ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಒಡಿಗೆ ಓಡೋಡಿ ಬಂದರು!

Last Updated 5 ಜನವರಿ 2019, 7:14 IST
ಅಕ್ಷರ ಗಾತ್ರ

ಧಾರವಾಡ: ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಎಲ್ಲಾ ಜಿಲ್ಲೆಗಳಿಂದ ಶಿಕ್ಷಕರ ದಂಡೇ ಬಂದಿದೆ. ಆದರೆ, ಹಲವು ಶಿಕ್ಷಕರು ’ಒಒಡಿ’ (ಅನ್ಯ ಕಾರ್ಯ ನಿಮಿತ್ತ ರಜೆ) ಪತ್ರಕ್ಕಾಗಿಯೇ ಹೆಚ್ಚು ಆಸಕ್ತಿ ವಹಿಸಿದ್ದರು. ಇದಕ್ಕಾಗಿ ಮಾತಿನ ಚಕಮಕಿ ಸಹ ನಡೆದವು.

ಪ್ರಧಾನ ವೇದಿಕೆ ಸಮೀಪ ನೋಂದಣಿಗಾಗಿ ಸ್ಥಾಪಿಸಲಾಗಿದ್ದ ಮಳಿಗೆಗಳು ಶಿಕ್ಷಕರಿಂದ ಗಿಜಿಗಿಡುತ್ತಿದ್ದವು. ಬೆಳಿಗ್ಗೆಯಿಂದಲೇ ನೋಂದಣಿ ಆರಂಭಿಸಲಾಗಿತ್ತು. ಮುಂಚಿತವಾಗಿ ನೋಂದಣಿ ಮಾಡಿಸಿಕೊಂಡವರಿಗೆ ಕಿಟ್‍ಗಳನ್ನು ವಿತರಿಸಲಾಗುತ್ತಿತ್ತು. ಜತೆಗೆಯೇ ’ಒಒಡಿ’ ಪತ್ರ ನೀಡಲಾಗುತ್ತಿತ್ತು.

ಸಮ್ಮೇಳನಕ್ಕಾಗಿ ದೂರದ ಊರಿನವರಿಗೆ ಪ್ರಯಾಣಕ್ಕಾಗಿ ಒಂದು ದಿನದ ಹೆಚ್ಚುವರಿ ರಜೆ ಸೌಲಭ್ಯ ದೊರೆಯುತ್ತದೆ. ಹೀಗಾಗಿ, ಒಟ್ಟು ಸಾಲು ಸಾಲು ರಜೆಗಳ ಸೌಲಭ್ಯ ನೀಡುವ ’ಒಒಡಿ’ಗಾಗಿ ಶಿಕ್ಷಕರು ಹರಸಾಹಸ ಮಾಡುತ್ತಿದ್ದರು. ನೋಂದಣಿ ರಶೀದಿ ನೀಡಿದಾಗ ಒಒಡಿ ಪತ್ರ ನೀಡಲಾಗುತ್ತಿತ್ತು. ಇದರಲ್ಲಿ ಯಾರ ಹೆಸರನ್ನೂ ಬರೆಯದೇ ನೀಡಲಾಗುತ್ತಿತ್ತು.

ತುಮಕೂರು ಜಿಲ್ಲಾ ಕೌಂಟರ್‌ನಲ್ಲಿ ಬೆಳಿಗ್ಗೆಯಿಂದ ಉದ್ದನೆಯ ಸಾಲು ಇತ್ತು. ವಿಳಂಬವಾದ ಕಾರಣ ಶಿಕ್ಷಕರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇನ್ನು ಕೆಲವು ಮಳಿಗೆಗಳಲ್ಲಿ ಸ್ಥಳದಲ್ಲೇ ನೋಂದಣಿ ಮಾಡಿದ ಹಲವರು ಕಿಟ್ ನೀಡುವಂತೆ ಒತ್ತಾಯಿಸಿದಾಗಲೂ ವಾಗ್ವಾದಗಳು ನಡೆದವು.

'ಒಒಡಿ ನೀಡುತ್ತೇವೆ. ಆದರೆ, ಕಿಟ್ ನೀಡುವುದಿಲ್ಲ. ಮುಂಚಿತವಾಗಿ ನೋಂದಣಿ ಮಾಡಿಸಿದವರಿಗೆ ಮಾತ್ರ ಕಿಟ್‌ ನೀಡಲಾಗುವುದು' ಎಂದು ಸಿಬ್ಬಂದಿ ವಾದಿಸಿದರು.

ಇನ್ನು ಬಹುತೇಕ ಶಿಕ್ಷಕಿಯರ ಒಒಡಿಯನ್ನು ಪುರುಷ ಶಿಕ್ಷಕರೇ ಪಡೆಯುತ್ತಿದ್ದರು. ಧಾರವಾಡ ಜಿಲ್ಲೆಯವರಿಗೆ ಭಾನುವಾರ ನೀಡುವುದಾಗಿ ಹೇಳಿ ಕಿಟ್ ಮಾತ್ರ ನೀಡಲಾಗುತ್ತಿತ್ತು. ಹಲವು ಶಿಕ್ಷಕರು ಧಾರವಾಡ ಸಮೀಪದಲ್ಲಿರುವ ಗೋವಾ, ಉಳವಿ, ದೂಧಸಾಗರ ಮುಂತಾದ ತಾಣಗಳಿಗೆ ಪ್ರವಾಸ ತೆರಳುವ ಯೋಜನೆ ರೂಪಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT