ಗುರುವಾರ , ಅಕ್ಟೋಬರ್ 24, 2019
21 °C
ಯಾವುದೇ ರಾಜ್ಯಕ್ಕೆ ಇನ್ನೂ ಪರಿಹಾರ ದೊರಕಿಲ್ಲ

ಪರಿಹಾರಕ್ಕೆ ಪ್ರಧಾನಿ ಭೇಟಿ ಅಗತ್ಯವಿಲ್ಲ: ಬಿ.ಎಸ್‌.ಯಡಿಯೂರಪ್ಪ

Published:
Updated:

ಮೈಸೂರು: ‘ಪ್ರವಾಹ ಪರಿಹಾರ ತರಲು, ಸರ್ವಪಕ್ಷಗಳ ನಿಯೋಗವು ಪ್ರಧಾನಿಯನ್ನು ಭೇಟಿ ಮಾಡುವ ಅಗತ್ಯವಿಲ್ಲ. ಯಾರ ಶಿಫಾರಸು ಕೂಡ ಬೇಡ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ಇಲ್ಲಿ ಹೇಳಿದರು.

‘ದೇಶದ ಯಾವುದೇ ರಾಜ್ಯಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಸಂಬಂಧ ನಮ್ಮ ಪಕ್ಷದವರಾಗಲಿ, ಬೇರೆ ಪಕ್ಷದವರಾಗಲಿ ಗೊಂದಲ ಉಂಟು ಮಾಡಬಾರದು. ವಿದೇಶ ಪ್ರವಾಸದಿಂದ ಪ್ರಧಾನಿ ಬಂದಿದ್ದು, ಕೆಲವೇ ದಿನಗಳಲ್ಲಿ ಪರಿಹಾರ ಸಿಗಲಿದೆ. ದೇಶದ ಆಗುಹೋಗುಗಳ ಬಗ್ಗೆ ಅವರಿಗೂ ಗೊತ್ತಿದೆ’ ಎಂದರು.

ಕಿಸೆಯಿಂದ ಕೊಡಲು ಆಗಲ್ಲ: ‘ಕಿಸೆಯಿಂದ ತೆಗೆದು ಪರಿಹಾರ ಕೊಡಲು ಆಗುವುದಿಲ್ಲ. ಅದಕ್ಕೆ ಸರಿಯಾದ ಪ್ರಕ್ರಿಯೆಗಳು ನಡೆಯಬೇಕು’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

‘ಈ ಸಂಬಂಧ ಪ್ರಧಾನಿ ಮೇಲೆ ಗೂಬೆ ಕೂರಿಸುವ ಪ್ರಯತ್ನಬೇಡ. ಕರ್ನಾಟಕದ ಬಗ್ಗೆ ಪ್ರೀತಿ ಇಟ್ಟುಕೊಂಡು, ಈವರೆಗೆ ಏನೇನು ಕೊಡಬೇಕಿತ್ತೋ ಅದನ್ನೆಲ್ಲಾ ನೀಡಿದ್ದಾರೆ. ಟ್ವೀಟ್‌ ಮಾಡಿಲ್ಲ ಎನ್ನುತ್ತಾರೆ; ನೆರೆ ಪರಿಶೀಲನೆಗೆ ಗೃಹ ಸಚಿವ ಅಮಿತ್‌ ಶಾ ಅವರನ್ನೇ ಕಳುಹಿಸಿದ್ದು ಕಾಣಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಕೆಲವರು ಇಷ್ಟು ದಿನ ಬಿಜೆಪಿ ಸಂಸದರನ್ನು ಟೀಕಿಸಿ ಸಾಕಾಗಿ, ಈಗ ಮೋದಿ ಅವರನ್ನೇ ನಿಂದಿಸಲು ಶುರು ಮಾಡಿದ್ದಾರೆ. ಈ ಪ್ರಯತ್ನ ಆಕಾಶ ನೋಡಿಕೊಂಡು ಉಗುಳಿದಂತೆ. ಇದು ಅವರ ಮುಖಕ್ಕೇ ಬಂದು ಬೀಳುತ್ತದೆ’ ಎಂದರು.

‘ನೆರೆ, ಬರ ಸಂಬಂಧ ಕೇಂದ್ರ ಸರ್ಕಾರ ಪರಿಹಾರ ಕೊಡುವುದಿಲ್ಲ. ಬದಲಾಗಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮೂಲಕ ಸಹಾಯಧನ ಸಿಗುತ್ತದೆ. ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿದ್ದು, ಸದ್ಯದಲ್ಲೇ ಸಹಾಯಧನ ಸಿಗಲಿದೆ’ ಎಂದರು.

ಅ. 5ರಂದು ಪ್ರತಿಭಟನೆ: ಪ್ರವಾಹ ಪರಿಹಾರ ತರುವಲ್ಲಿ ವಿಫಲರಾದ ರಾಜ್ಯದ ಸಂಸದರ ರಾಜೀನಾಮೆಗೆ ಆಗ್ರಹಿಸಿ, ಅ. 5ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಚಾಮರಾಜನಗರದಲ್ಲಿ ತಿಳಿಸಿದ್ದಾರೆ.

ಸಂಸದರ ಮನೆ ಮುಂದೆ ಧರಣಿ(ದಾವಣಗೆರೆ ವರದಿ): ‘ನೆರೆ ಹಾಗೂ ಬರ ನಿರ್ವಹಣೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ರಾಜ್ಯದ ನಾಲ್ವರು ಕೇಂದ್ರ ಸಚಿವರು, ಎಲ್ಲಾ ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಮನೆಗಳ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಂಗೇದ್ರ ತಿಳಿಸಿದರು.

‘ನೆರೆ ಹಾಗೂ ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ಹಣ ನೀಡದಿರುವುದನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ಟೋಬರ್‌ 14ರಂದು ಸಂತ್ರಸ್ತರ ಬಹಿರಂಗ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಸಂಸದರ ಮನೆಗಳ ಎದುರು ಧರಣಿ ನಡೆಸಲು ನಗರದಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಬೆಂಗಳೂರಿನ ಅಧಿವೇಶನದಲ್ಲೇ ದಿನಾಂಕವನ್ನು ಪ್ರಕಟಿಸಲಾಗುವುದು. ಮೂವರು ಉಪ ಮುಖ್ಯಮಂತ್ರಿಗಳ ಮನೆಗಳ ಮುಂದೆಯೂ ಪ್ರತಿಭಟಿಸಲಾಗುವುದು’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯಕ್ಕೆ ಬಂದು ನೆರೆ ಪರಿಸ್ಥಿತಿ ಅವಲೋಕಿಸಿದರೂ ಸಂತ್ರಸ್ತರಲ್ಲಿ ಆಸ್ಮಸ್ಥೈರ್ಯ ತುಂಬ
ಲಿಲ್ಲ. ಬಹುಶಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೇಲಿನ ದ್ವೇಷದಿಂದಲೇ ರಾಜ್ಯಕ್ಕೆ ಪರಿಹಾರ ಘೋಷಿಸುತ್ತಿಲ್ಲ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಬೇಕಾದರೆ ಕೆಳಗೆ ಇಳಿಸಿಕೊಳ್ಳಲಿ. ಕೇಂದ್ರ ಸರ್ಕಾರ ಮೊದಲು ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವ ಕೆಲಸ ಮಾಡಲಿ’ ಎಂದರು.

‘ರಾತ್ರಿ ಸಂಚಾರ ನಿಷೇಧ ತೆರವು ಸಾಧ್ಯವಿಲ್ಲ’

‘ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ಸಂಚಾರ ನಿಷೇಧ ಹೇರಿರುವ ಸಂಬಂಧದ ನ್ಯಾಯಾಲಯದ ಆದೇಶವನ್ನು ನಾವು ಮೀರುವಂತಿಲ್ಲ. ರಾತ್ರಿ ಸಂಚಾರಕ್ಕೆ ಅವಕಾಶ ಬೇಡ ಎಂಬ ನಿರ್ದೇಶನವಿದೆ. ಈ ವಿಚಾರ ರಾಹುಲ್‌ ಗಾಂಧಿ ಅವರಿಗೂ ಗೊತ್ತಿರಬೇಕು’ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಿಷೇಧ ತೆರವುಗೊಳಿಸಲು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ನಡೆಸಿರುವ ಪ್ರಯತ್ನ ಕುರಿತು ಈ ರೀತಿ ಪ್ರತಿಕ್ರಿಯಿಸಿದರು.

ಸ್ವಾಮೀಜಿಗಳ ದೂರವಾಣಿ ಕದ್ದಾಲಿಕೆ ಕುರಿತು, ‘ಈ ವಿಚಾರದಲ್ಲಿ ಸಿಬಿಐ ತನಿಖೆ ನಡೆಯುತ್ತಿದ್ದು, ಯಾರು ಯಾರ ದೂರವಾಣಿ ಕದ್ದಾಲಿಕೆ ಮಾಡಿದ್ದಾರೆ ಎಂಬ ಸತ್ಯ ಹೊರಕ್ಕೆ ಬರಲಿದೆ. ಸುತ್ತೂರು ಶ್ರೀಗಳ ದೂರವಾಣಿ ಕದ್ದಾಲಿಕೆ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು.

’ಪರಿಹಾರ ವಿಚಾರದಲ್ಲಿ ತಾಕತ್ತು ಪ್ರದರ್ಶನ ಬೇಡ‘

ಹಾವೇರಿ: ‘ನೆರೆ ಸಂತ್ರಸ್ತರಿಗೆ ಸದ್ಯದಲ್ಲೇ ಪರಿಹಾರ ಸಿಗಲಿದೆ. ಈ ವಿಚಾರದಲ್ಲಿ ತಾಕತ್ತಿನ ಪ್ರಶ್ನೆ ಬೇಡ. ಕೆಲಸ ಮಾಡಿ ತಾಕತ್ತು ತೋರಿಸಬೇಕು. ಇಲ್ಲದಿದ್ದರೆ ಜನ ತಮ್ಮ ತಾಕತ್ತು ತೋರಿಸುತ್ತಾರೆ’ ಎಂದು ಸಂಸದ ಶಿವಕುಮಾರ ಉದಾಸಿ ಪ್ರತಿಪಕ್ಷಗಳ ಮುಖಂಡರಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೊಲದಲ್ಲಿ ನೀರು ನಿಂತರೆ ಬೆಳೆ ಹಾನಿಗಷ್ಟೇ ಇಷ್ಟು ದಿನ ಪರಿಹಾರ ಸಿಗುತ್ತಿತ್ತು. ನೀರು ನಿಂತು ಹಾಳಾದ ಜಮೀನಿಗೆ ಪರಿಹಾರ ಕೊಡುತ್ತಿರಲಿಲ್ಲ.
ಈಗ ನನ್ನ ಸಲಹೆಯಿಂದ ಜಮೀನು ಸರಿ
ಮಾಡುವುದಕ್ಕೂ ಪರಿಹಾರ ನೀಡಲು ಸರ್ಕಾರ ಒಪ್ಪಿಕೊಂಡಿದೆ’ ಎಂದರು.

‘ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಪರಿಹಾರ ಬಿಡುಗಡೆ ಮಾಡುವ ಸಂಬಂಧ, 2–3 ದಿನಗಳಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಅದೇ ದಿನವೇ ಪರಿಹಾರ ಮೊತ್ತ ಘೋಷಿಸುವ ಸಾಧ್ಯತೆ ಇದೆ’ ಎಂದೂ ಹೇಳಿದರು.

ಅನುದಾನ ನೀಡದಿದ್ದರೆ ಕೇಂದ್ರದ ವಿರುದ್ಧ ಧ್ವನಿ: ಸಿ.ಟಿ.ರವಿ

ಚಿಕ್ಕಮಗಳೂರು: ‘ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರವು ಬೇರೆ ರಾಜ್ಯಕ್ಕೆ ಅನುದಾನ ನೀಡಿ, ಕರ್ನಾಟಕಕ್ಕೆ ನೀಡದಿದ್ದರೆ ಎಚ್‌.ಡಿ.ಕುಮಾರಸ್ವಾಮಿಗಿಂತ ಮುಂಚೆ ನಾವೇ ಧ್ವನಿ ಎತ್ತುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಲಮಿತಿಯೊಳಗೆ ಅನುದಾನ ನೀಡದಿದ್ದರೆ ಧ್ವನಿ ಎತ್ತುವುದು ಖಚಿತ. ಈ ವಿಚಾರದಲ್ಲಿ ಯಾವ ಭಯ, ಹಿಂಜರಿಕೆ ಇಲ್ಲ. ನಮಗೆ ಸಾಮರ್ಥ್ಯ ಸಾಲದಿದ್ದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನೂ ಕರೆದೊಯ್ಯುತ್ತೇವೆ’ ಎಂದು ಉತ್ತರಿಸಿದರು.

‘ಕೇಂದ್ರ ಬಿಜೆಪಿ ನಾಯಕರು ಕರ್ನಾಟಕವನ್ನು ಟಾರ್ಗೆಟ್‌ ಮಾಡಿದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ್‌ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅವರು ಒಳಬೇಗುದಿ ತೋಡಿಕೊಳ್ಳಲು ಈ ರೀತಿ ಹೇಳಿಕೆ ನೀಡಿರಬಹುದು. 10 ರಾಜ್ಯಗಳಲ್ಲಿ ಅತಿವೃಷ್ಟಿ ಹಾನಿ ಸಂಭವಿಸಿದೆ. ಯಾವ ರಾಜ್ಯಕ್ಕೂ ಅನುದಾನ ಬಿಡುಗಡೆ
ಯಾಗಿಲ್ಲ. ಟಾರ್ಗೆಟ್‌ ಮಾಡಿದ್ದಾರೆ ಎನ್ನುವುದು ಎಷ್ಟು ಸರಿ’ ಎಂದು ತಿವಿದರು.

‘ಮೈತ್ರಿಗಾಗಿ ಪ್ರಧಾನಿ ಟ್ವೀಟ್‌’

ಬೆಂಗಳೂರು: ’ಬಿಹಾರದಲ್ಲಿ ಮೈತ್ರಿ ಸರ್ಕಾರ ಇದೆ, ಮುಂದಿನ ಬಾರಿ ಬಿಜೆಪಿಯೇ ಬಹುಮತ ಪಡೆಯಬೇಕು ಎಂಬ ಕಾರಣಕ್ಕೆ ಬಿಹಾರದ ನೆರೆ ವಿಷಯದಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌. ಡಿ. ದೇವೇಗೌಡ ವಿಶ್ಲೇಷಿಸಿದ್ದಾರೆ.

‘ಮಹಾರಾಷ್ಟ್ರದಲ್ಲಿ ಸಂಪೂರ್ಣ ಬಿಜೆಪಿ ಸರ್ಕಾರ ಇದೆ, ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಈ ರಾಜ್ಯಗಳನ್ನು ಕಡೆಗಣಿಸಿದರೂ ನಡೆಯುತ್ತದೆ ಎಂಬ ಭಾವನೆ ಇರಬಹುದು, ಆದರೆ ಬಿಹಾರದಲ್ಲಿ ಹಾಗೆ ಮಾಡಿದರೆ ಕಷ್ಟ ಎಂಬ ಕಾರಣಕ್ಕೆ ಟ್ವೀಟ್ ಮಾಡಿ ಜನರ ವಿಶ್ವಾಸ ಗಳಿಸಲು ಯತ್ನಿಸಿದ್ದಾರೆ’ ಎಂದು ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)