ಗುರುವಾರ , ಆಗಸ್ಟ್ 5, 2021
22 °C
2011ರ ನೇಮಕಾತಿ: ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರ ತನಿಖೆಗೆ ಅನುಮತಿ

ರಾಷ್ಟ್ರಪತಿಗೆ ಶಿಫಾರಸು: ಇಕ್ಕಟ್ಟಿನಲ್ಲಿ ಸರ್ಕಾರ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅಕ್ರಮದ ಹಿನ್ನೆಲೆಯಲ್ಲಿ ಅಂದಿನ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಮತ್ತು ಸದಸ್ಯರಾಗಿದ್ದ 10 ಮಂದಿಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೇ, ಬೇಡವೇ ಎಂಬ ವಿಷಯ ರಾಜ್ಯ ಸರ್ಕಾರವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

ಅಕ್ರಮಗಳ ಬಗ್ಗೆ ಸಿಐಡಿ ತನಿಖೆ ನಡೆಸಿ ವರದಿ ನೀಡಿದೆ. ಅಲ್ಲದೆ, ಸಾಕ್ಷ್ಯಾಧಾರಗಳ ಸಹಿತ ಸಾವಿರಾರು ಪುಟಗಳ ಕರಡು ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಎರಡು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಅದು ಪತ್ರ ಬರೆದಿತ್ತು. ಸರ್ಕಾರದ ನಿರ್ದೇಶನದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಸಿಐಡಿ ಮಾಡಿದ್ದ ಮನವಿಯನ್ನು ಆಗ ರಾಜ್ಯಪಾಲರು ತಿರಸ್ಕರಿಸಿದ್ದರು.

ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರವೇ ಈ ಬಗ್ಗೆ ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು. ಅದನ್ನು ರಾಜ್ಯಪಾಲರು ರಾಷ್ಟ್ರಪತಿ ಅವರಿಗೆ ಕಳಿಸಬೇಕು. ರಾಷ್ಟ್ರಪತಿ ಅವರೇ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎನ್ನುವುದು ನಿಯಮ.

ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿ ರಾಷ್ಟ್ರಪತಿಗೆ ರಾಜ್ಯ ಸರ್ಕಾರ ಪತ್ರ ಬರೆಯಬಹುದು ಎಂದು ಈಗಾಗಲೇ ಅಡ್ವೊಕೇಟ್‌ ಜನರಲ್‌ (ಎ.ಜಿ) ಅಭಿಪ್ರಾಯ ನೀಡಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯವನ್ನು ಪರಿಶೀಲಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ‌, ಈ ಬಗ್ಗೆ ಮರುಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯ ತಿಳಿಸುವಂತೆ ಎ.ಜಿ ಅವರನ್ನು ಮತ್ತೆ ಕೋರಿದ್ದಾರೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಕರಡು ದೋಷಾರೋಪ ಪಟ್ಟಿಯನ್ನು ಸರ್ಕಾರಕ್ಕೆ ಸಿಐಡಿ ಸಲ್ಲಿಸಿದೆ. ಎ.ಜಿ ಅಭಿಪ್ರಾಯ ಆಧರಿಸಿ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡುವ ವಿಷಯದಲ್ಲಿ ಸರ್ಕಾರ ತೀರ್ಮಾನಕ್ಕೆ ಬರಲಿದೆ. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ಅಭಿಯೋಜನೆಗೆ ಮಂಜೂರಾತಿ ನೀಡಿದರೆ, ಆ ಶಿಫಾರಸಿನ ಜೊತೆ ದೋಷಾರೋಪ ಪಟ್ಟಿಯನ್ನೂ ಕಳುಹಿಸಲಾಗುವುದು’ ಎಂದೂ ಮೂಲಗಳು ತಿಳಿಸಿವೆ.

2011ರ  ಸಾಲಿನ ನೇಮಕಾತಿಯನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಆದರೂ ಈ ಸಾಲಿನ ಗೆಜೆಟೆಡ್ ಪ್ರೊಬೇಷನರಿ 362 ಹುದ್ದೆಗಳಿಗೆ ಆಯ್ಕೆಗೊಂಡವರಿಗೆ ನೇಮಕಾತಿ ಆದೇಶ ನೀಡಬೇಕೆಂಬ ಒತ್ತಡ ಈಗಲೂ ಇದೆ.

‘2011ರ ನೇಮಕಾತಿ ಪ್ರಕರಣದಲ್ಲಿ ಈವರೆಗೂ ಯಾರ ಮೇಲೂ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಅಲ್ಲದೆ, ನೇಮಕಾತಿ ಅಧಿಸೂಚನೆ ರದ್ದುಪಡಿಸಿದ ವಿಷಯದಲ್ಲಿ ಸರ್ಕಾರದಿಂದ ಕ್ರಿಯಾಲೋಪವಾಗಿದೆ. ಹೀಗಾಗಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು’ ಎಂದು ಮಾರ್ಚ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕೆಲವು ಶಾಸಕರು ಆಗ್ರಹಿಸಿದ್ದರು. ಆಗ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು