ಶನಿವಾರ, ಮೇ 21, 2022
23 °C
ನಿಗಮಕ್ಕೆ ಯಾವುದೇ ಕಾಮಗಾರಿ ಗುತ್ತಿಗೆ ನೀಡದಿರಲು ಸಮಾಜ ಕಲ್ಯಾಣ ಇಲಾಖೆ ನಿರ್ಧಾರ

ಕೆಆರ್‌ಐಡಿಎಲ್‌ ‘ಕಲ್ಯಾಣ’ಕ್ಕೆ ಕೊಕ್ಕೆ!

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಸದಾ ವಿವಾದಗಳಿಂದಲೇ ಸುದ್ದಿಯಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಯಾವುದೇ ಕಾಮಗಾರಿಗಳನ್ನು ನೀಡದಿರಲು ಸಮಾಜ ಕಲ್ಯಾಣ ಇಲಾಖೆ ನಿರ್ಧರಿಸಿದೆ. ಈ ಮೂಲಕ ನಿಗಮವನ್ನು ಇಲಾಖೆಯು ಕಪ್ಪುಪಟ್ಟಿಗೆ ಸೇರಿಸಿದಂತಾಗಿದೆ.

ದುಬಾರಿ ವೆಚ್ಚಕ್ಕೆ ಕಡಿವಾಣ, ಗುತ್ತಿಗೆದಾರರ ಕಿರಿಕಿರಿ ಹಾಗೂ ಮಧ್ಯವರ್ತಿಗಳ ಹಾವಳಿ ತಡೆ ಹಾಕುವ ಉದ್ದೇಶದಿಂದ 1971ರಲ್ಲಿ ಕರ್ನಾಟಕ ಭೂಸೇನಾ ನಿಗಮ ಸ್ಥಾಪಿಸಲಾಗಿತ್ತು. ಇದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿತ್ತು. 2008ರಲ್ಲಿ ಅದರ ಹೆಸರನ್ನು ಕೆಆರ್‌ಐಡಿಎಲ್‌ ಎಂದು ಬದಲಿಸಲಾಯಿತು. ಹಲವು ಇಲಾಖೆಗಳು ನಿಗಮಕ್ಕೆ ಕಾಮಗಾರಿಗಳನ್ನು ನೀಡುತ್ತಿವೆ. ಈ ನಿಗಮ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿವರ್ಷ ಅಂದಾಜು ₹400 ಕೋಟಿಯ ಕಾಮಗಾರಿಗಳನ್ನು ಗುತ್ತಿಗೆ ನೀಡಲಾಗುತ್ತಿದೆ. ‘ನಿಗಮವು ಗುಣಮಟ್ಟದ ಕಾಮಗಾರಿಗಳನ್ನು ನಡೆಸುತ್ತಿಲ್ಲ. ಹತ್ತಾರು ವರ್ಷಗಳು ಕಳೆದರೂ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿಲ್ಲ’ ಎಂಬ ಆಕ್ಷೇಪ ಹಲವು ವರ್ಷಗಳಿಂದಲೂ ಇದೆ.

‘ನಿಗಮವು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ), ಕಾರ್ಮಿಕರ ಶುಲ್ಕ, ಮೂರನೇ ವ್ಯಕ್ತಿ ಪರಿವೀಕ್ಷಣೆ ಹಾಗೂ ಆಡಳಿತ ವೆಚ್ಚಗಳಿಗಾಗಿ ಒಟ್ಟು ಕಾಮಗಾರಿ ವೆಚ್ಚದ ಶೇ 18.5 ವಿಧಿಸುತ್ತಿದೆ. ಜತೆಗೆ, ಕಾಮಗಾರಿಗಳನ್ನು ಗುಣಾತ್ಮಕವಾಗಿ ನಿರ್ವಹಿಸುತ್ತಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಕ್ರಮ ಠೇವಣಿಯಲ್ಲೂ ಪಾತ್ರ: ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳ ಸಲುವಾಗಿ ಬಿಡುಗಡೆಯಾಗಿದ್ದ ₹1,335 ಕೋಟಿ ಹಣವನ್ನು ಸದ್ಬಳಕೆ ಮಾಡದೆ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಅಕ್ರಮವಾಗಿ ಠೇವಣಿ ಇಟ್ಟಿದ್ದನ್ನು ಹಿರಿಯ ಐಎಫ್‌ಎಸ್‌ ಅಧಿಕಾರಿ ಪುನಟಿ ಶ್ರೀಧರ್‌ ನೇತೃತ್ವದ ಸಮಿತಿ 2015ರಲ್ಲಿ ಪತ್ತೆ ಹಚ್ಚಿತ್ತು.

‘ನಿಗಮದಲ್ಲಿ ಖರ್ಚು ಮಾಡಿರುವ ₹3,008 ಕೋಟಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಹೊಂದಾಣಿಕೆ ಆಗುತ್ತಿಲ್ಲ. ನಿಗಮದ ₹3,690 ಕೋಟಿಯನ್ನು ಕಾಮಗಾರಿಗಳಿಗಾಗಿ ಎಂಜಿನಿಯರ್‌ಗಳಿಗೆ ಮುಂಗಡವಾಗಿ ಕೊಡಲಾಗಿದೆ. ಆದರೆ, ಅವರು ಅದರ ಲೆಕ್ಕ ನೀಡಿಲ್ಲ. ತನ್ನ ಹಣವನ್ನು 2013ರ ಜುಲೈವರೆಗೆ ಮ್ಯೂಚುವಲ್‌ ಫಂಡ್‌ನಲ್ಲಿ ತೊಡಗಿಸಿದ್ದು ಆ ಬಗ್ಗೆಯೂ ತನಿಖೆ ಆಗಬೇಕು’ ಎಂದು ಸಮಿತಿ ವರದಿಯಲ್ಲಿ ತಿಳಿಸಿತ್ತು.

ಕಳಪೆ ಕಾಮಗಾರಿಗಳ ಕಾರಣದಿಂದ ಬಿಬಿಎಂಪಿ ಸಹ 2010ರಲ್ಲಿ ನಿಗಮವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ನಗರದ ರಸ್ತೆ ಕಾಮಗಾರಿಗಳನ್ನು ನಿಗಮಕ್ಕೆ ವಹಿಸಲಾಗುತ್ತಿದೆ. ಇದಕ್ಕೆ ನೂರಾರು ಕೋಟಿ ಪಾವತಿ ಮಾಡಲಾಗುತ್ತಿದೆ. ‘ಕಾಟಾಚಾರದ ಕಾಮಗಾರಿಗಳನ್ನು ನಡೆಸುತ್ತಿರುವ ನಿಗಮವನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಪಾಲಿಕೆ ಸಭೆಯಲ್ಲಿ ಸದಸ್ಯರು ಹಲವಾರು ಸಲ ಒತ್ತಾಯಿಸಿದ್ದಾರೆ.

ಎಲ್ಲಿಯ ಕಾಮಗಾರಿಗಳಿಗೆ ಕತ್ತರಿ

* ಸಮಾಜ ಕಲ್ಯಾಣ ಇಲಾಖೆ

* ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ

* ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ

* ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ

* ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ

* ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ

* ರಾಜ್ಯ ಭೋವಿ ಅಭಿವೃದ್ಧಿ ನಿಗಮ

* ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ

* ಕರ್ನಾಟಕ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ

‘ವ್ಯವಸ್ಥೆಯ ಸುಧಾರಣೆಗೆ ಸೂಚನೆ’

‘ವಿವಿಧ ಕಡೆಗಳಿಂದ ನಿಗಮದ ಕಾರ್ಯಚಟುವಟಿಕೆಗಳ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ, ನಿಗಮದ ವ್ಯವ ಸ್ಥೆಯ ಸುಧಾರಣೆ ಮಾಡುವಂತೆ ಸೂಚಿಸಿದ್ದೇನೆ. ಕೆಲಸದ ಒತ್ತಡ ದಿಂದ ಲೋಪಗಳು ಸಂಭವಿಸುತ್ತಿವೆ ಎಂದು ನಿಗಮದ ಅಧಿ ಕಾರಿಗಳು ಹೇಳಿಕೊಂಡಿದ್ದಾರೆ. ಕೆಲಸದ ಒತ್ತಡ ಕಡಿಮೆ ಮಾಡಿಕೊಂಡು ವ್ಯವಸ್ಥೆಯಲ್ಲಿ ಶಿಸ್ತು ತನ್ನಿ ಎಂದಿದ್ದೇನೆ. ಟೆಂಡರ್‌ ಕರೆದೇ ಕಾಮಗಾರಿಗಳನ್ನು ನಡೆಸಬೇಕು ಎಂಬು ದು ಸಮಾಜ ಕಲ್ಯಾಣ ಇಲಾಖೆಯ ಆಲೋಚನೆ. ಇದೊಂದು ಉತ್ತಮ ಕ್ರಮ.

–ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ

‘ಏಳೆಂಟು ವರ್ಷ ಕಳೆದರೂ ಕಾಮಗಾರಿ ಪೂರ್ಣ ಇಲ್ಲ’

ಇಡೀ ನಿಗಮವೇ ಸರಿ ಇಲ್ಲ ಎಂದು ನಾನು ಹೇಳುತ್ತಿಲ್ಲ. ನಿಗಮಕ್ಕೆ ವಹಿಸಿದ ಕಾಮಗಾರಿಗಳು ಕೆಲವು ಕಡೆಗಳಲ್ಲಿ 8–10 ವರ್ಷಗಳಿಂದ ಪೂರ್ಣಗೊಂಡಿಲ್ಲ. ನಿರ್ಮಿತಿ ಕೇಂದ್ರಕ್ಕೆ ವಹಿಸಿದ ಕಾಮಗಾರಿಗಳ ಸ್ಥಿತಿಯೂ ಇದೇ ರೀತಿ ಆಗಿದೆ. ಜಿಲ್ಲಾಧಿಕಾರಿಗಳು ಹೆಚ್ಚು ಆಸ್ಥೆ ವಹಿಸಿದ ಕಡೆಗಳಲ್ಲಿ ಚುರುಕಾಗಿ ಕಾಮಗಾರಿಗಳು ನಡೆಯುತ್ತವೆ. ನಿಧಾನಗತಿ ಕಾಮಗಾರಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

–ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು