ಭಾನುವಾರ, ಜನವರಿ 19, 2020
27 °C
870 ಎಂಜಿನಿಯರುಗಳ ನೇಮಕಾತಿ ರದ್ದು

ಕೆಪಿಎಸ್‌ಸಿ ಮೂಲಕ ‘ವ್ಯವಹಾರ’: ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲೋಕೋಪಯೋಗಿ ಇಲಾಖೆಯ 870 ಎಂಜಿನಿಯರುಗಳ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿ, ಕೆಪಿಎಸ್‌ಸಿಗೆ ವಹಿಸುವ ಮೂಲಕ ‘ವ್ಯವಹಾರ’ ಮಾಡಲು ಮುಂದಾಗಿದೆ ಎಂದು ಲೋಕೋಪಯೋಗಿ ಇಲಾಖೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಕೆಪಿಎಸ್‌ಸಿಗೆ ಹೊಸದಾಗಿ ಮೂವರು ಸದಸ್ಯರನ್ನು ನೇಮಕ ಮಾಡಿದ್ದಾರೆ. ತಮಗೆ ಬೇಕಾದವರನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ. ಅವರ ಮೂಲಕ ಏನು ಬೇಕಾದರೂ ಮಾಡಬಹುದು ಎಂಬ ಕಾರಣಕ್ಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಆರೋಪಿಸಿದರು.

‘ಕೆಪಿಎಸ್‌ಸಿಯಲ್ಲಿ ನೇಮಕಾತಿ ಕೆಲಸ ಪ್ರಾಮಾಣಿಕವಾಗಿ ನಡೆಯುತ್ತಿದೆಯೆ? ಈ ಸಂಸ್ಥೆ ಯಾವ ಸ್ಥಿತಿಗೆ ತಲುಪಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಕಾರಣಕ್ಕೆ ನಾನು ಸಚಿವನಾಗಿದ್ದ ಸಮಯದಲ್ಲಿ ಎಂಜಿನಿಯರುಗಳ ನೇಮಕಾತಿ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಲಾಗಿತ್ತು. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.‌

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಫಲಿತಾಂಶ ಪ್ರಕಟವಾಗಿದ್ದು, ಅಕ್ರಮ ನಡೆದಿದ್ದರೆ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ತಪ್ಪು ಮಾಡಿದ್ದರೆ ಪರೀಕ್ಷಾ ಪ್ರಾಧಿಕಾರವನ್ನೇ ಮುಚ್ಚಿಸಲಿ. ಅದು ಬಿಟ್ಟು ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಕೊನೆ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಿದ್ದರಿಂದ ಪರೀಕ್ಷೆ ಬರೆದಿದ್ದ 64 ಸಾವಿರ ಅಭ್ಯರ್ಥಿಗಳು ಪರಿತಪಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರೀಕ್ಷೆಗೆ ₹2 ಕೋಟಿ ವೆಚ್ಚ

870 ಎಂಜಿನಿಯರುಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಲೋಕೋಪಯೋಗಿ ಇಲಾಖೆ ₹1.99 ಕೋಟಿ ಪರೀಕ್ಷಾ ವೆಚ್ಚ ಭರಿಸಬೇಕಿದೆ.

‘ರಿಪೇರಿ ಮಾಡಬೇಕಾಗುತ್ತದೆ’

‘ಮುಖ್ಯಮಂತ್ರಿ ಯಡಿಯೂರಪ್ಪ ಇದೇ ರೀತಿ ಮುಂದುವರಿದರೆ ರಿಪೇರಿ ಮಾಡಬೇಕಾಗುತ್ತದೆ. ಹೇಗೆ ರಿಪೇರಿ ಮಾಡಬೇಕು ಎಂಬುದು ನಮಗೂ ಗೊತ್ತಿದೆ. ಹೆದರಿಕೊಂಡು ಎಲ್ಲಿಗೂ ಹೋಗಲ್ಲ’ ಎಂದು ರೇವಣ್ಣ ಹೇಳಿದರು.

‘ವಿಧಾನಸೌಧದ ಕಚೇರಿಗಳಿಗೆ ನಕಲಿ ಬೀಗದ ಕೀಗಳನ್ನು ಮಾಡಿಸಿಕೊಳ್ಳುವುದು ಗೊತ್ತಿದೆ. ಅವರು ಮಾಡಿರುವ ಅಕ್ರಮಗಳ ದಾಖಲೆಗಳನ್ನೂ ಹೊರಗೆ ಹೇಗೆ ತೆರೆಯಬೇಕು ಎಂಬುದೂ ಗೊತ್ತಿದೆ’ ಎಂದರು.

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು