ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಎರಡು ವರ್ಷದ ‘ವಿಸ್ಮಯ’!

1.10 ವರ್ಷ ವಯಸ್ಸಿನ ಪುಟಾಣಿ ಮಗುವಿನ ಸಾಧನೆ, ರಾಜ್ಯಕ್ಕೆ ಕೀರ್ತಿ
Last Updated 14 ಜುಲೈ 2019, 15:59 IST
ಅಕ್ಷರ ಗಾತ್ರ

ಮಂಡ್ಯ: ಕೇವಲ 1.10 ವರ್ಷ ವಯಸ್ಸಿನ ಪುಟಾಣಿ, ಮದ್ದೂರಿನ ‘ಎ.ವಿಸ್ಮಯ’ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯುವ ಮೂಲಕ ದೇಶದಲ್ಲೇ ಮೊದಲ ಹಾಗೂ ಹೊಸ ದಾಖಲೆ ಬರೆದು ಆಶ್ಚರ್ಯ ಸೃಷ್ಟಿಸಿದ್ದಾಳೆ.

ಈಚೆಗೆ ನಡೆದ ಸ್ಪರ್ಧೆಯಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಸಂಸ್ಥೆ ವಿಸ್ಮಯಾಳ ಪ್ರತಿಭೆ ಗುರುತಿಸಿದ್ದು ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದೆ. ಡಾ.ಎಂ.ವಿ.ಮೌಲ್ಯ ಹಾಗೂ ಎಂ.ಆರ್‌.ಅರುಣ್‌ಕುಮಾರ್‌ ದಂಪತಿಯ ಪುತ್ರಿಯಾಗಿರುವ ವಿಸ್ಮಯ ಕೇವಲ ಒಂದೂವರೆ ವಯಸ್ಸಿಗೆಲ್ಲಾ ಅರಳುಹುರಿದಂತೆ ಮಾತನಾಡುತ್ತಾಳೆ. ಮಗುವಿನೊಳಗಿನ ಪ್ರತಿಭೆ ಕಂಡು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಸಿಬ್ಬಂದಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯ ಹಾಗೂ ರಾಜಧಾನಿಗಳ ಹೆಸರು ವಿಸ್ಮಯಳ ನೆನಪಿನ ಅಂಗಳದಲ್ಲಿವೆ. ಅಪರೂಪದ ಪ್ರಾಣಿ, ಪಕ್ಷಿ ಹಾಗೂ ಅವುಗಳ ಧ್ವನಿ ಗುರುತಿಸುವಲ್ಲಿ ಆಕೆ ಸಿದ್ಧ ಹಸ್ತಳು. ಪ್ರಾಣಿಗಳು ಮಾತ್ರವಲ್ಲೇ ಕೀಟ, ಹುಳುಗಳನ್ನೂ ಗುರುತಿಸುವಷ್ಟು ಶಕ್ತಿ ಆಕೆಯಲ್ಲಿದೆ. ದೇಶದ ಮಹಾತ್ಮರನ್ನು ಬರೀ ಚಿತ್ರ ನೋಡುತ್ತಲೇ ಅವರ ಹೆಸರು ಅರುಹುತ್ತಾಳೆ. ಹಿಂದೂ ಕ್ಯಾಲೆಂಡರ್‌ನ ತಿಂಗಳುಗಳನ್ನು ಹೇಳುತ್ತಾಳೆ. 35ಕ್ಕೂ ಹೆಚ್ಚು ಪ್ರಾಣಿಗಳ ಹೆಸರು ಆಕೆಯ ನಾಲಗೆಯ ಮೇಲೆ ನಲಿದಾಡುತ್ತವೆ.

ಇಷ್ಟೇ ಅಲ್ಲದೇ ಹಣ್ಣುಗಳನ್ನು ನೋಡಿದ ತಕ್ಷಣ ಪತ್ತೆ ಮಾಡುತ್ತಾಳೆ. ಹಲವು ಬಗೆಯ ಡ್ರೈಫ್ರೂಟ್ಸ್‌ಗಳ ಹೆಸರುಗಳನ್ನೂ ಹೇಳುತ್ತಾಳೆ. ಒಂದು ಬಾರಿ ಹೇಳಿಕೊಟ್ಟರೆ ಸಾಕು, ಆಕೆ ಅದನ್ನು ಎಂದಿಗೂ ಮರೆಯುವುದಿಲ್ಲ. ಬಹಳ ಸಣ್ಣ ವಯಸ್ಸಿಗೆ ದೊಡ್ಡ ಸಾಧನೆ ಮಾಡಿರುವ ವಿಸ್ಮಯ ತಂದೆ–ತಾಯಿ, ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. 2020 ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ವಿಸ್ಮಯ ವಿವರ ಪ್ರಕಟಗೊಳ್ಳಲಿದೆ.

‘ನಮ್ಮ ಮಗುವಿನ ಸಾಧನೆ ಕಂಡು ಮನಸ್ಸು ತುಂಬಿ ಬಂದಿದೆ. ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯುತ್ತಾಳೆ ಎಂದು ಎಣಿಸಿರಲಿಲ್ಲ. ಎಲ್ಲರ ಆಶೀರ್ವಾದದಿಂದ ಮಗಳು ಸಾಧನೆ ಮಾಡಿದ್ದಾಳೆ’ ಎಂದು ವಿಸ್ಮಯ ತಾಯಿ ಡಾ.ಮೌಲ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT