ಭಾನುವಾರ, ಆಗಸ್ಟ್ 18, 2019
24 °C
ತುಂಗಭದ್ರಾ ಜಲಾಶಯದಿಂದ 3 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ: ಹಂಪಿ ಸ್ಮಾರಕಗಳು ಜಲಾವೃತ, ಮುಳುಗಡೆ ಭೀತಿ

ಕೃಷ್ಣಾ ಪ್ರವಾಹ: 26 ಗ್ರಾಮ ಸ್ಥಳಾಂತರ

Published:
Updated:

ರಾಯಚೂರು: ನಾರಾಯಣಪುರ ಜಲಾಶಯದಿಂದ 6 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದ್ದು, ನದಿ ನೀರು ಪ್ರವೇಶಿಸಿದ 26 ಗ್ರಾಮಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 1,917 ಹೆಕ್ಟೇರ್‌ನಷ್ಟು ಬೆಳೆ ನೀರಿನಲ್ಲಿ ಮುಳುಗಿದೆ.

13 ಭಾಗಶಃ ಮತ್ತು 13 ಪೂರ್ಣ ಪ್ರಮಾಣದಲ್ಲಿ ಗ್ರಾಮಗಳ ಜನರನ್ನು ಸ್ಥಳಾಂತರವಾಗಿದ್ದು, 4,500ಕ್ಕೂ ಹೆಚ್ಚು ಜನರನ್ನು 21 ಪರಿಹಾರ ಕೇಂದ್ರಗಳಲ್ಲಿ ಇರಿಸಲಾಗಿದೆ. ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳು ಪರಿಹಾರ ಕೇಂದ್ರಗಳಿಗೆ ವಿವಿಧ ಆಹಾರ ಸಾಮಗ್ರಿಗಳನ್ನು ತಲುಪಿಸುತ್ತಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆಯಲ್ಲಿ ಸಿಲುಕಿದ್ದ ರಕ್ಷಣಾ ತಂಡದಲ್ಲಿನ ಐವರು ಅಧಿಕಾರಿಗಳನ್ನು ಎನ್‌ಡಿಆರ್‌ಎಫ್‌ ತಂಡವು ಬೋಟ್‌ ಮೂಲಕ ರಕ್ಷಿಸಿದೆ. ತುಂಗಭದ್ರಾ ಜಲಾಶಯದಿಂದ 3 ಲಕ್ಷ ಕ್ಯುಸೆಕ್‌ಕೂ ಅಧಿಕ ನೀರು ಹೊರಬಿಡಲಾಗುತ್ತಿದ್ದು, ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕುಗಳ ನದಿ ತೀರದ 30 ಗ್ರಾಮಗಳ ಜನರಿಗೆ ಮುನ್ಸೂಚನೆ ನೀಡಲಾಗಿದೆ.

ಮಂತ್ರಾಲಯ ಮಠದಿಂದ ₹ 10 ಲಕ್ಷ ನೆರವು: ‘ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರಿಗೆ ನೆರವಾಗಲು ರಾಯಚೂರಿನ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 10 ಲಕ್ಷ ತಾತ್ಕಾಲಿಕ ಪರಿಹಾರ ನೀಡಲಾಗುವುದು ಎಂದು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಭಾನುವಾರ ಘೋಷಿಸಿದರು.

‘ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧೆಡೆ ನೆರೆ ಸಂತ್ರಸ್ತರಿಗೆ ಆಹಾರ ಧಾನ್ಯ, ಬಟ್ಟೆಗಳು ಹಾಗೂ ಇತರೆ ಸಾಮಾಗ್ರಿಗಳನ್ನು ಶಾಖಾ ಮಠಗಳಿಂದ ವಿತರಣೆ ಮಾಡಲಾಗಿದೆ. ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ಶ್ರೀಮಠ ಯಾವಾಗಲೂ ಮುಂದಾಗುತ್ತದೆ. ನೆರೆ ಸಂತ್ರಸ್ತರು ಯಾವುದಕ್ಕೂ ಭಯಪಡದೆ ಧೈರ್ಯವಾಗಿ ಇರಬೇಕು’ ಎಂದರು.


ಹಂಪಿಯ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಪ್ರವಾಸಿಗರನ್ನು ತೆಪ್ಪದಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು –ಪ್ರಜಾವಾಣಿ ಚಿತ್ರ: ಬಿ. ಬಾಬುಕುಮಾರ 

ಹಂಪಿ ಸ್ಮಾರಕಗಳು ಜಲಾವೃತ, ಮುಳುಗಡೆ ಭೀತಿಯಲ್ಲಿ 10 ಗ್ರಾಮ: ಇಲ್ಲಿನ ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಮೂರು ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದ್ದು, ಹೊಸಪೇಟೆ ತಾಲ್ಲೂಕಿನ ಹಂಪಿ ಸ್ಮಾರಕಗಳು ಜಲಾವೃತವಾಗಿವೆ.

ಹಂಪಿಯ ಚಕ್ರತೀರ್ಥ, ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ. ಎದುರು ಬಸವಣ್ಣ ಮಂಟಪದ ರಥಬೀದಿ ಜಲಾವೃತಗೊಂಡಿದ್ದು, ಅಲ್ಲಿರುವ ಪೊಲೀಸ್‌ ಠಾಣೆಗೂ ನೀರು ನುಗ್ಗಿರುವುದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಠಾಣೆಯನ್ನು ತಾತ್ಕಾಲಿಕವಾಗಿ ಜೈನ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ. ರಥಬೀದಿ ಸನಿಹಕ್ಕೆ ನೀರು ಬಂದಿದ್ದು, ಭಕ್ತರು ನೀರಿನಲ್ಲೇ ಓಡಾಡುವಂತಾಗಿದೆ. ವಿಜಯ ವಿಠಲ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ತಳವಾರಘಟ್ಟ ರಸ್ತೆ ಮೇಲೆ ನೀರು ಬಂದಿರುವುದರಿಂದ ಪ್ರವಾಸಿಗರ ವಾಹನಗಳು ಸಿಲುಕಿಕೊಂಡು ಜನ ಪರದಾಡಿದರು. ಜನರನ್ನು ಚಕ್ಕಡಿಗಳಲ್ಲಿ ಬೇರೆ ಕಡೆ ಸ್ಥಳಾಂತರಿಸಲಾಯಿತು. ಹಂಪಿಗೆ ಹೊಂದಿಕೊಂಡಂತಿರುವ ಬಾಳೆತೋಟಗಳಿಗೆ ನೀರು ನುಗ್ಗಿದೆ.


ತುಂಗಭದ್ರಾ ಅಣೆಕಟ್ಟೆಯಿಂದ ನೀರು ಬಿಟ್ಟಿರುವುದರಿಂದ ಭಾನುವಾರ ಹಂಪಿ ಎದುರು ಬಸವಣ್ಣ ಮಂಟಪ ಸ್ಮಾರಕ ಎದುರಿನ ರಥಬೀದಿಯಲ್ಲಿ ನೀರು ಜಮಾವಣೆಗೊಂಡಿತು 

ಹೊಸಪೇಟೆ ಮತ್ತು ಕಂಪ್ಲಿ ತಾಲ್ಲೂಕಿನ ತಲಾ ಐದು ಗ್ರಾಮಗಳಿಗೆ ನೀರು ನುಗ್ಗಿದ್ದು, ಮುಳುಗಡೆ ಭೀತಿ ಎದುರಿಸುತ್ತಿವೆ. ಕಂಪ್ಲಿ–ಗಂಗಾ
ವತಿ ಸೇತುವೆ ಮೇಲೆ ಅಪಾರ ನೀರು ಹರಿಯುತ್ತಿದ್ದು, ಸಂಚಾರ ಕಡಿತಗೊಂಡಿದೆ. ಹೂವಿನಹಡಗಲಿಯಲ್ಲಿ 381 ಮನೆಗಳಿಗೆ ಹಾನಿಯಾಗಿದ್ದು, 780 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 200 ಹೆಕ್ಟೇರ್‌ ಪ್ರದೇಶದ ಕೃಷಿ ಜಮೀನಿನಲ್ಲಿ ನೀರು ಆವರಿಸಿಕೊಂಡಿದೆ.

ಒಟ್ಟು 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 1,631 ಅಡಿ ನೀರು ಸಂಗ್ರಹವಾಗಿದ್ದು, 2.50 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಸೇತುವೆ ಸಂಪೂರ್ಣ ಭರ್ತಿಯಾಗಲು ಎರಡು ಅಡಿಗಳಷ್ಟೇ ಉಳಿದಿರುವುದರಿಂದ ನೀರು ಹೊರ‌ ಬಿಡಲಾಗುತ್ತಿದೆ.

Post Comments (+)