ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆ

7
ಸಮಯಾಭಾವದ ನೆಪದಲ್ಲಿ ಮೈಕ್ ಕಸಿದ ಆಯೋಜಕರು

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆ

Published:
Updated:
Prajavani

ಧಾರವಾಡ: ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರಿಲ್ಲದೇ ಸೊರಗಿದವು.

ಸಮ್ಮೇಳನದ ಮುಖ್ಯ ವೇದಿಕೆ ಸೇರಿದಂತೆ ಎರಡು ಪರ್ಯಾಯ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೃತ್ಯ, ಸಂಗೀತ, ಜಾನಪದ, ತತ್ವಪದ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನಿಗದಿಯಂತೆ ಸಂಜೆ 6.30 ಕ್ಕೆ ಪರ್ಯಾಯ ವೇದಿಕೆ, ರೈತರ ಜ್ಞಾನಾಭಿವೃದ್ಧಿ ಕೆಂದ್ರದಲ್ಲಿ ಲೇಖಕ, ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಿತ್ತು.

ಸಮ್ಮೇಳನದ ಉದ್ಘಾಟನಾ ಸಮಾರಂಭ ತಡವಾದ ಕಾರಣ ಎಲ್ಲ ವೇದಿಕೆಗಳಲ್ಲೂ ನಿಗದಿಯಂತೆ ಗೋಷ್ಠಿಗಳು ಆರಂಭವಾಗಲಿಲ್ಲ. ಹೀಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಕೂಡ ಮುಂದೆ ಹೋಯಿತು.

ಆದರೆ, ಇನ್ನೊಂದು ಪರ್ಯಾಯ ವೇದಿಕೆ ಪ್ರೇಕ್ಷಾಗೃಹದಲ್ಲಿ ಚಾಲನೆ ನೀಡುವುದಕ್ಕಿಂತ ಮೊದಲೇ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಅಲ್ಲಿ ಭಾಗವಹಿಸುವವರನ್ನು ಬಿಟ್ಟು ಬೇರೆ ಪ್ರೇಕ್ಷಕರೆ ಇರಲಿಲ್ಲ.

ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕಾರ್ಯಕ್ರಮ ನೀಡಲು ಮಕ್ಕಳು ಮೇಕಪ್ ಮಾಡಿಕೊಂಡು, ವೇಷ ಭೂಷಣ ತೊಟ್ಟುಕೊಂಡು ಸಿದ್ಧರಾಗಿ ನಿಂತಿದ್ದರು. ಗೋಷ್ಠಿ ನಡೆಯುತ್ತಿದ್ದರಿಂದ ಹೊರಗೆ ಕಾಯುವುದು ಅನಿವಾರ್ಯವಾಗಿತ್ತು.

‘ಪ್ರೇಕ್ಷಾಗೃಹ ಎಲ್ಲಿದೆ ಗೊತ್ತಿಲ್ಲ. ಕೇಳಿದರೆ ಸ್ವಯಂ ಸೇವಕರಿಗೆ ಮಾಹಿತಿ ಇಲ್ಲ. ಪ್ರೇಕ್ಷಾಗೃಹಕ್ಕೆ ಬಂದರೆ ಇಲ್ಲಿ ಯಾರನ್ನು ವಿಚಾರಿಸಬೇಕು ಎನ್ನುವುದು ತಿಳಿಯಲಿಲ್ಲ. ಅಲ್ಲದೇ ಪ್ರೇಕ್ಷಕರೇ ಇಲ್ಲದಿದ್ದರೆ ಪ್ರದರ್ಶನ ನೀಡುವುದು ಹೇಗೆ? ನೀಡಿದರೂ ಸಮಾಧಾನ ಆಗುವುದಿಲ್ಲ. ಹೀಗಾದರೆ ಬೇಜಾರಾಗುತ್ತದೆ‘ ಎಂದು ನಾಟ್ಯಾಂಜಲಿ ಕಲಾ ಮಂದಿರದ ವನಿತಾ ಮಹಾಲೆ ಬೇಸರ ವ್ಯಕ್ತಪಡಿಸಿದರು.

‘ತಪಸ್ಯಾ ಎನ್ನುವ ಬಾಲಕಿ ನೃತ್ಯ ಮಾಡಲು ಸಿದ್ಧಳಾಗಿ ನಿಂತಿದ್ದಳು. ಆದರೆ ಯಾವಾಗ ಕಾರ್ಯಕ್ರಮ ಬರುತ್ತದೋ.. ಕಾರ್ಯಕ್ರಮ ಮುಗಿದ ಮೇಲೆ ಮತ್ತೆ ಮನೆಗೆ ಹೋಗುವುದು ಹೇಗೆ ಎಂದು ಚಿಂತೆಯಾಗುತ್ತದೆ. ಉಳಿದ ವ್ಯವಸ್ಥೆಗಳು ಚೆನ್ನಾಗಿವೆ. ಈ ಕುರಿತು ಇನ್ನಷ್ಟು ಗಮನಹರಿಸಬೇಕಿತ್ತು‘ ಎಂದು ತಪಸ್ಯಾ ತಾಯಿ ಸೌಮ್ಯಪ್ರಭಾ ಪ್ರತಿಕ್ರಿಯಿಸಿದರು.

ಮತ್ತೊಂದೆಡೆ ಹಾಡುಗಾರಿಕೆ ನಡೆಸುತ್ತಿದ್ದ ಪಂಚಾಕ್ಷರಿ ಪುನೀತ್ ಕುಮಾರ್‌ ಮತ್ತು ಸೋದರರಿಗೆ 10 ನಿಮಿಷ ನೀಡಲಾಗಿತ್ತು. ಆದರೆ ಶೃತಿ, ತಾಳ ಹೊಂದಿಸುವಲ್ಲಿ ಸ್ವಲ್ಪ ಸಮಯ ಕಳೆದಿತ್ತು. ಹಾಡುಗಾರಿಕೆ ಆರಂಭವಾಗುವ ಹೊತ್ತಿಗೆ ಸಮಯಾವಕಾಶ ನೀಡದೆ, ಆಯೋಜಕರು ಮೈಕ್ ಕಸಿದಿದ್ದು ಕಲಾವಿದರನ್ನು ಕುಪಿತರನ್ನಾಗಿಸಿತು.

ಕೇವಲ ಹತ್ತು ನಿಮಿಷ ಸಾಕೇ?

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲ ಕಲಾವಿದರಿಗೆ ಕೇವಲ ಹತ್ತು ನಿಮಿಷ ನಿಗದಿಪಡಿಸಿದ್ದು ಅಸಮಾಧಾನಕ್ಕೆ ಕಾರಣವಾಯಿತು.

ವೇದಿಕೆ ಏರಿ ವಾದ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಜತೆಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಒಂದರ ನಂತರ ಮತ್ತೊಂದು ಕಾರ್ಯಕ್ರಮ ನಿಗದಿಪಡಿಸಲಾಗಿದೆ. ಇದರಿಂದ, ಸ್ವಲ್ಪವೂ ವಿರಾಮ ಇಲ್ಲ. ಹೀಗಾದರೆ, ಕಾರ್ಯಕ್ರಮಗಳನ್ನು ನೀಡುವುದು ಹೇಗೆ ಎಂದು ಹಲವು ಕಲಾವಿದರು ಪ್ರಶ್ನಿಸಿದರು.

‘ನಾವು ಗೊಂದಳಿ ಕಲಾವಿದರು. ಹತ್ತು ನಿಮಿಷದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಕೇವಲ ಪ್ರೇಕ್ಷಕರಿಗೆ ಕೈ ಬೀಸಿ ಬರಬೇಕಾಗುತ್ತದೆ’ ಎಂದು ಕುಷ್ಟಗಿ ತಾಲ್ಲೂಕಿನ ತಾವರಗೇರಾದ ತಿಪ್ಪಣ್ಣ ಅಂಬಾಜಿ ಸುಗತೇಕರ ಅಸಮಾಧಾನ ವ್ಯಕ್ತಪಡಿಸಿದರು.

 

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !