ಮಂಗಳವಾರ, ಆಗಸ್ಟ್ 20, 2019
24 °C

Live | ಸೋಮವಾರಕ್ಕೆ ಕಲಾಪ ಮುಂದೂಡಿದ ಸ್ಪೀಕರ್‌

Published:
Updated:

ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ರಾಜ್ಯ ರಾಜಕಾರಣ ವಿದ್ಯಮಾನಕ್ಕೆ ‘ಶುಕ್ರವಾರ (ಇಂದು) ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಸಾಬೀತುಪಡಿಸಿ’ ಎಂದು ರಾಜ್ಯಪಾಲರು ವಿಧಿಸಿರುವ ಗಡುವು ಮುಕ್ತಾಯವಾಗಿದೆ. ಆದರೆ, ನಿಯಮಗಳನ್ನು ತಪ್ಪಿ ಪ್ರಸ್ತಾಪವನ್ನು ಮತಕ್ಕೆ ಹಾಕಲು ಸಧ್ಯವಾಗದು ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು. ರಾಜ್ಯಪಾಲರು ಎರಡನೇ ಸಲ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿರ್ದೇಶನ ಕಳುಹಿಸಿದರು. ಆದರೆ, ಕಾಂಗ್ರೆಸ್‌–ಜೆಡಿಎಸ್‌ ಶಾಸಕರು ಹಲವು ಮಾತಿಗೆ ಅವಕಾಶ ಕೋರಿದ ಕಾರಣ, ವಿಶ್ವಾಸಮತ ಪ್ರಕ್ರಿಯೆ ಶುಕ್ರವಾರ ಸಹ ಪೂರ್ಣಗೊಳ್ಳಲಿಲ್ಲ. ಸದನ ಮುಂದುವರಿಯಲು ಎಂದು ಬಿಜೆಪಿ ಮಾಡಿದ ಒತ್ತಾಯದ ನಡುವೆಯೂ ಅಂತಿಮವಾಗಿ ಸ್ಪೀಕರ್‌ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. 

ದೇಶದ ಗಮನ ಸೆಳೆದಿರುವ ರಾಜ್ಯ ರಾಜಕಾರಣದ ತಾಜಾ ಮಾಹಿತಿ ಇಲ್ಲಿದೆ..

8.31: ಬಿಜೆಪಿ ಶಾಸಕರು ಇಂದೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಲು ಒತ್ತಾಯಿಸಿದರು, ಸಿದ್ದರಾಮಯ್ಯ ಅವರು ಸೋಮವಾರಕ್ಕೆ ಎಲ್ಲಕ್ಕೂ ತೆರೆ ಬೀಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಸ್ಪೀಕರ್‌ ಸೋಮವಾರಕ್ಕೆ ಕಲಾಪ ಮುಂದೂಡಿದರು. 

8.28: ಸೋಮವಾರ ವಿಶ್ವಾಸಮತ ಸೇರಿ ಎಲ್ಲದಕ್ಕೂ ತೆರೆ– ಸಿದ್ದರಾಮಯ್ಯ

7.30: ಕಲಾಪ ಸೋಮವಾರಕ್ಕೆ ಮುಂದೂಡುವಂತೆ ಕಾಂಗ್ರೆಸ್‌–ಜೆಡಿಎಸ್‌ ಶಾಸಕರ ಒತ್ತಾಯ, ಸದನದಲ್ಲಿ ಗದ್ದಲ. 

7.00: ರಾತ್ರಿ 11:30 ಆದರೂ ಸರಿಯೇ ನಾವು ಇರಲು ಸಿದ್ಧ. ಇಂದೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳ್ಳಲಿ – ಬಿ.ಎಸ್‌.ಯಡಿಯೂರಪ್ಪ

6.25: ಇಂದು ಸಂಜೆ 7:30ರ ವರೆಗೂ ಕಲಾಪ ಮುಂದುವರಿಸಲಾಗುತ್ತದೆ. ಅಲ್ಲಿಗೆ ಚರ್ಚೆ ಮುಕ್ತಾಯಗೊಳಿಸಲಾಗುತ್ತದೆ ಎಂದು ಸದನಕ್ಕೆ ತಿಳಿಸಿದ ಸ್ಪೀಕರ್‌.

6.20: ವಿಶ್ವಾಸಮತ ಯಾಚನೆ ಸೋಮವಾರ ಮುಗಿಸಬಹುದು– ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 

6.08: ಚರ್ಚೆಯ ಗರಿಷ್ಠ ಕೇಳಿದ ಸ್ಪೀಕರ್‌; ಕಲಾಪ ಮುಂದೂಡುವಂತೆ ಕಾಂಗ್ರೆಸ್‌–ಜೆಡಿಎಸ್‌ನ ಕೆಲವು ಶಾಸಕರ ಒತ್ತಾಯ. ಚರ್ಚೆ ಮುಂದುವರಿಸಲು ಕೃಷ್ಣಬೈರೇಗೌಡ ಒತ್ತಾಯ. ‘ಎಷ್ಟೇ ಸಮಯ ಆದರೂ ಕೂರುವೆವು’ ಎಂದು ಬಿಜೆಪಿ ಮುಖಂಡರ ಅಭಿಪ್ರಾಯ. 

06.00: ಒಂದು ಗಂಟೆಗೂ ಹೆಚ್ಚು ಸಮಯ ಶಾಸಕ ಶಿವಲಿಂಗೇಗೌಡ ಮಾತು

ಶಿವಲಿಂಗೇಗೌಡರ ಮಾತು...​

05. 25–15 ಜನ ಶಾಸಕರನ್ನು ಆಸ್ಪತ್ರೆಯಲ್ಲಿ ಮಲಗಿಸಿ 1 ತಿಂಗಳವರೆಗೆ ಸರ್ಟಿಫಿಕೆಟ್‌ ಕೊಡಿಸಬೇಕಿತ್ತು. 

05. 21– ಕಾನೂನು ವಿರುದ್ಧವಾಗಿ ನಡೆದುಕೊಂಡವರು ನೀವು, ಪಕ್ಷೇತರ ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದರು. ನೀವು ಅವರನ್ನು ಅನರ್ಹತೆ ಮಾಡಲಿಲ್ವೇ? ಎಂದು ಪ್ರಶ್ನೆ ಮಾಡಿದರು. 

05. 11– ಶಾಸಕರನ್ನು ಖರೀದಿಸುವ ಪ್ರಕ್ರಿಯೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ಅಭಿಪ್ರಾಯವನ್ನು ಶಾಸಕ ಶಿವಲಿಂಗೇಗೌಡ ವ್ಯಕ್ತಪಡಿಸಿದರು.

04. 45– ಕಲಾಪ‍ದಲ್ಲಿ ಸದಸ್ಯರಿಗೆ ಮಾತನಾಡಲು ಸಭಾಧ್ಯಕ್ಷರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಶಾಸಕ ಶಿವಲಿಂಗೇಗೌಡ ಮಾತನಾಡುತ್ತಿದ್ದಾರೆ. 

ಕುಮಾರಸ್ವಾಮಿ ಭಾಷಣ ಮುಕ್ತಾಯ

04. 41– ಒಂದು ವರ್ಷ ನನ್ನ ಕಾಲಾವಧಿಯಲ್ಲಿ ನನಗೆ ಕೆಲಸ ಮಾಡಲು ಬಿಡಲಿಲ್ಲ, ಸರ್ಕಾರವನ್ನು ಬಿಳಿಸಲು 7 ಸಲ ಪ್ರಯತ್ನ ಮಾಡಿದ್ದಾರೆ. ಅಭಿವೃದ್ಧಿ ವಿಷಯಗಳ ಕುರಿತಂತೆ ಸದನದಲ್ಲಿ ಇನ್ನು ಚರ್ಚೆಯಾಗಬೇಕು. ರಾಜ್ಯದಲ್ಲಿ ಸರ್ಕಾರ ಇರುತ್ತೊ ಅಥವಾ ಬಿದ್ದು ಹೋಗುತ್ತೊ ಎಂಬುದು ನನಗೆ ತಿಳಿದಿಲ್ಲ, ಅಥವಾ ರಾಷ್ಟ್ರಪತಿ ಆಡಳಿತ ಬರುತ್ತೊ ಎಂಬುದು ನನಗೆ ಗೊತ್ತಿಲ್ಲ. ರಾಜ್ಯಪಾಲರು ಮತ್ತೆ ಸಂದೇಶ ಕಳುಹಿಸಿದ್ದಾರೆ ಈ ದಿನದ ಒಳಗಾಗಿ ಬಹುಮತ ಸಾಬೀತು ಮಾಡಿ ಎಂದು. ಈ ಬಗ್ಗೆ ಸಭಾಧ್ಯಕ್ಷರು ನನಗೆ ರಕ್ಷಣೆ ಕೊಡಬೇಕು ಎಂದು ಮುಖ್ಯಮಂತ್ರಿಗಳು ಸ್ಪೀಕರ್‌ ಅವರನ್ನು ಕೋರುವ ಮೂಲಕ ತಮ್ಮ ವಿಶ್ವಾಸಮತ ಯಾಚನೆ ಕುರಿತ ಭಾಷಣವನ್ನು ಮುಕ್ತಾಯ ಮಾಡಿದರು. 

04. 09–ಈ ಸರ್ಕಾರ ಬರ ಪರಿಸ್ಥಿತಿಯಲ್ಲೂ ಕೆಲಸ ಮಾಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದರು. ಈಗ ಯಾಕೆ ಸದನದಲ್ಲಿ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. 

03. 46–ವಿಶ್ವಾಸಮತ ಯಾಚನೆಗೆ ಯಾಕೆ ಆತುರ ಯಾಕೆ ಎಂದು ದಿನೇಶ್‌ ಗುಂಡೂರಾವ್‌ ವಿಧಾನಸಭೆಯಲ್ಲಿ ಹೇಳಿದರು.

03. 16– ಸಂಜೆ 6 ಗಂಟೆಯ ಒಳಗೆ ವಿಶ್ವಾಸಮತ ಯಾಚನೆ ಮಾಡಿ ಎಂದು ರಾಜ್ಯಪಾಲರು ಮುಖ್ಯಮಂತ್ರಿ ಕುಮಾರಸ್ವಾಮಿಗೆ  ಮರುಜ್ಞಾಪನಾ ಪತ್ರ ನೀಡಿದ್ದಾರೆ. 

03. 16– ಮತ್ತೆ ವಿಧಾನಸಬೆ ಕಲಾಪ ಆರಂಭ​

01. 35– ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಂದ ಭಾರಿ ಗದ್ದಲ. ಕಲಾಪವನ್ನು 3 ಗಂಟೆಗೆ ಮುಂದೂಡಿದ ಸಭಾಧ್ಯಕ್ಷರು.

01. 30– ವಿಶ್ವಾಸಮತ ಪ್ರಸ್ತಾಪವನ್ನು ಮತಕ್ಕೆ ಹಾಕಲು ರಾಜ್ಯಪಾಲರು ನೀಡಿದ್ದ ಗಡುವು ಮುಕ್ತಾಯ. ನಿಯಮ ತಪ್ಪಿ ನಡೆಯಲ್ಲ ಎಂದ ಸಭಾಧ್ಯಕ್ಷ ರಮೇಶ್ ಕುಮಾರ್

01. 17–  ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಪ್ರಸ್ತಾಪವನ್ನು ಮತಕ್ಕೆ ಹಾಕದಿದ್ದರೆ ರಾಜ್ಯಪಾಲರನ್ನು ಮತ್ತೊಮ್ಮೆ ಭೇಟಿಯಾಗಲು ಬಿಜೆಪಿ ನಿರ್ಧರಿಸಿದೆ. ರಾಜ್ಯಪಾಲರ ಕಚೇರಿ ಅಧಿಕಾರಿಗಳು ಇಂದು ಅಧಿಕಾರಿಗಳ ಗ್ಯಾಲರಿಯಲ್ಲಿ ಕುಳಿತಿದ್ದು, ಕಲಾಪದ ವಿವರಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

01. 17– ಕೃಷ್ಣ ಬೈರೇಗೌಡರು ಮತ್ತೆ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖ ಮಾಡಿದರು. ಬೊಮ್ಮಾಯಿ ತೀರ್ಪು ಮೇರೆಗೆ ಮುಖ್ಯಮಂತ್ರಿ ಮಂಡಿಸಿದ ವಿಶ್ವಾಸ ಮತ ಇದಲ್ಲ, ಇದು ಸ್ವಯಂ ಪ್ರೇರಣೆಯಿಂದ ಮಂಡಿಸಿದ ವಿಶ್ವಾಸ ಮತ. ರಾಜ್ಯಪಾಲರು ತಮ್ಮ ಕಾನೂನು ಚೌಕಟ್ಟು ಮೀರಿ ವರ್ತಿಸಬಾರದು ಎಂದು ಸಂವಿಧಾನ ಪೀಠ ಹೇಳಿದೆ ಎಂದು ಬೈರೇಗೌಡರು.

01. 09– ಕೃಷ್ಣಬೈರೆಗೌಡ ಸದನದಲ್ಲಿ ಮಧ್ಯಪ್ರವೇಶ ಮಾತನಾಡಿದರು. ಎಲ್ಲಾ ಸಂದರ್ಭಗಳಲ್ಲೂ ರಾಜ್ಯಪಾಲರು ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಸಂವಿಧಾನ ಪೀಠ ಹೇಳಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಚರ್ಚೆ ಮುಂದುವರಿಕೆ...

12. 57– ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯಪಾಲರ ಹಸ್ತಕ್ಷೇಪ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಓದಿ ಹೇಳಿದರು. ಸಚಿವ ಕೃಷ್ಣ ಬೈರೇಗೌಡ ಇದನ್ನು ಸಮರ್ಥನೆ ಮಾಡಿಕೊಂಡರು. 

12. 48– ರಾಜ್ಯಪಾಲರ ನಿರ್ದೇಶನದ ಬಗ್ಗೆ ಪ್ರಸ್ತಾವನೆ ಮೇಲೆ ಕುಮಾರಸ್ವಾಮಿ ಮಾತನಾಡಿದರು.

ಕೆಲ ಹೊತ್ತು ಸದನದಲ್ಲಿ ಗದ್ದಲ, ಕೃಷ್ಣಬೈರೆಗೌಡ, ಸಾ.ರಾ.ಮಹೇಶ್‌ ಮಾತನಾಡಿದರು. ನಂತರ ಸಭಾನಾಯಕರಿಗೆ ಮಾತನಾಡಲು ಸ್ಪೀಕರ್ ಅವಕಾಶ ಮಾಡಿಕೊಟ್ಟರು.

12.16– ಮುಂಬೈನಲ್ಲಿರುವವರನ್ನು ಕರೆದುಕೊಂಡೇ ಸರ್ಕಾರ ಮಾಡಿ. ಆಟೋರೀತಿ ವಿಮಾನ ಓಡಾಡಿಸಿದ್ದೀರಿ. ಮುಂದೆ ನಿಮಗೆ(ಬಿಜೆಪಿ) ಕಾದಿದೆ.

12.14– ಶೆಡ್ಯೂಲ್‌ 10 ಬಗ್ಗೆ ನಿನ್ನೆ ಪ್ರಸ್ತಾಪ ಆಗಿದೆ. ಇಲ್ಲಿ ಎಲ್ಲವೂ ವಿಸ್ತ್ರತ ಚರ್ಚೆ ಆಗಬೇಕು. ಬಿಜೆಪಿಯವರಿಗೆ ಆತುರ ಏಕೆ. ವಾಜಪೇಯಿ ವಿಶ್ವಾಸ ಮತ ಮಂಡಿಸುವಾಗ 10 ದಿನ ಕಲಾಪ ನಡೆದಿಲ್ಲವೇ ಎಂದರು.

12.08– ಅಂಬೇಡ್ಕರ್ ಅವರ ಸಂವಿಧಾನವನ್ನು ರಕ್ಷಣೆ ಮಾಡಲು ನಾವು ಇಲ್ಲಿ ಕುಳಿತಿದ್ದೇವೆ. ರಾಷ್ಟ್ರದ ಅಭಿವೃದ್ಧಿಗಾಗಿ ಅವರು ಹಲವಾರು ತಿದ್ದುಪಡಿಗಳನ್ನು ಮಾಡಿದ್ದಾರೆ. 

12.05– ಹಿಂದೂ ಸಂಸ್ಕೃತಿ, ರಾಮನ ಬಗ್ಗೆ ಮಾತನಾಡುವ ನೀವು, ರಾಮನ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದಿರಿ. ನಾವು ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುತ್ತೇವೆ. ಮಾಟ ಮಂತ್ರದಿಂದ ಸರ್ಕಾರ ರಚನೆ ಮತ್ತು ಅಧಿಕಾರ ಪಡೆಯಲು ಸಾಧ್ಯವಿಲ್ಲ. ಹಾಗಿದ್ದರೆ ನಾವು ಮನೆಯಲ್ಲಿ ಕುಳಿತು ಮಾಟ ಮಂತ್ರದಿಂದಲೇ ಪಡೆಯ ಬಹುದಿತ್ತು. ಜನರ ಬಳಿಗೆ ಹೋಗಬೇಕಿರಲಿಲ್ಲ ಎಂದು  ಹಳೆಯ ದಾಖಲೆಗಳನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಸಿಎಂ ವಾಗ್ದಳಿ ನಡೆಸಿದರು.

12.00– ರೇವಣ್ಣ ದೇವಸ್ಥಾನಕ್ಕೆ ಹೋಗುತ್ತಾರೆ‌ ಆದರೆ ಮಾಟ ಮಂತ್ರ ಮಾಡಿಸುವುದಿಲ್ಲ.

11.57– 1984ರಲ್ಲಿ ರಾಜೀವ್ ಗಾಂಧಿ ಮೇಲೆ ಬೊಫೋರ್ಸ್ ಹಗರಣ ಬಂತು. ಆಮೇಲೆ ಏನೆಲ್ಲ ಆಯಿತು. ನನಗೆ ಕುರ್ಚಿ ಮುಖ್ಯ ಅಲ್ಲ. ನನ್ನ ಕುಟುಂಬದವರು ಪಂಚಾಯಿತಿಯಿಂದ ಪ್ರಧಾನಿ ಸ್ಥಾನದವರೆಗೂ ನೋಡಿ ಬಂದಿದ್ದೇವೆ.

11.55– ಇದು ದೇವರು ಕೊಟ್ಟಿರುವ ಪದವಿ. ಇದು ಹೋಗುತ್ತೆ ಎನ್ನುವ ಯಾವ ಆತಂಕವೂ ನನಗಿಲ್ಲ. ನಮ್ಮ ಕುಟುಂಬ ಎಂದಿಗೂ ಅಧಿಕಾರಕ್ಕಾಗಿ ಬಾಗಿಲ್ಲ. ಮೂರು ದಿನಗಳಲ್ಲಿ ನಿಮಗೆ ಬಹುಮತ ಬಂದ್ರೆ ನೀವು ಎಷ್ಟು ದಿನ ಅಧಿಕಾರ ಮಾಡ್ತೀರೀ ಅಂತ ನಾನೂ ನೋಡ್ತೀನಿ.

11.50– ರೇಣುಕಾಚಾರ್ಯ ಯಡಿಯೂರಪ್ಪ ಬಗ್ಗೆ ಹಿಂದೆ ಏನೇನು ಹೇಳಿದ್ದರು ಎಂದು ನಾನು ಮತ್ತೆ ಹೇಳುವುದಿಲ್ಲ. ಹಿಂದೆ ಯಡಿಯೂರಪ್ಪ ಅನುಭವಿಸಿದ ಸ್ಥಿತಿ ಈಗ ನನಗೂ ಆಗಿದೆ.

11.45– ಬೇರೆ ರಾಜ್ಯದ ಬಗ್ಗೆ ನಾನು ಮಾತನಾಡಲ್ಲ

ಪಕ್ಷಾಂತರ ಎಲ್ಲಿಯೂ ನಡೆಯಬಾರದು. ಬೇರೆ ರಾಜ್ಯದ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಹಿಂದೆ ಆಡಳಿತ ಪಕ್ಷದ ಶಾಸಕರನ್ನು ಪಕ್ಷಾಂತರ ಮಾಡಿಸಿದ್ದಿಲ್ಲ. ಉಳಿದಂತೆ ಪಕ್ಷಾಂತರಗಳು, ಉಪಚುನಾವಣೆಗಳೂ ನಡೆದಿದ್ದವು.

ಆದರೆ ಚರ್ಚೆ ನಡೆಯದೆ ವಿಶ್ವಾಸಮತ ವನ್ನು ಸಾಬೀತುಪಡಿಸುವುದು ಸರಿಯಲ್ಲ.

11.41– ಮುಗಿದು ಹೋದ ಅಧ್ಯಾಯದ ನೆನಪು ಇನ್ನೇಕೆ

ಹಿಂದೆ ಏನಾಯಿತು ಎಂಬುದು ಈಗ ಮುಗಿದು ಹೋದ ಅಧ್ಯಾಯ. ಹಿಂದೆ ಬಿಜೆಪಿ-ಜೆಡಿಎಸ್  ಸರ್ಕಾರ ರಚನೆಯಾದಾಗ ನನ್ನ ಅಧಿಕಾರ ಅವಧಿಯ ಕೌಂಟ್‌ಡೌನ್ ನಡೆಯುತ್ತಿತ್ತು. ಅಧಿಕಾರ ಹಸ್ತಾಂತರ ವಿಷಯ ಅಂದು ಕೇಂದ್ರ ನಾಯಕರ ನಿರ್ಧಾರವಾಗಿತ್ತು. ನಾನು ನಿಜಕ್ಕೂ ಅಧಿಕಾರ ಹಸ್ತಾಂತರ ಮಾಡಬೇಕು ಎಂದೇ ಇದ್ದೆ. ಅಂದು ಏನಾಯಿತೋ ಅದು ಮುಗಿದು ಹೋದ ಅಧ್ಯಾಯ.

ಅಮೆರಿಕಕ್ಕೆ ತೆರಳಿದಾಗ ಬೈಬಲ್ ಓದುವ ಅವಕಾಶ ಸಿಕ್ಕಿತ್ತು. ನಾವು ಪಾಲಿಸಿದ ಸತ್ಯ ಧರ್ಮಗಳೇ ನಮ್ಮನ್ನು ಕಾಪಾಡುತ್ತವೆ ಎಂದು ಅದರಲ್ಲಿ ಇತ್ತು. ‘ಅಪ್ಪ ಮಕ್ಕಳು’ ಎಂದು ನಮ್ಮನ್ನು ಟೀಕಿಸುತ್ತೀರಿ. ಈ ಹಿಂದೆ ಒಮ್ಮೆ ದೇವೇಗೌಡರು ಸಮ್ಮಿಶ್ರ ಸರ್ಕಾರ ಸರಿ ಹೋಗುತ್ತಿಲ್ಲ. ಚುನಾವಣೆಗೆ ಹೋಗುವುದೇ ಸೂಕ್ತ ಎಂದಿದ್ದರು.

11.10– ವಿಧಾನಸಭೆ ಕಲಾಪ ಆರಂಭ, ಸ್ಪೀಕರ್ ಅವರಿಂದ ಚರ್ಚೆ ಮುಂದುವರೆಸಲು ಸೂಚನೆ

ಸ್ಪೀಕರ್‌ ಅವರು ಮತದಾನ ವಿಳಂಬ ಮಾಡುತ್ತಿದ್ದೇನೆ ಎಂದು ಹೇಳುವವರ ಮೇಲೆ ನನಗೆ ಅನುಕಂಪ ಇದೆ. ಅಜೆಂಡಾವನ್ನು ಎಲ್ಲಾ ಸದಸ್ಯರಿಗೆ ಕಳುಹಿಸಿಕೊಟ್ಟಿದ್ದೇನೆ. ಎಲ್ಲಾರು ನೀಟಾಗಿ ಓದಿಕೊಳ್ಳಿ. ಈಗ ಚರ್ಚೆ ಮುಂದುವರೆಸಲಾಗುವುದು. ಸಭಾನಾಯಕರು ವಿಶ್ವಾಸಮತ ಯಾಚನೆ ಮೇಲಿನ ಚರ್ಚೆಯನ್ನು ಮುಂದುವರೆಸಬೇಕು.

ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಗೆ ಮತ್ತು ಸರ್ಕಾರ ನೀಡುವ ಉತ್ತರಕ್ಕೆ ಮಾತ್ರ ಸೀಮಿತಗೊಳಿಸಲಾಗುವುದು. ಡಿ.ಕೆ.ಶಿವಕುಮಾರ್ ಹಕ್ಕುಚ್ಯುತಿ ಮಂಡಿಸಬೇಕು ಎಂದು ಕೋರಿದರು. ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

11.05– ಈ ಶಾಸಕರು ಸದನಕ್ಕೆ ಇನ್ನೂ ಬಂದಿಲ್ಲ...

ಕಾಂಗ್ರೆಸ್‌ ಶಾಸಕರಾದ ಶ್ರೀಮಂತ ಪಾಟೀಲ್, ಬಿ.ನಾಗೇಂದ್ರ, ಪಕ್ಷೇತರ ಶಾಸಕರಾದ ನಾಗೇಶ್‌ ಮತ್ತು ಶಂಕರ್ ಸದನಕ್ಕೆ ಇನ್ನೂ ಬಂದಿಲ್ಲ. ಬಿಎಸ್‌ಪಿ ಶಾಸಕರಾದ ಎನ್‌.ಮಹೇಶ್ ಮತ್ತು 15 ಮಂದಿ ಅತೃಪ್ತರು ಸದನಕ್ಕೆ ಗೈರುಹಾಜರಾಗಿದ್ದಾರೆ.

11.00– ವಿಧಾನಸಭೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿದರು.

10.50– ಮೈತ್ರಿ ಸರ್ಕಾರದ ಆಡಳಿತ ಇಂದೇ ಕೊನೆ: ಯಡಿಯೂರಪ್ಪ

‘ವಿಶ್ವಾಸಮತ ನಿರ್ಣಯದ ಮೇಲೆ ಇಂದು ಮತ ವಿಭಜನೆ ನಡೆಯಲಿದೆ ಎಂದು ಎಲ್ಲ ಶಾಸಕರಿಗೂ ಸಂದೇಶ ಕಳುಹಿಸಲಾಗಿದೆ. ಬಿಜೆಪಿ ಸದಸ್ಯರ ಬಲ 105 ಇದ್ದು, ಮೈತ್ರಿ ಸರ್ಕಾರದ ಸದಸ್ಯರ ಬಲ 98ಕ್ಕೆ ಇಳಿದಿದೆ. ದೇವರ ದಯದಿಂದ ನೂರಕ್ಕೆ ನೂರು ವಿಶ್ವಾಸ ಮತಕ್ಕೆ ಹಿನ್ನಡೆಯಾಗಲಿದೆ. ಬಹುಶಃ ಇಂದೇ ಮೈತ್ರಿ ಸರ್ಕಾರದ ಆಡಳಿತ ಕೊನೆಗೊಳ್ಳಲಿರುವುದಾಗಿ ಭಾವಿಸಿದ್ದೇನೆ’ ಎಂದು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.


ವೇಣುಗೋಪಾಲ್

10.45– ರಾಜ್ಯಪಾಲರ ವರ್ತನೆ ಬಿಜೆಪಿ ಏಜೆಂಟ್‌ ಥರ ಇದೆ: ವೇಣುಗೋಪಾಲ್

‘ಕರ್ನಾಟಕದ ರಾಜ್ಯಪಾಲರು ಬಿಜೆಪಿ ಎಜೆಂಟ್‌ ಥರ ವರ್ತಿಸ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅವರು ಬರೆದಿರುವ ಪತ್ರದ ಬಗ್ಗೆ ನಾವೂ ಕಾನೂನು ಸಲಹೆ ತೆಗೆದುಕೊಳ್ತೀವಿ. ರಾಜ್ಯಪಾಲರಿಗೆ ಆ ಅಧಿಕಾರವಿಲ್ಲ. ಕುಮಾರಸ್ವಾಮಿ ಅವರು ಸದನದಲ್ಲಿ ಮೊದಲ ಬಾರಿಗೆ ವಿಶ್ವಾಸಮತ ಕೇಳುವ ವಿಚಾರ ಪ್ರಸ್ತಾಪಿಸಿದಾಗ ಇದ್ದ ಪರಿಸ್ಥಿತಿಗೂ, ಈಗ ಇರುವ ಪರಿಸ್ಥಿತಿಗೂ ವ್ಯತ್ಯಾಸವಿದೆ. ಸುಪ್ರೀಂಕೋರ್ಟ್‌ ತೀರ್ಪಿನ ಕಾರಣ ವಿಪ್ ಜಾರಿ ಬಗ್ಗೆ ಗೊಂದಲ ಉಂಟಾಗಿದೆ’ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಪ್ರತಿಕ್ರಿಯಿಸಿದರು.

10.40– ವಿಧಾನಸೌಧದತ್ತ ಹೊರಟ ಕಾಂಗ್ರೆಸ್ ಶಾಸಕರು

ವಿಧಾನಸೌಧದತ್ತ ಬಿಜೆಪಿ ಶಾಸಕರು ಹೊರಟಿದ್ದಾರೆ. ‘ಬಿಜೆಪಿ ಶಾಸಕರನ್ನು ಹೆದರಿಸಿ ಬಿಜೆಪಿ ತನ್ನತ್ತ ಸೆಳೆದಿದೆ. ಜನಪ್ರತಿನಿಧಿಗಳ ಬಗ್ಗೆ ಜನರು ಅಸಹ್ಯಪ್ಟುಕೊಳ್ತಿದ್ದಾರೆ. ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ತಿದೆ. ಇಡಿ–ಆದಾಯ ತೆರಿಗೆ ಇಲಾಖೆಗಳ ದುರುಪಯೋಗವಾಗ್ತಿದೆ’. –ಈಶ್ವರಖಂಡ್ರೆ ಆರೋಪ

10.30– ಮುಂದೆ ಎಲ್ಲಿಯೇ ಹೀಗೆ ಆದರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆ ಮಾಡ್ತೀವಿ: ಜೆಡಿಎಸ್ ನಾಯಕ ವೈ.ಎಸ್‌.ವಿ.ದತ್ತ ಹೇಳಿಕ

10.13– ಹಿನ್ನೆಲೆಗೆ ತಕ್ಕಂತೆ ಮಾತಾಡ್ತಾರೆ: ಬಿಜೆಪಿ ನಾಯಕರ ಮಾತಿಗೆ ಸ್ಪೀಕರ್ ಪ್ರತಿಕ್ರಿಯೆ

ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್‌ಕುಮಾರ್, ‘11ಕ್ಕೆ ಅಧಿವೇಶನ ಇದೆ. ನಾನು ಇಲ್ಲಿ ಏನೂ ಹೇಳಬಾರದು. ಎಲ್ಲದಕ್ಕೂ ಅಲ್ಲಿಯೇ ಉತ್ತರ ಸಿಗುತ್ತೆ’ ಎಂದರು.

ಸ್ಪೀಕರ್ ನಿಲುವನ್ನು ಬಿಜೆಪಿ ನಾಯಕ ಈಶ್ವರಪ್ಪ ಟೀಕಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ವ್ಯಕ್ತಿಗಳ ಅವರ ಹಿನ್ನೆಲೆ ಮತ್ತು ನಡತೆಗೆ ಅನುಗುಣವಾಗಿ ಮಾತಾಡ್ತಾರೆ. ಅವರಿಗೆ ಧನ್ಯವಾದಗಳು. ನನಗೆ ಮನಸ್ಸು ನೋವಾಗಿರಬಹುದು. ಯಾರಾರು ಹೆಗೆ ಬೇಳೆದು ಬಂದಿದ್ದರಾರೆ. ಹಾಗೆ ಮಾತಾಡ್ತಾರೆ. ಯಾರೂ ಏನೂ ಮಾಡೋಕೆ ಅಗಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶೋಭಾ ಕರಂದ್ಲಾಜೆ ಟೀಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಆಕೆ ಓರ್ವ ಹಿರಿಯ ರಾಜಕಾರಿಣಿ, ಸಂಸದೆ, ಹೆಣ್ಣುಮಗಳು. ಎಲ್ಲರಿಗೂ ಸಾರ್ವಜನಿಕ ಜೀವನದಲ್ಲಿ ಇರಲು ಅವಕಾಶವಿದೆ. ಹೊರಗೆ ಜನ ಇದ್ದಾರೆ ಅನ್ನುವ ಭಯ ನಮಗೆ ಇರಬೇಕು. ಇಲ್ಲದಿದ್ದರೆ ಹತೋಟಿ ಇರಲ್ಲ. ಅವರ ಮಾತುಗಳಿಗೆಲ್ಲಾ ಧನ್ಯವಾದ ಅರ್ಪಿಸುತ್ತೇನೆ ಅಷ್ಟೇ’ ಎಂದು ಕಾರ್ ಹತ್ತಿದರು.

10.03– ಅಪ್ಪನ ಸಲಹೆ ಕೇಳುತ್ತಿರುವ ‘ಕುಮಾರ’

ರಾಜ್ಯಪಾಲರ ಪತ್ರದ ಹಿನ್ನೆಲೆಯಲ್ಲಿ ಮುಂಜಾನೆಯೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನಿವಾಸಕ್ಕೆ ಧಾವಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸುದೀರ್ಘ ಸಮಾಲೋಚನೆ ನಡೆಸಿದರು.

10.00– ಬಿಜೆಪಿ ಶಾಸಕರ ಸಭೆ

ಅಧಿವೇಶನ ಆರಂಭವಾಗುವ ಮೊದಲು ಬಿಜೆಪಿ ಶಾಸಕರ ಸಭೆ ನಡೆಯಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

9.30– ಮೈಸೂರಿನಲ್ಲಿ ಘಟಾನುಘಟಿಗಳು

ಸಚಿವ ಎಚ್‌.ಡಿ.ರೇವಣ್ಣ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ನಮಿಸಿ, ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡರು. ಮೈತ್ರಿ ಸರ್ಕಾರದ ಉಳಿವಿಗೆ ಪೂಜೆ ಮಾಡಿದೆ ಎಂದು ರೇವಣ್ಣ ಹೇಳಿದರು.

9.00– ವಿಧಾನಸೌಧದಲ್ಲಿ ಬಿಜೆಪಿ ಶಾಸಕರ ಯೋಗಕ್ಷೇಮ ವಿಚಾರಿಸಿದ ಪರಮೇಶ್ವರ

ಸಂಸದೀಯ ವ್ಯವಹಾರಗಳ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸ್ಪೀಕರ್ ರಮೇಶ್‌ಕುಮಾರ್ ಅವರ ಸೂಚನೆ ಮೇರೆಗೆ ಶುಕ್ರವಾರ ಮುಂಜಾನೆ ವಿಧಾನಸೌಧಕ್ಕೆ ಭೇಟಿ ನೀಡಿ ಬಿಜೆಪಿ ಶಾಸಕರ ಯೋಗಕ್ಷೇಮ ವಿಚಾರಿಸಿದರು.

‘ನೀವು ಸಂಸದೀಯ ವ್ಯವಹಾರಗಳ ಸಚಿವರೂ ಆಗಿದ್ದೀರಿ. ಧರಣಿ ನಿರತ ಶಾಸಕರ ಯೋಗಕ್ಷೇಮ ನೋಡಿಕೊಳ್ಳಬೇಕು’ ಎಂದು ನನಗೆ ಹಾಗೂ ‘ಧರಣಿ ನಿರತ ಶಾಸಕರಿಗೆ ಅಗತ್ಯ ಭದ್ರತೆ ಒದಗಿಸುವಂತೆ ಗೃಹ ಸಚಿವ ಎಂ.ಬಿ.ಪಾಟೀಲ ಅವರಿಗೆ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದ್ದರು. ಅದರಂತೆ ಮುಂಜಾನೆ ನಾನು ವಿಧಾನಸೌಧಕ್ಕೆ ಭೇಟಿ ನೀಡಿ ಶಾಸಕರ ಕುಶಲ ವಿಚಾರಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಧರಣಿ ನಿರತ ಶಾಸಕರಿಗೆ ನಿನ್ನೆ ರಾತ್ರಿ ಹೀಗಾಗಿ ಭೋಜನದ ವ್ಯವಸ್ಥೆ, ಮಲಗಲು ಬೆಡ್‌ಶೀಟ್, ತಲೆದಿಂಬು ಕೊಟ್ಟಿದ್ದೆವು. ಇವತ್ತು ಬೆಳಿಗ್ಗೆ ಅವರಿಗೆ ಯಾವುದೂ ತೊಂದರೆ ಆಗಬಾರದು ಅಂತ ವಿಚಾರಿಸೋಕೆ ಬಂದಿದ್ದೆ. ಅವರಿಗೆ ಉಪಾಹಾರದ ವ್ಯವಸ್ಥೆಯನ್ನೂ ಮಾಡಿದ್ದೆ. ನಾನೂ ಉಪಾಹಾರ ತಗೊಂಡು ಬಂದಿದ್ದೇನೆ. ಎಲ್ಲರೂ ಆರಾಮವಾಗಿ ಇದ್ದಾರೆ. ಅವರ ವೈದ್ಯರನ್ನೂ ಇಲ್ಲೇ ಇಟ್ಟಿದ್ವಿ. ಯಾರಿಗಾದರೂ ಆರೋಗ್ಯದ ಏರುಪೇರಾದ್ರೆ ವೈದ್ಯರು ಬೇಕಾಗುತ್ತಾರೆ ಅಂತ ವೈದ್ಯರ ತಂಡವನ್ನೇ ಇರಿಸಿದ್ದೇವೆ. ಎಲ್ಲರೂ ಆರೋಗ್ಯವಾಗಿದ್ದಾರೆ.

Post Comments (+)