ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಯಲ್ಲೇ ಸಂತ್ರಸ್ತರ ಬದುಕು: ಬದುಕು ಸುಧಾರಿಸಿದ ಬಿಡಿಗಾಸಿನ ಪರಿಹಾರ

ಕುಸಿದ ಮನೆಯಲ್ಲೇ ಕುರಿ ಸಾಕಿ ಜೀವನ ನಿರ್ವಹಣೆ
Last Updated 14 ಅಕ್ಟೋಬರ್ 2019, 20:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮನೆ ಕುಸಿದು, ಬೀದಿಗೆ ಬಂದಿದ್ದ ನಮಗೆ ಆರಂಭದಲ್ಲಿ ಎಲ್ಲರೂ ಸಹಾಯ ಮಾಡಿದರು. ಅಧಿಕಾರಿಗಳು ಚಿಲ್ಲರೆ ಪರಿಹಾರ ಕೊಟ್ಟು ಕೈ ತೊಳೆದುಕೊಂಡರು. ಈಗಲೂ ಬೀದಿಯಲ್ಲೇ ಇರುವ ನಮ್ಮನ್ನು ಕೇಳುವವರೇ ಇಲ್ಲವಾಗಿದೆ..?’

ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಕುಸಿದಿರುವ ತಮ್ಮ ಮನೆಯತ್ತ ದಿಟ್ಟಿಸುತ್ತಾ ಅಳಲು ತೋಡಿಕೊಂಡವರು ಹುಬ್ಬಳ್ಳಿ ತಾಲ್ಲೂಕಿನ ಅಮರಗೋಳದ ಪಾರವ್ವ ವಿಭೂತಿಮಠ.

ಸಿಕ್ಕಿದ್ದು ಅಲ್ಪ ಪರಿಹಾರ. ಅದರಲ್ಲಿ ಮನೆ ದುರಸ್ತಿ ಮಾಡಿಕೊಳ್ಳಲಾಗದ ಸ್ಥಿತಿ ಅವರದು. ಅದನ್ನು ಸರಿ ಮಾಡಹೊರಟರೆ ಹೊಟ್ಟೆಗಿಲ್ಲದ ಸ್ಥಿತಿ. ತಾತ್ಕಾಲಿಕವಾಗಿ ತಂಗಿರುವ ಮನೆಯ ಬಾಡಿಗೆ ಪಾವತಿಸಲಾಗದ ಸ್ಥಿತಿ ಇನ್ನೊಂದು ಕಡೆ. ಕುಸಿದ ಮನೆಯೊಳಗೇ ಕುರಿಗಳನ್ನು ಸಾಕಿಕೊಂಡು ಬದುಕು ದೂಡುತ್ತಿರುವ ಅವರು, ನೆರವಿಗಾಗಿ ಕಾಯುತ್ತಿದ್ದಾರೆ.

ಆ ಹಣ ಇಟ್ಟಿಗೆಗೂ ಸಾಲದು: ‘ಮನೆಯ ಬಹುತೇಕ ಭಾಗ ಕುಸಿದಿದೆ. ಆದರೆ, ಜಿಲ್ಲಾಡಳಿತ ಕೊಟ್ಟಿದ್ದು ಕೇವಲ ₹23 ಸಾವಿರ. ಒಂದು ಲೋಡ್ ಇಟ್ಟಿಗೆಗೂ ಆ ಹಣ ಸಾಲದು’ ಎಂದು ಪಾರವ್ವ ಗೋಳು ತೋಡಿಕೊಂಡರು.

‘ಪುನರ್ವಸತಿ ಕೇಂದ್ರದಲ್ಲಿದ್ದ ನಾವು ಬಾಡಿಗೆ ಮನೆಗೆ ಹೋದ ಬಳಿಕವೂ ಆಹಾರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ಈವರೆಗೆ ಯಾರೂ ನಮ್ಮತ್ತ ತಿರುಗಿ ನೋಡಿಲ್ಲ’ ಎಂದು ಬೇಸರ
ವ್ಯಕ್ತಪಡಿಸಿದರು.

ದೇವಸ್ಥಾನದಲ್ಲೇ ಮಲಗುತ್ತಾರೆ: ಗ್ರಾಮದ ದೇವಸ್ಥಾನದಲ್ಲಿ ತೆರೆದಿದ್ದ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಕುಟುಂಬಗಳ, ಕೆಲವರು ಇಂದಿಗೂ ರಾತ್ರಿ ದೇವಸ್ಥಾನದಲ್ಲೇ ಬಂದು ಮಲಗುತ್ತಾರೆ.

‘ಒಂದು ಕೋಣೆ ಹೊರತುಪಡಿಸಿದರೆ, ಮನೆಯ ಇಡೀ ಭಾಗ ಕುಸಿದಿದೆ. ಆ ಕೋಣೆಯಲ್ಲೇ ಎಲ್ಲಾ ಸಾಮಾನುಗಳನ್ನು ಇಟ್ಟುಕೊಂಡಿದ್ದು, ನಾನು ಹಾಗೂ ಪತಿ ಇಲ್ಲೇ ಮಲಗುತ್ತೇವೆ. ಬಾಣಂತಿ ಮಗಳನ್ನು ಬಾಡಿಗೆ ಮನೆಯಲ್ಲಿ ಬಿಟ್ಟಿದ್ದೇವೆ. ಉಳಿದ ಇಬ್ಬರು ಮಕ್ಕಳು ದೇವಸ್ಥಾನದಲ್ಲಿ ಮಲಗಿ ಬೆಳಿಗ್ಗೆ ಎದ್ದು ಬರುತ್ತಾರೆ’ ಎಂದು ಶೋಭಾ ಕಲ್ಲಪ್ಪ ಲದ್ದಿ ಹೇಳಿದರು.

‘ಸರ್ಕಾರ ಮನೆ ನಿರ್ಮಿಸಲು ₹5 ಲಕ್ಷ ಕೊಡುತ್ತದೆ ಎಂದು ಕುಸಿದ ಮನೆ ಎದುರು ಕುಟುಂಬದವರನ್ನು ನಿಲ್ಲಿಸಿ ಫೋಟೊ ತೆಗೆದು
ಕೊಂಡು ಹೋಗಿದ್ದಾರೆ. ಆದರೆ, ಪರಿಹಾರ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ. ಈಗಲೂ ಆಗಾಗ ಸುರಿಯುತ್ತಿರುವ ಮಳೆಗೆ ಈ ಕೋಣೆಯೂ ಕುಸಿಯಬಹುದೆಂಬ ಭಯದಲ್ಲೇ ದಿನ ದೂಡುತ್ತಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹುಸಿಯಾದ ಮನೆ ಬಾಡಿಗೆ ಪಾವತಿ ಭರವಸೆ
20 ದಿನದ ಹಸುಗೂಸಿನೊಂದಿಗೆ ದೇವಸ್ಥಾನದಲ್ಲೇ ಆಶ್ರಯ ಪಡೆದಿದ್ದ ಶಿಲ್ಪಾ ಲದ್ದಿ ಅವರ ಕುಟುಂಬ, ಸದ್ಯ ಬಾಡಿಗೆ ಮನೆಯಲ್ಲಿದೆ. ಮನೆ ಬಾಡಿಗೆ ಪಾವತಿಸುವ ಭರವಸೆ ನೀಡಿದ್ದವರು ಇತ್ತ ಸುಳಿದೇ ಇಲ್ಲ. ಮೂರು ದಿನಕ್ಕೊಮ್ಮೆ ಮಗು ಹಾಗೂ ತಾಯಿಯ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಅಧಿಕಾರಿಗಳೂ ನಾಪತ್ತೆ.

‘ಕುಸಿದ ಮನೆಗೆ ಪರಿಹಾರವಾಗಿ ಸಿಕ್ಕಿದ್ದು ₹28 ಸಾವಿರ. ಅದರಲ್ಲೇ ಬಾಡಿಗೆ ಮನೆಗೆ ಬಂದು ತಂಗಿದೆವು. ‍‍ಪತಿ ಕೂಲಿ ಮಾಡುತ್ತಾರೆ. ಬಡವರಿಗೆ ಇಂತಹ ಪರಿಸ್ಥಿತಿ ಬರಬಾರದು’ ಎಂದು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT