ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾವ ಗೆಳೆಯರು ‘ತಟ್ಟಲ್ಲ’ ಹೇಳಿ’: ಸಚಿವ ಸಿ.ಟಿ.ರವಿ ಪ್ರಶ್ನೆ

ಕ್ಯಾಸಿನೊ– ಜೂಜು ಕೇಂದ್ರ ಆರಂಭ ವಿವಾದ
Last Updated 25 ಫೆಬ್ರುವರಿ 2020, 1:15 IST
ಅಕ್ಷರ ಗಾತ್ರ

ಬೆಂಗಳೂರು/ಚಿಕ್ಕಮಗಳೂರು/ಹಾಸನ: ‘ಯಾವ ಗೆಳೆಯರು ತಟ್ಟಲು (ಜೂಜು) ಹೋದರೆ ಮೂರು ದಿನಗಟ್ಟಲೇ ಹೊರಗೆ ಬರುತ್ತಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದರೆ, ‘ಕ್ಯಾಸಿನೊ ತೆರೆದು ಕರುನಾಡನ್ನು ಗೋವಾ ಮಾಡಲು ಹೊರಟಿದ್ದೇವೆಯೇ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದ್ದಾರೆ.

ಸಂಪುಟದ ಒಪ್ಪಿಗೆ ಪಡೆಯದೆ ಕ್ಯಾಸಿನೊ ತೆರೆಯಲು ಸಾಧ್ಯವಿಲ್ಲ ಎಂದು ಹಾಸನದಲ್ಲಿ ಸೋಮವಾರ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ‘ಟೀಕೆ ಮಾಡಿರುವ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆರೋಪ ಮಾಡುವವರು ಎಷ್ಟು ಸಾಚಾ ಎಂಬುದು ಆಗ ಗೊತ್ತಾಗುತ್ತದೆ’ ಎಂದು ಸಿದ್ದರಾಮಯ್ಯ ವಿರುದ್ಧವೇ ಕುಟುಕಿದ್ದಾರೆ.

‘ಸಂಭಾವಿತರು ಎಂದು ತೋರಿಸಿಕೊಳ್ಳುವವರು ಆಗಾಗ ಕ್ಯಾಸಿನೊ ಸಲುವಾಗಿ ಸಿಂಗಪುರಕ್ಕೆ ಹೋಗುತ್ತಾರೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಶನಿವಾರ, ಭಾನುವಾರ ಎಷ್ಟು ಅಧಿಕಾರಿಗಳು, ಶಾಸಕರು ಗೋವಾಗೆ ಹೋಗಿಬರುತ್ತಾರೆ? ಯಾರಿಗೆ ಎಷ್ಟು ಲಾಭವಾಯಿತು? ಎಂಬುದೇ ಮರುದಿನ ವಿಧಾನಸಭೆ ಮೊಗಸಾಲೆಯ ಚರ್ಚೆಯ ವಿಷಯ. ವಾಸ್ತವಿಕ ಸತ್ಯ ಹೇಳಿದ್ದೇನೆ’ ಮಾರ್ಮಿಕವಾಗಿ ನುಡಿದರು.

‘ಮಡಿವಂತಿಕೆ ಇಟ್ಟುಕೊಂಡು ವ್ಯಾಪಾರ ಮಾಡಲಾಗದು. ಮಡಿವಂತರು ಎಂದು ಹೇಳಿಕೊಳ್ಳುವವರ ಬದುಕು ಒಂದು ರೀತಿ, ಮಾತೊಂದು ರೀತಿ ಇರಬಾರದು’ ಎಂದು ಚುಚ್ಚಿದರು.

‘ಕ್ಯಾಸಿನೊ ಇರುವ ಕಡೆಗಳಲ್ಲಿ ಸ್ಥಳೀಯರಿಗೆ ಪ್ರವೇಶ ಅವಕಾಶ ಇರುವುದಿಲ್ಲ. ದುಡ್ಡು ಖರ್ಚು ಮಾಡಲು ಬರುವ ಪ್ರವಾಸಿಗರಿಗೆ ಕೆಲವೆಡೆ ದಾರಿ ಮಾಡಿಕೊಟ್ಟಿದ್ದಾರೆ. ಆ ಮೂಲಕ ಲಾಭ ಗಳಿಸುತ್ತಾರೆ. ಚರ್ಚೆಯ ವಿಷಯವಾಗಿ ಈ ಅಂಶ ಪ್ರಸ್ತಾಪಿಸಿದ್ದೆ. ರಾಜ್ಯದಲ್ಲಿ ಕ್ಯಾಸಿನೊ ಶುರು ಮಾಡುತ್ತೇವೆ ಎಂದು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜೂಜು ಯಾವ ‘ಸಂಸ್ಕೃತಿ’: ಸಿದ್ದರಾಮಯ್ಯ ಟೀಕೆ

ಬೆಂಗಳೂರು:ಭಾರತೀಯ ಸಂಸ್ಕೃತಿ, ಸಂಸ್ಕಾರ ರಕ್ಷಣೆಗಾಗಿಯೇ ಹುಟ್ಟಿದವರಂತೆ ಮಾತನಾಡುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಜೂಜಾಟ ಯಾವ ‘ಸಂಸ್ಕೃತಿ’ ಎನ್ನುವುದನ್ನು ಜನತೆಗೆ ತಿಳಿಸಬೇಕು ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕ್ಯಾಸಿನೊ ಮೂಲಕ ಜೂಜಾಟದ ದುರ್ವ್ಯಸನ ಬೆಳೆಸಲು ಸರ್ಕಾರ ಮುಂದಾಗಿದ್ದು, ಆರ್ಥಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ದಿವಾಳಿಯಾಗಿದೆ ಎಂದು ಟೀಕಿಸಿದ್ದಾರೆ.

ಪ್ರವಾಸೋದ್ಯಮ ಉತ್ತೇಜಿಸುವುದು, ವಿದೇಶಿ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಜೂಜು ಮಾದರಿಯ ಕ್ಯಾಸಿನೊ ಕೇಂದ್ರಗಳನ್ನು ತೆರೆಯುವ ಬಗ್ಗೆ ಚಿಂತಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದರು.

ಇದಕ್ಕೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರವಾಸೋದ್ಯಮ ಅಭಿವೃದ್ಧಿಗೆ ಅಗಾಧವಾದ ಅವಕಾಶಗಳಿವೆ. ಆ ಬಗ್ಗೆ ಯೋಚನೆ ಮಾಡದೆ ಕ್ಯಾಸಿನೊ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT