ಸೋಮವಾರ, ಸೆಪ್ಟೆಂಬರ್ 20, 2021
24 °C
ಬಿಜೆಪಿಯ ಎಸ್.ಟಿ. ಸೋಮಶೇಖರ್– ಜೆಡಿಎಸ್‌ನ ಜವರಾಯಿಗೌಡ ನಡುವೆ ನೇರ ಹಣಾಹಣಿ

ಯಶವಂತಪುರ ಅಖಾಡದಲ್ಲೊಂದು ಸುತ್ತು| ಅಧಿಕಾರ–ಅನುಕಂಪದ ಹೋರಾಟ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ಬೆಂಗಳೂರು: 2008ರಲ್ಲಿ ನಡೆದ ಕ್ಷೇತ್ರ ವಿಂಗಡಣೆಯ ಬಳಿಕ ಸೃಷ್ಟಿಯಾಗಿರುವ ಯಶವಂತಪುರದಲ್ಲಿ ಈವರೆಗೆ ಮೂರು ಚುನಾವಣೆಗಳು ನಡೆದಿವೆ. ಮೊದಲಿಗೆ ಬಿಜೆಪಿಯ ಶೋಭಾ ಕರಂದ್ಲಾಜೆ ಜಯ ಗಳಿಸಿದ್ದರೆ, ನಂತರದ ಎರಡು ಚುನಾವಣೆಗಳಲ್ಲಿ ಗೆದ್ದವರು ಆಗ ಕಾಂಗ್ರೆಸ್‌ನಲ್ಲಿದ್ದ ಎಸ್.ಟಿ. ಸೋಮಶೇಖರ್‌.

ಬದಲಾದ ಸನ್ನಿವೇಶದಲ್ಲಿ ಸೋಮಶೇಖರ್ ಈಗ ಬಿಜೆಪಿ ಅಭ್ಯರ್ಥಿ. ಜೆಡಿಎಸ್‌ ಭದ್ರ ನೆಲೆಯಿದ್ದರೂ ಈವರೆಗೂ ತೆನೆ ಹೊತ್ತ ಮಹಿಳೆಯ ಕೈಯನ್ನು ಕ್ಷೇತ್ರದ ಮತದಾರರು ಹಿಡಿದಿಲ್ಲ. ಈ ಬಾರಿ ಬಿಜೆಪಿ–ಜೆಡಿಎಸ್ ಮಧ್ಯೆ ಪ್ರಬಲ ಪೈಪೋಟಿ ಈ ಕ್ಷೇತ್ರದಲ್ಲಿ ಕಾಣಿಸುತ್ತಿದೆ.

ತಮ್ಮ ನಡೆ ಮತ್ತು ನುಡಿ ಬದಲಾದಂತೆ ಮತದಾರರ ಒಲವು ಕೂಡ ಬದಲಾಗುತ್ತದೆ, ಗೆಲುವು ತಮಗೇ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ. ಈವರೆಗೆ ಬಿಜೆಪಿಯನ್ನು ಟೀಕಿಸುತ್ತಲೇ ಗೆಲುವು ಸಾಧಿಸಿದ್ದ ಸೋಮಶೇಖರ್‌ ಈಗ ಬಿಜೆಪಿಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ.

ಜೆಡಿಎಸ್‌ನ ಟಿ.ಎನ್. ಜವರಾಯಿಗೌಡ ಅನುಕಂಪದ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದರು. ಕಳೆದ ಚುನಾವಣೆಯಲ್ಲಿ 10,711 ಮತಗಳ ಕಡಿಮೆ ಅಂತರದಿಂದ ಸೋತಿದ್ದಾರೆ. ಈ ಬಾರಿ ಅವರಿಗೆ ಒಂದು ಅವಕಾಶ ಕೊಡಬೇಕೆಂದಿದ್ದೇವೆ ಎಂದು ಕೆಲವು ಮತದಾರರು ಹೇಳುತ್ತಿದ್ದಾರೆ. ಆದರೆ,  ಸತತ ಮೂರನೇ ಬಾರಿ ಕಾಂಗ್ರೆಸ್‌ನ ಬಾವುಟವನ್ನು ಕ್ಷೇತ್ರದಲ್ಲಿ ಹಾರಿಸುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ ಕಾಂಗ್ರೆಸ್‌ನ ಪಿ. ನಾಗರಾಜ್. 

ಬಿಬಿಎಂಪಿಯ ಐದು ವಾರ್ಡ್‌ಗಳು ಹಾಗೂ 17 ಗ್ರಾಮ ಪಂಚಾಯಿತಿಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಈ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಸೋಮಶೇಖರ್‌ ಅವರು ಎಸ್.ಟಿ. ಸೋಮಶೇಖರ್‌ ‘ಗೌಡ’ ಎಂಬ ಭಿತ್ತಿಪತ್ರಗಳನ್ನು ಬರೆಸಿ ಪ್ರಚಾರ ಮಾಡುವ ಮೂಲಕ ಈ ಮತಗಳ ಕ್ರೋಡೀಕರಣಕ್ಕೂ ಮುಂದಾಗಿದ್ದಾರೆ. ‘ಕ್ಷೇತ್ರದಲ್ಲಿ 60 ಸಾವಿರಕ್ಕೂ ಹೆಚ್ಚು ಜನ ನನ್ನ ಸಂಬಂಧಿಗಳು ಇದ್ದಾರೆ. ಅವರೆಲ್ಲ ಮತ ಹಾಕಿ, ಮತ್ತೊಬ್ಬರಿಂದ ಒಂದೊಂದು ಮತ ಹಾಕುವಂತೆ ಮಾಡಿದರೂ ನನ್ನ ಗೆಲುವು ಸುಲಭ’ ಎನ್ನುತ್ತಾರೆ ನಾಗರಾಜ್. 

ಹೇಗಿದೆ ಪ್ರಚಾರ?: 

ಎರಡು ಬಾರಿ ಪರಾಭವಗೊಂಡು ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಜವರಾಯಿಗೌಡ, ಪ್ರಚಾರದ ವೇಳೆ ಅಭಿಮಾನಿಯೊಬ್ಬರು ಚುನಾವಣಾ ಖರ್ಚಿಗಾಗಿ ಹಣ ಕೊಟ್ಟಾಗ ಗಳಗಳನೆ ಕಣ್ಣೀರು ಹಾಕಿದ್ದಾರೆ. ಸ್ವಾರಸ್ಯಕರ ವಿಷಯವೆಂದರೆ, ಅವರು ಅಧಿಕೃತವಾಗಿ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ₹167 ಕೋಟಿ.

ಕಾಂಗ್ರೆಸ್‌ನ ಅಭ್ಯರ್ಥಿಗೆ ಕ್ಷೇತ್ರದ ಗಡಿಯೇ ಗೊತ್ತಿಲ್ಲ ಎಂದು ಸೋಮಶೇಖರ್‌ ಮೂದಲಿಸಿದರೆ, ‘ಸೋಮಶೇಖರ್ ಮತ್ತು ಜವರಾಯಿಗೌಡ ಸ್ಥಳೀಯರೇ ಅಲ್ಲ. ಅವರಿಬ್ಬರಿಗಿಂತ ಸ್ಥಳೀಯ ಸಮಸ್ಯೆ ನನಗೆ ಚೆನ್ನಾಗಿ ಗೊತ್ತು’ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುತ್ತಿದ್ದಾರೆ ನಾಗರಾಜ್.  

ಈ ಕ್ಷೇತ್ರದ ಪ್ರಮುಖ ಸಮಸ್ಯೆ ಕುಡಿಯುವ ನೀರು, ಸಂಚಾರ ದಟ್ಟಣೆ ಹಾಗೂ ತ್ಯಾಜ್ಯ ಸಂಸ್ಕರಣ ಘಟಕಗಳು. ಈ ಸಮಸ್ಯೆಗಳನ್ನು ಕೇಂದ್ರೀಕರಿಸಿಕೊಂಡು ನಾಯಕರು ಭಾಷಣ ಮಾಡುತ್ತಿದ್ದಾರೆ. ಹೇರೋಹಳ್ಳಿ, ದೊಡ್ಡಬಿದರಕಲ್ಲು ವಾರ್ಡ್‌ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಾವೇರಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಾವರೆಕೆರೆಯವರೆಗೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳುವ ಮೂಲಕ ನಗರ ಭಾಗದ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

ಕಾಂಗ್ರೆಸ್‌ನ ಇಬ್ಬರು ಪಾಲಿಕೆ ಸದಸ್ಯರು, ಕಾಂಗ್ರೆಸ್‌ ಬೆಂಬಲಿತ 15 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರು ಸೋಮಶೇಖರ್‌ ಹಿಂದೆ ಹೋಗಿರುವುದು ಕಾಂಗ್ರೆಸ್‌ಗೆ ತಲೆನೋವಾಗಿದೆ. ಕ್ಷೇತ್ರದಲ್ಲಿ ಸಚಿವ ಆರ್. ಅಶೋಕ, ಶೋಭಾ ಕರಂದ್ಲಾಜೆ, ನಟ ಜಗ್ಗೇಶ್‌ ಪ್ರಭಾವ ಇದ್ದು ಗೆಲುವಿಗೆ ನೆರವಾಗಲಿದೆ ಎಂಬ ವಿಶ್ವಾಸ ಸೋಮಶೇಖರ್‌ ಅವರದ್ದಾಗಿದೆ. ಸ್ಥಳೀಯ ನಾಯಕರಿಗಿಂತ ಮತದಾರರು ಮುಖ್ಯ ಎಂದು ಹೇಳುತ್ತಿರುವ ನಾಗರಾಜ್, ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು