ಗುರುವಾರ , ಸೆಪ್ಟೆಂಬರ್ 23, 2021
22 °C

ಆನಂದ್‌ ಸಿಂಗ್‌ ಹಣದ ಮಹಾರಾಜ: ವಿ.ಎಸ್‌. ಉಗ್ರಪ್ಪ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ಹಣದ ಮಹಾರಾಜ. ಏನು ಬೇಕಾದರೂ ಖರೀದಿಸಬಹುದು ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ, ವಿಜಯನಗರ ಕ್ಷೇತ್ರದ ಮತದಾರರನ್ನು ಖರೀದಿಸಿ ಉಪಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬುದು ಅವರ ಭ್ರಮೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್‌. ಉಗ್ರಪ್ಪ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆನಂದ್‌ ಸಿಂಗ್‌ ಅವರು ಮೀಸೆ ತಿರುವಿ, ತೊಡೆ ತಟ್ಟಿದ್ದಾರೆ. ಇದು ಅವರ ಅಹಂಕಾರ ತೋರಿಸುತ್ತದೆ. ಮತದಾರರ ಸ್ವಾಭಿಮಾನ ಕೆಣಕಿದ್ದಾರೆ. ಮತ್ತೊಂದೆಡೆ ಹತಾಶರಾಗಿ ಕಣ್ಣೀರು ಹಾಕಿದ್ದಾರೆ. ಸೋಲುವ ಭಯದಿಂದ ಈ ನಾಟಕ ಆಡುತ್ತಿದ್ದಾರೆ’ ಎಂದರು.

‘ಅಕ್ರಮ ಗಣಿಗಾರಿಕೆಯಲ್ಲಿ ಜೈಲಿಗೆ ಹೋಗಿ ಬಂದದ್ದು, ₹100 ಕೋಟಿಗೂ ಅಧಿಕ ವೆಚ್ಚದಲ್ಲಿ ಹೊಸ ಬಂಗಲೆ ಕಟ್ಟಿಸಿರುವುದು, ಬಂಗಲೆ ಮೇಲೆ ಬೂದಿ ಬೀಳುತ್ತದೆ ಎಂದು ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಮುಚ್ಚಿಸಿರುವುದೇ ಆನಂದ್‌ ಸಿಂಗ್‌ ಅವರ ದೊಡ್ಡ ಸಾಧನೆಗಳು. ಬಡವರ ಜಮೀನು ಲಪಟಾಯಿಸಿ ಲೇಔಟ್‌ ಮಾಡಿದ್ದಾರೆ. ಅಧಿಕಾರಕ್ಕಾಗಿ ತನ್ನ ಶಾಸಕ ಸ್ಥಾನ ಮಾರಿಕೊಂಡಿದ್ದಾರೆ. ಇಂತಹವರು ಪುನಃ ಶಾಸಕರಾಗಬೇಕೇ? ಪ್ರಬುದ್ಧ ಮತದಾರರು ಇವರನ್ನು ಸೋಲಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಹೇಳಿದರು.

‘15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ಸಿಕ್ಕಿದೆ. ಬಿಜೆಪಿ ಆಂತರಿಕ ಸಮೀಕ್ಷೆಯಿಂದ ಆ ಪಕ್ಷದ ಮುಖಂಡರು ಹತಾಶರಾಗಿದ್ದಾರೆ. ಹೀಗಾಗಿಯೇ ಅವರು ಮನಬಂದಂತೆ ಮಾತಾಡುತ್ತಿದ್ದಾರೆ. ಮತದಾರರಿಗೆ ಚಿನ್ನದ ಉಂಗುರ, ಚಿನ್ನದ ನಾಣ್ಯ, ಹಣ ಕೊಟ್ಟು ಆಮಿಷವೊಡ್ಡುತ್ತಿದ್ದಾರೆ. ಆದರೆ, ಅದರಿಂದ ಏನು ಆಗದು’ ಎಂದರು.

ಹಿರಿಯ ಮುಖಂಡ ಬಸವರಾಜ ರಾಯರಡ್ಡಿ ಮಾತನಾಡಿ, ‘ಮತದಾರರಿಗೆ ₹500 ನೋಟು ಕೊಡುತ್ತಿದ್ದಾರೆ. ಯಾರು ಕೂಡ ಹಣಕ್ಕೆ ಮಾರಿಕೊಳ್ಳಬಾರದು. ಕಾಂಗ್ರೆಸ್ಸಿನ ಸರಳ, ಸಜ್ಜನ, ಪ್ರಾಮಾಣಿಕ ರಾಜಕಾರಣಿ ವೆಂಕಟರಾವ್‌ ಘೋರ್ಪಡೆಯವರು ಗೆದ್ದರೆ ಪ್ರಜಾಪ್ರಭುತ್ವಕ್ಕೆ ಮೌಲ್ಯ ಬರುತ್ತದೆ. ಆ ಕೆಲಸ ಮತದಾರರು ಮಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಚುನಾವಣಾ ಆಯೋಗ ಜೀವಂತವಾಗಿದೆಯೇ?’
‘ರಾಜ್ಯದ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಮೇಲಿಂದ ಮೇಲೆ ನೀತಿ ಸಂಹಿತೆ ಉಲ್ಲಂಘಿಸಲಾಗುತ್ತಿದೆ. ಸ್ವತಃ ಮುಖ್ಯಮಂತ್ರಿ, ಕಾನೂನು ಸಚಿವರು ಪದೇ ಪದೇ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ನಿಜಕ್ಕೂ ಜೀವಂತವಾಗಿದೆಯೇ’ ಎಂಬ ಅನುಮಾನ ಮೂಡುತ್ತಿದೆ ಎಂದು ಕೆ.ಪಿ.ಸಿ.ಸಿ. ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್‌. ಉಗ್ರಪ್ಪ ಹೇಳಿದರು.

‘ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆಗಾಗಿ ಜನರಲ್ಲಿ ಭರವಸೆ ಮೂಡಿಸಬೇಕು. ಬಿಜೆಪಿ ಕೈಗೊಂಬೆ ಆಗಬಾರದು’ ಎಂದರು.

ಎ.ಐ.ಸಿ.ಸಿ. ಕಾರ್ಯದರ್ಶಿ ಸಾಕೆ ಶೈಲಜನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ, ಮುಖಂಡ ಅನಿಲ್‌ ಲಾಡ್‌, ಆಂಜನೇಯಲು, ನಿಂಬಗಲ್‌ ರಾಮಕೃಷ್ಣ, ಗುಜ್ಜಲ್‌ ನಾಗರಾಜ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು