ ನೀಡಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆಗೆ 1964ರಲ್ಲಿ ಅಡಿಗಲ್ಲು ಹಾಕಲಾಯಿತು. ಆದರೆ, 54 ವರ್ಷಗಳು ಕಳೆದರೂ ಈ ಯೋಜನೆ ಸಂಪೂರ್ಣ ಪೂರ್ಣಗೊಂಡಿಲ್ಲ. ಇದು ಉತ್ತರ ಕರ್ನಾಟಕದ ತಾರತಮ್ಯ ಅಲ್ಲವೇ? ಈಗ ಉಳಿದಿರುವ ಶೇಕಡ 20ರಷ್ಟು ನೀರಾವರಿ ಯೋಜನೆ ಕೈಗೊಳ್ಳಲು ₹53 ಸಾವಿರ ಕೋಟಿ ಬೇಕಾಗುತ್ತದೆ. ಇದೇ ರೀತಿ ಕೃಷ್ಣಾ ನೀರಾವರಿ ನಿಗಮದ ಅಡಿಯಲ್ಲಿರುವ ಸುಮಾರು 40 ಯೋಜನೆಗಳು 40 ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಈ ಯೋಜನೆಗಳಿಗೆ ₹10 ಸಾವಿರ ಕೋಟಿ ಅಗತ್ಯವಿದೆ’ ಎಂದು ವಿಶ್ಲೇಷಿಸಿದರು.

 ‘ರಾಜ್ಯದಲ್ಲಿ ಕೃಷಿ ಮಾಡುವವರ ಸಂಖ್ಯೆ ಕುಸಿಯುತ್ತಿದೆ. ಶೇಕಡ 80ರಷ್ಟಿದ್ದ ಕೃಷಿಕರು ಈಗ ಶೇಕಡ 52ರಷ್ಟು ಇದ್ದಾರೆ. ಇವರೆಲ್ಲರೂ ಬಹುತೇಕ ಉತ್ತರ ಕರ್ನಾಟಕದವರು. ರಾಜ್ಯದ ಶೇಕಡ 62ರಷ್ಟು ಕೃಷಿ ಪ್ರದೇಶವೂ ಉತ್ತರ ಕರ್ನಾಟಕದಲ್ಲಿದೆ. ಹೀಗಾಗಿ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಅಗತ್ಯವಿದೆ’ ಎಂದು ಹೇಳಿದರು.

ಇವನ್ನೂ ಓದಿ

ಸಮ್ಮೇಳನ ಮೆರವಣಿಗೆಗೆ ಪೂರ್ಣಕುಂಭ ಸ್ವಾಗತ​

* ಮೊದಲು ಕನ್ನಡ, ನಂತರ ಉಳಿದದ್ದು: ಚಂದ್ರಶೇಖರ ಕಂಬಾರ ಸಂದರ್ಶನ

 ‘ಬರ ಬಂದಾಗ ರೈತರಿಗೆ ನೀಡುವ ಪರಿಹಾರವು ಭೂಮಿ ಮತ್ತು ಆಕಾಶದ ನಡುವಣ ಅಂತರದಷ್ಟಿದೆ. ಫಸಲ್‌ ಬಿಮಾ ಯೋಜನೆಯಲ್ಲಿ ಬದಲಾವಣೆ ತರಬೇಕು. ಸುಮಾರು 600 ವರ್ಷಗಳಿಂದ ಬರ ಎದುರಿಸುತ್ತಿದ್ದೇವೆ, 1880ರವರೆಗೂ ಈ ದೇಶದಲ್ಲಿನ ರಾಜರು ಬರ ಪರಿಹಾರ ಕೊಡುತ್ತಿರಲಿಲ್ಲ. 1880ರಲ್ಲಿ ಬ್ರಿಟಿಷರು ಬರಗಾಲ ಯೋಜನೆಯನ್ನು ರೂಪಿಸಿದರು. ಇದಕ್ಕಾಗಿ ರಚಿಸಿದ ನೀತಿಸಂಹಿತೆ ನೂರು ವರ್ಷಗಳವರೆಗೂ ಜಾರಿಯಲ್ಲಿತ್ತು. ಪರಿಹಾರ ಕೇಂದ್ರವನ್ನು ಬ್ರಿಟಿಷರೇ ಆರಂಭಿಸಿದ್ದರೇ ಹೊರತು ಯಾವ ರಾಜ–ಮಹಾರಾಜರು ಮಾಡಿಲ್ಲ’ ಎಂದು ಹೇಳಿದರು.

‘ದೇಶದಲ್ಲೇ ಅತಿ ಹೆಚ್ಚು ಒಣಭೂಮಿ ಕರ್ನಾಟಕದಲ್ಲಿದೆ. ನೂರಾರು ವರ್ಷಗಳಿಂದ ಬರ ಎದುರಿಸುತ್ತಿದ್ದೇವೆ. ಪ್ರತಿ ನಾಲ್ಕು ವರ್ಷಕ್ಕೆ ಬರ ಸಹಜವಾಗುತ್ತಿದೆ. ಆದರೆ, ಬರ ಎನ್ನುವುದು ಪ್ರಕೃತಿ ವಿಕೋಪದಿಂದ ಅಲ್ಲ. ಅದು ಹತ್ತಾರು ಸಮಸ್ಯೆಗಳ ಸಮುಚ್ಚಯ. ಬರಕ್ಕೆ ಸಂಬಂಧಿಸಿದಂತೆ ಪುಡಿಗಾಸು ಅನುದಾನಕ್ಕಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಬದಲು ರಾಜ್ಯ ಸರ್ಕಾರವೇ ಪರಿಹಾರ ರೂಪಿಸಬೇಕು’ ಎಂದರು.

ಶಾಸಕ ಎಚ್‌.ಕೆ. ಪಾಟೀಲ ಮಾತನಾಡಿ, ‘ನಂಜುಂಡಪ್ಪ ವರದಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಸರ್ಕಾರಕ್ಕೆ ಈ ವರದಿ ಬೈಬಲ್‌ ಇದ್ದ ಹಾಗೆ. ಕೃಷ್ಣಾ ಕಣಿವೆ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಬರಗಾಲಕ್ಕೆ ಪರಿಹಾರ ಕಂಡುಕೊಳ್ಳ
ಬೇಕು’ ಎಂದು ಒತ್ತಾಯಿಸಿದರು. ಬರಗಾಲ ನಿರ್ವಹಣೆಗೆ ಉದ್ಯೋಗ ಖಾತ್ರಿ ಪರಿಹಾರ ಅಲ್ಲ ಎಂದು ಅಭಿಪ್ರಾಯಪಟ್ಟರು.

‘ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿಯನ್ನು ಹೆಚ್ಚು ನೀಡುತ್ತಿರುವುದರಿಂದ ಆಹಾರ ಸಂಸ್ಕೃತಿ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರೊಟ್ಟಿಯನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬೇಕಾದ ಪರಿಸ್ಥಿತಿ ಬರುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅನುಷ್ಠಾನದ ವಿವರ ಬಹಿರಂಗಪಡಿಸಿ’

ನಂಜುಂಡಪ್ಪ ವರದಿ ಅನುಷ್ಠಾನ ಕುರಿತು ಮೌಲ್ಯಮಾಪನ ಮಾಡಿರುವ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಒತ್ತಾಯಿಸಿದರು.

‘ನಂಜುಂಡಪ್ಪ ವರದಿ ಅನುಷ್ಠಾನ: ಸವಾಲುಗಳು’ ಕುರಿತು ವಿಷಯ ಮಂಡಿಸಿದ ಅವರು, ’ನಂಜುಂಡಪ್ಪ ವರದಿಯಲ್ಲಿ ಸೂಚಿಸಿರುವ ಸಲಹೆಗಳನ್ನು ಅನುಷ್ಠಾನಗೊಳಿಸುವ ಉತ್ತಾಹ ನಮ್ಮ ಅಧಿಕಾರಿಗಳಲ್ಲಿ ಇರಲಿಲ್ಲ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳ ಪಾತ್ರವೂ ಇದರಲ್ಲಿ ಮುಖ್ಯವಾಗಿತ್ತು’ ಎಂದರು.

‘ಈ ವರದಿಯಲ್ಲಿ ಸೂಚಿಸಿದಂತೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಹಿಂದುಳಿದ ಪ್ರದೇಶಗಳಿಗೆ ಇದುವರೆಗೆ ಬಜೆಟ್‌ನಲ್ಲಿ ₹1617 ಕೋಟಿ ನೀಡಲಾಗಿದೆ. ಅಂದರೆ, ಶೇಕಡ 8.7ರಷ್ಟು ಆಗುತ್ತದೆ. ಆದರೆ, ನಂಜುಂಡಪ್ಪ ವರದಿಯಲ್ಲಿ ಶೇಕಡ 20ರಷ್ಟು ಅನುದಾನ ಮೀಸಲಿಡಲು ಶಿಫಾರಸು ಮಾಡಲಾಗಿತ್ತು’ ಎಂದರು.

ಸಾಂಸ್ಕೃತಿಕ ಪ್ರಾತಿನಿಧ್ಯ ದೊರೆಯಲಿ’

‘ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಪ್ರಾಧಿಕಾರಿಗಳು, ಪರಿಷತ್‌, ಅಕಾಡೆಮಿಗಳು, ಸಂಸ್ಥೆಗಳಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ದೊರೆಯಬೇಕು’ ಎಂದು ಡಾ. ಗುರುಪಾದ ಮರಿಗುದ್ದಿ ಒತ್ತಾಯಿಸಿದರು.

‘ಸಾಂಸ್ಕೃತಿಕ ಪ್ರಾತಿನಿಧ್ಯ’ ವಿಷಯದ ಕುರಿತು ಮಾತನಾಡಿದ ಅವರು, ‘ಉತ್ತರ ಕರ್ನಾಟಕಕ್ಕೆ ಸಾಂಸ್ಕೃತಿಕವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಇದುವರೆಗೆ ಸಾಹಿತ್ಯ ಪರಿಷತ್‌ನಲ್ಲಿ ಅಧ್ಯಕ್ಷರಾದವರಲ್ಲಿ ಐದು ಮಂದಿಯನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ದಕ್ಷಿಣ ಕರ್ನಾಟಕದವರೇ’ ಎಂದು ವಿವರಿಸಿದರು.

‘ರಾಜ್ಯದಲ್ಲಿ 52 ಆಕಾಶವಾಣಿ ಕೇಂದ್ರಗಳಿವೆ. ಇವುಗಳಲ್ಲಿ 10ರಿಂದ 12 ಮಾತ್ರ ಉತ್ತರ ಕರ್ನಾಟಕದಲ್ಲಿವೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಇದೆ. ಆದರೆ, ಅದು ಬಹುತೇಕ ದಕ್ಷಿಣ ಕರ್ನಾಟಕದವರ ಹಿಡಿತದಲ್ಲಿದೆ. ಆದ್ದರಿಂದ, ಇಡೀ ರಾಜ್ಯದ ಬಗ್ಗೆ ಸಮಗ್ರ ದೃಷ್ಟಿಕೋನ ಇರಬೇಕು’ ಎಂದು ಪ್ರತಿಪಾದಿಸಿದರು.

‘ಉತ್ತರ ಕರ್ನಾಟಕ ಅದರಲ್ಲೂ ಧಾರವಾಡದಂತಹ ಸ್ಥಳದಲ್ಲಿ ನಾಡು–ನುಡಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಜಾನಪದ ಕಲಾವಿದರಿಗೆ ತರಬೇತಿ ಶಾಲೆ ಸ್ಥಾಪಿಸಬೇಕು. ನೃತ್ಯ ಕಲಾವಿದರಿಗಾಗಿಯೇ ಸಂಸ್ಥೆಯನ್ನು ಆರಂಭಿಸಬೇಕು’ ಎಂದು ಒತ್ತಾಯಿಸಿದರು.

* ಇವನ್ನೂ ಓದಿ...

ಸಾಹಿತ್ಯ ಸಮ್ಮೇಳನದ ಪೂರ್ಣಕುಂಭ ಮೆರವಣಿಗೆಯಲ್ಲಿ ಪುರುಷರಿಗೂ ಅವಕಾಶ: ಮನು ಬಳಿಗಾರ

ಪೂರ್ಣಕುಂಭ ಸ್ವಾಗತ!

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !