ಶನಿವಾರ, ಡಿಸೆಂಬರ್ 7, 2019
22 °C
ಹೇಗಿರಲಿವೆ ಸಂತ್ರಸ್ತರ ಮನೆಗಳು

ಕೊಡಗು ಸಂತ್ರಸ್ತರ ಮನೆಗಳ ನಿರ್ಮಾಣಕ್ಕೆ ಸಿಎಂ ಚಾಲನೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಮಡಿಕೇರಿ: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಕೊಡಗು ಜಿಲ್ಲೆಯಲ್ಲಿ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಕೊನೆಗೂ ರಾಜ್ಯ ಸರ್ಕಾರವು ಚಾಲನೆ ನೀಡಲು ಮುಂದಾಗಿದ್ದು, ಡಿ.7ರಂದು ಭೂಮಿಪೂಜೆ ನೆರವೇರಲಿದೆ.

ಆಧುನಿಕ ತಂತ್ರಜ್ಞಾನ ಬಳಸಿ ಮೂರು ತಿಂಗಳ ಒಳಗಾಗಿ 840 ಸಂತ್ರಸ್ತರಿಗೆ ಸೂರು ಕಲ್ಪಿಸುವ ವಿಶ್ವಾಸದಲ್ಲಿ ಕೊಡಗು ಜಿಲ್ಲಾಡಳಿತವಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಲ್ಲಿ ಚಾಲನೆ ನೀಡಲಿದ್ದಾರೆ. 

ತಾಲ್ಲೂಕಿನ ಕೆ.ನಿಡುಗಣಿ ಗ್ರಾಮದಲ್ಲಿ ಸಂತ್ರಸ್ತರ ಪುನರ್ವಸತಿಗೆ ಗುರುತಿಸಿರುವ ಸ್ಥಳದಲ್ಲಿ ವಿವಿಧ ಏಜೆನ್ಸಿಗಳು 6 ಮಾದರಿ ಮನೆ ನಿರ್ಮಿಸಿದ್ದು, ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ಕಟ್ಟಿರುವ ಮನೆ ಅಂತಿಮವಾಗಿ ಆಯ್ಕೆಗೊಂಡಿದೆ. ಈಗ ಸಿಂಗಲ್‌ ಬೆಡ್ ರೂಂನ ಮಾದರಿ ಮನೆ ನಿರ್ಮಿಸಿದ್ದು, ಆದರೆ ಸಂತ್ರಸ್ತರ ಅನುಕೂಲಕ್ಕೆ ಇನ್ನೂ ದೊಡ್ಡದಾದ ಎರಡು ಬೆಡ್‌ರೂಂ ಮನೆ ಕಟ್ಟಿಕೊಡಲು ಸರ್ಕಾರ ತೀರ್ಮಾನಿಸಿದೆ.

‘ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ (ಎನ್‌ಡಿಆರ್‌ಎಫ್‌) ₹ 6 ಲಕ್ಷ ವೆಚ್ಚದಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಅವಕಾಶವಿದೆ. ಆದರೆ, ಕೊಡಗಿನಲ್ಲಿ ಉಂಟಾಗಿದ್ದ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರತಿ ಮನೆಗೆ ₹ 10 ಲಕ್ಷ ವೆಚ್ಚ ಮಾಡಲಾಗುತ್ತಿದೆ’ ಎಂದು ಪುನರ್ವಸತಿಯ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

ಹೇಗಿರಲಿದೆ ಮನೆ?: ಜಿಲ್ಲೆಯ ಕೆ.ನಿಡುಗಣೆ, ಕರ್ಣಂಗೇರಿ, ಗಾಳಿಬೀಡು, ಮದೆ, ಬಿಳಿಗೇರಿ, ಸಂಪಾಜೆ, ಜಂಬೂರು ಸೇರಿದಂತೆ ಸಂತ್ರಸ್ತರಿಗೆ ಅನುಕೂಲ ಆಗುವ ಸ್ಥಳದಲ್ಲಿ ಪುನರ್ವಸತಿಗೆ 110 ಎಕರೆ ಜಾಗ ಗುರುತಿಸಲಾಗಿದೆ.

30X40 ಅಳತೆಯ ನಿವೇಶನದಲ್ಲಿ ಪ್ರತಿಯೊಬ್ಬರಿಗೂ ಮನೆ ನಿರ್ಮಾಣ ಆಗಲಿದೆ. ‘ಶಿಯರ್‌ ವಾಲ್‌ ತಂತ್ರಜ್ಞಾನ’ದ ಮೂಲಕ 30 ದಿನದಲ್ಲಿ ಮನೆ ಸಿದ್ಧಗೊಳ್ಳಲಿದೆ. ಭೂಕಂಪ, ಪ್ರಾಕೃತಿಕ ವಿಕೋಪ, ಅತಿವೃಷ್ಟಿಯಂತಹ ಅವಘಡಗಳಿಗೂ ಈ ಮನೆ ಜಗ್ಗುವುದಿಲ್ಲ.

ಆರ್‌ಸಿಸಿ ಚಾವಣಿ ಇರಲಿದೆ. ನೆಲಹಾಸಿಗೆ ವೆಟ್ರಿಫೈಡ್‌ ಟೈಲ್ಸ್‌, ಬಾತ್‌ರೂಂಗೆ ಗ್ಲೇಜ್ಡ್‌ ಸೆರಾಮಿಕ್‌ ಟೈಲ್ಸ್‌, ಕೊಡಗಿನ ವಾತಾವರಣಕ್ಕೆ ಹೊಂದಾಣಿಕೆ ಆಗುವ ಶೈಲಿಯ ಬಾಗಿಲು, ಕಿಟಕಿ, ನೀರು ಸಂಗ್ರಹಕ್ಕೆ ಟ್ಯಾಂಕ್‌ ಹಾಗೂ ನಲ್ಲಿ ವ್ಯವಸ್ಥೆಯುಳ್ಳ ಒಂದು ಬೆಡ್‌ರೂಂ, ಹಾಲ್‌, ಅಡುಗೆ ಕೋಣೆಯುಳ್ಳ ಮಾದರಿ ಮನೆಯನ್ನು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮವು ನಿರ್ಮಿಸಿದೆ. ಇದೇ ಮಾದರಿಯ ಮನೆಯನ್ನು ಮುಖ್ಯಮಂತ್ರಿ, ಸ್ಥಳೀಯ ಶಾಸಕರು ಹಾಗೂ ಸಂತ್ರಸ್ತರು ಅಂತಿಮಗೊಳಿಸಿದ್ದಾರೆ.

**

ಪ್ರತಿಭಟನೆಗೆ ಸಂತ್ರಸ್ತರ ನಿರ್ಧಾರ

ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಒತ್ತಾಯಿಸಿ, ಇದೇ 7ರಂದು ಪ್ರಾಕೃತಿಕ ವಿಕೋಪ ಪರಿಹಾರ ಹೋರಾಟ ಸಮಿತಿಯು ಮಡಿಕೇರಿಯಲ್ಲಿ ಬೃಹತ್‌ ಜಾಥಾ ಹಮ್ಮಿಕೊಂಡಿದೆ. ಅಂದೇ ಮುಖ್ಯಮಂತ್ರಿ ಕೊಡಗಿಗೆ ಆಗಮಿಸುತ್ತಿದ್ದು ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆಯಿದೆ.

ಜಾಥಾಕ್ಕೆ 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜೋಡುಪಾಲ, ಮದೆನಾಡು, ಮಕ್ಕಂದೂರು, ಎಮ್ಮೆತ್ತಾಳ, ಮೇಘತ್ತಾಳ್‌ ಗ್ರಾಮದ ಸಂತ್ರಸ್ತರು ಜಾಥಾ ನಡೆಸಿ, ಮುಖ್ಯಮಂತ್ರಿ ಗಮನ ಸೆಳೆಯಲು ಮುಂದಾಗಿದ್ದಾರೆ.

‘ನಾಲ್ಕೂವರೆ ತಿಂಗಳಲ್ಲಿ ಮಳೆ ಆರಂಭವಾಗಲಿದ್ದು, ಅದಕ್ಕೂ ಮೊದಲೇ ಮನೆ ನಿರ್ಮಿಸಿಕೊಡಬೇಕು. ಭೂಮಿ ಕಳೆದುಕೊಂಡವರಿಗೆ ಹೆಕ್ಟೇರ್‌ಗೆ ₹ 37 ಸಾವಿರ ಪರಿಹಾರ ನೀಡಲು ಉದ್ದೇಶಿಸಿರುವ ಕ್ರಮ ಸರಿಯಲ್ಲ. ಮರು ನಿರ್ಮಾಣ ಕಾರ್ಯದ ಮೇಲುಸ್ತುವಾರಿಗೆ ‘ಸಮನ್ವಯ ಸಮಿತಿ’ ರಚಿಸಬೇಕು. ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದಿರುವ ಹಣದ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಸಮಿತಿ ಅಧ್ಯಕ್ಷ ಎಂ.ಬಿ.ದೇವಯ್ಯ ಆಗ್ರಹಿಸಿದ್ದಾರೆ.

**

ಮಾದರಿ ಮನೆ ವೀಕ್ಷಿಸಿದ್ದೇನೆ. ಆಯ್ಕೆಯಾದ ಮನೆಯಲ್ಲಿ ಬಟ್ಟೆ ಮತ್ತಿತರ ಸಾಮಗ್ರಿಯಿಡಲು ವ್ಯವಸ್ಥೆ ಇಲ್ಲ
- ಕುಡೇಕಲ್‌ ಸಂತೋಷ್‌, ಸಂತ್ರಸ್ತ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು