ಇನ್ನೂ ಮುಗಿದಿಲ್ಲ ‘ನಡುಗಡ್ಡಿ’ ಗೋಳು

ಗುರುವಾರ , ಜೂಲೈ 18, 2019
22 °C
ಕೃಷ್ಣಾ ನದಿಗೆ ನಿರ್ಮಾಣ, ₹1.52 ಕೋಟಿ ಅಂದಾಜು ವೆಚ್ಚ

ಇನ್ನೂ ಮುಗಿದಿಲ್ಲ ‘ನಡುಗಡ್ಡಿ’ ಗೋಳು

Published:
Updated:
Prajavani

ಕಕ್ಕೇರಾ (ಯಾದಗಿರಿ): ನೀಲಕಂಠ ರಾಯನ ಗಡ್ಡಿ ಗ್ರಾಮಸ್ಥರ ಸಂಚಾರಕ್ಕಾಗಿ ಕೃಷ್ಣಾ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮಂದ ಗತಿಯಲ್ಲಿ ಸಾಗಿದ್ದು, ಈ ವರ್ಷವೂ ಅದು ಮುಗಿಯುವ ಲಕ್ಷಣಗಳು ಇಲ್ಲ.

₹1.52 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಎಂಟು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂಬ ಷರತ್ತಿನೊಂದಿಗೆ ಡಿಸೆಂಬರ್‌ ತಿಂಗಳಲ್ಲಿ ಗುತ್ತಿಗೆದಾರರಿಗೆ ವಹಿಸಿಕೊಡಲಾಗಿತ್ತು. 

ನೀಲಕಂಠರಾಯನಗಡ್ಡಿ (ನಡುಗಡ್ಡಿ)ಯ ನಿವಾಸಿಗಳಿಗೆ ಕೃಷ್ಣಾ ನದಿ ದಾಟುವುದು ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವರ್ಷ ಕೃಷ್ಣಾ ನದಿಗೆ ಪ್ರವಾಹ ಬಂದಾಗ, ನೀಲಕಂಠರಾಯನಗಡ್ಡಿಯ ಜನ ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಾರೆ. ಪ್ರವಾಹ ತಗ್ಗುವವರೆಗೆ ಅಲ್ಲಿಯ ಜನ ಅನಾರೋಗ್ಯ, ಆಹಾರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಸುಳಿಗೆ ಸಿಲುಕುತ್ತಾರೆ.

‘ಪ್ರತಿ ವರ್ಷ ಜೂನ್ ತಿಂಗಳಲ್ಲಿ ಕೃಷ್ಣಾ ನದಿಗೆ ಪ್ರವಾಹ ಆರಂಭವಾಗುತ್ತದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವುದು ಆರಂಭಗೊಂಡ ತಕ್ಷಣ ನಡುಗಡ್ಡೆ ಸಂಪರ್ಕ ಕಡಿತವಾಗುತ್ತದೆ. ಪ್ರವಾಹ ಬಂದಾಗ ಈಜಿ ನದಿ ದಾಟಿ ಅವಶ್ಯಕ ಸಾಮಗ್ರಿ ತೆಗೆದುಕೊಂಡು ಹೋಗುತ್ತೇವೆ. ದಶಕಗಳಿಂದಲೂ ಈ ಸಮಸ್ಯೆ ಇದೆ’ ಎಂದು ಅಮರಪ್ಪ ನಡುಗಡ್ಡಿ ಹೇಳುತ್ತಾರೆ.

ಈ ಹಿಂದೆ ಗರ್ಭಿಣಿಯೊಬ್ಬರು ಇದೇ ನದಿಯಲ್ಲಿ ಈಜಿ ದಾಟಿ ಸುದ್ದಿಯಾಗಿದ್ದರು.

**

ಪ್ರವಾಹ ಎದುರಾಗುವ ಮುಂಚೆಯೇ ಸೇತುವೆ ಕಾಮಗಾರಿ ಮುಗಿಸಿಕೊಡಬೇಕು. ಸಂಚಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದಂತೆ ಆಗುತ್ತದೆ.
– ಲಕ್ಷ್ಮಣ ಗಡ್ಡಿ, ಸ್ಥಳೀಯ ನಿವಾಸಿ.

**

ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿಯನ್ನು ಶೀಘ್ರ ಮುಗಿಸಲಾಗುವುದು.
– ಶಂಕರ ಚೌವ್ಹಾಣ, ಗುತ್ತಿಗೆದಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !