ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಮಂಡಲ ಪೇಜಾವರ ಶ್ರೀಗಳ ನೆಚ್ಚಿನ ಧಾರ್ಮಿಕ ಕ್ಷೇತ್ರ

ಪ್ರಾಕೃತಿಕ ವಿಕೋಪದ ವೇಳೆ ಕೊಡಗು ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ್ದ ಸ್ವಾಮೀಜಿ
Last Updated 29 ಡಿಸೆಂಬರ್ 2019, 10:30 IST
ಅಕ್ಷರ ಗಾತ್ರ

ಮಡಿಕೇರಿ: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಭಾನುವಾರ ಬೆಳಿಗ್ಗೆ ನಿಧನರಾಗಿದ್ದು, ‘ಕಾಫಿ ನಾಡು’ ಕೊಡಗು ಜಿಲ್ಲೆಯಲ್ಲೂ ಅವರ ಶಿಷ್ಯರು, ಮಠದ ಭಕ್ತರು ನೋವಿನಲ್ಲಿ ಮುಳುಗಿದ್ದಾರೆ.

ಕೊಡಗು ಜಿಲ್ಲೆಯೊಂದಿಗೂ ಪೇಜಾವರ ಶ್ರೀಗಳು ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದರು. ಅವರು ಜಿಲ್ಲೆಗೆ ಭೇಟಿ ಕೊಟ್ಟಾಗ ಶಿಷ್ಯರೊಂದಿಗೆ ಆತ್ಮೀಯವಾಗಿ ಬರೆಯುತ್ತಿದ್ದರು.

‘ಕೊಡಗು ಪ್ರಕೃತಿಯ ರಮಣೀಯ ತಾಣ. ಜಿಲ್ಲೆಯ ಪರಿಸರ ಉಳಿಯಬೇಕು’ ಎಂದು ಸದಾ ಹಂಬಲಿಸುತ್ತಿದ್ದರು. ಯಾವುದೇ ಕಾರ್ಯಕ್ರಮದಲ್ಲಿಯೂ ಪರಿಸರ ಪಾಠ ಮಾಡುತ್ತಿದ್ದರು ಎಂದು ಶಿಷ್ಯರು ನೆನಪಿಸಿಕೊಳ್ಳುತ್ತಾರೆ.

2018ರ ಆಗಸ್ಟ್‌ನ ಮಧ್ಯದಲ್ಲಿ ಕೊಡಗು ಭೀಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿತ್ತು. ಸಾವು– ನೋವಿಗೂ ಕಾರಣವಾಗಿತ್ತು. ಬೆಟ್ಟಗಳೇ ಮಂಜಿನಂತೆ ಕರಗಿ ನೀರಾಗಿದ್ದವು. ಆಗ ಸ್ವಾಮೀಜಿ ಜಿಲ್ಲೆಯ ಜನರ ಪರಿಸ್ಥಿತಿ ಕಂಡು ಮರುಗಿದ್ದರು. ಪರಿಸ್ಥಿತಿ ಸುಧಾರಣೆಯಾದ ಮೇಲೆ, ತಮ್ಮ ಶಿಷ್ಯರೊಂದಿಗೆ ಜಿಲ್ಲೆಯ ಮದೆನಾಡು, ಜೋಡುಪಾಲ, 2ನೇ ಮೊಣ್ಣಂಗೇರಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿದ್ದರು.

ಕೊಡಗು ಜಿಲ್ಲೆಗೆ ₹ 10 ಲಕ್ಷ, ಕೊಡಗಿನಂತೆಯೇ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೇರಳಕ್ಕೂ ಆರ್ಥಿಕ ನೆರವು ಘೋಷಿಸಿ, ಜಿಲ್ಲೆಯ ಸಂತ್ರಸ್ತರ ನೋವಿಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದರು.

‘ಜಾತಿ, ಮತ, ಧರ್ಮವನ್ನು ಮರೆತು ನೆರೆ ಸಂತ್ರಸ್ತರಿಗೆ ಉಳ್ಳವರು ಸಹಾಯ ಮಾಡುವುದೇ ಸಮಾಜ ಸೇವೆ, ಜನಾರ್ದನ ಸೇವೆ ಎಂದರೆ ಕೇವಲ ಭಕ್ತಿಮಾರ್ಗವಾದ ದೇವರ ಪೂಜೆ, ಭಜನೆ, ಅಭಿಷೇಕ, ರಥೋತ್ಸವ, ಪಲ್ಲಕಿ ಉತ್ಸವಗಳಲ್ಲ. ನಮ್ಮಲ್ಲಿರುವ ಶೇ 1ರಷ್ಟನ್ನಾದರೂ ಸಂಕಷ್ಟದಲ್ಲಿ ಇರುವವರಿಗೆ ನೀಡಿ ನೆರವಿಗೆ ಮುಂದಾಗುವುದೇ ದೇವರ ಸೇವೆ’ ಎಂದು ಅಂದು ಮಡಿಕೇರಿಯಲ್ಲಿ ಸ್ವಾಮೀಜಿ ಕರೆ ನೀಡಿದ್ದರು ಎಂದು ಅವರ ಶಿಷ್ಯಂದಿರು ನೆನಪಿಸಿದರು.

ಮೇ 31ರಂದು ಸುಂಟಿಕೊಪ್ಪ ಸಮೀಪದ ಅಂದಗೋವೆ ಅರ್ಚಕರಾದ ಗಣೇಶ್ ಉಪಾಧ್ಯಯ ಅವರ ಮನೆಗೂ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ನೀಡಿದ್ದರು. ಮೈಸೂರಿನ ಶ್ರೀಕೃಷ್ಣಧಾಮ ರಜತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಅವರು ಗಣೇಶ ಅವರ ಮನೆಗೂ ಭೇಟಿ ಕೊಟ್ಟಿದ್ದರು. ಪೂರ್ಣಕುಂಭ ಸ್ವಾಗತ ನೀಡಲಾಗಿತ್ತು. ಅಂದು ‘ಚುನಾವಣೆ, ದೇಶದ ರಾಜಕಾರಣ, ಜಾತ್ಯತೀತ ತತ್ವ’ದ ಕುರಿತು ದೀರ್ಘವಾಗಿ ಮಾತನಾಡಿದ್ದರು.

ಭಾಗಮಂಡಲ ಶ್ರೀಗಳ ನೆಚ್ಚಿನ ಧಾರ್ಮಿಕ ಕ್ಷೇತ್ರ

ಕೊಡಗಿನ ಧಾರ್ಮಿಕ ಕ್ಷೇತ್ರ ಭಾಗಮಂಡಲದ ಭಗಂಡೇಶ್ವರ ಕ್ಷೇತ್ರವೆಂದರೆ ವಿಶ್ವೇಶ ತೀರ್ಥರಿಗೆ ಅಚ್ಚುಮೆಚ್ಚಿನ ತಾಣವಾಗಿತ್ತು. ಯಾವಾಗ ಕೊಡಗಿಗೆ ಬಂದರೂ ಈ ಕ್ಷೇತ್ರಕ್ಕೆ ಭೇ ಕೊಡುತ್ತಿದ್ದರು. ಇದೇ ವರ್ಷ ಜುಲೈ 23ರಂದು ಭಾಗಮಂಡಲಕ್ಕೆ ಭೇಟಿ ನೀಡಿದ್ದರು. ಸುರಿಯುತ್ತಿದ್ದ ಜೋರು ಮಳೆಯ ನಡುವೆಯೂ ಭಗಂಡೇಶ್ವರನ ದರ್ಶನ ಪಡೆದುಕೊಂಡಿದ್ದರು. ಇದೇ ಜಿಲ್ಲೆಗೆ ಅವರ ಕೊನೆಯ ಭೇಟಿಯಾಯಿತು. ಮಡಿಕೇರಿ, ಸುಂಟಿಕೊಪ್ಪದಲ್ಲಿ ಪೇಜಾವರ ಶ್ರೀಗಳ ಅಪಾರ ಶಿಷ್ಯವೃಂದ ನೆಲೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT