ಭಾನುವಾರ, ಡಿಸೆಂಬರ್ 8, 2019
20 °C
ಯುವಜನತೆಗಾಗಿ ಕುವೆಂಪು : ಓದು ಅಭಿಯಾನಕ್ಕೆ ಚಾಲನೆ

ಕುವೆಂಪು ಸಾಹಿತ್ಯದಲ್ಲಿದೆ ಸಮಸ್ಯೆಗಳಿಗೆ ಪರಿಹಾರ: ಪ್ರೊ.ರವಿವರ್ಮ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕುವೆಂಪು ಅವರ ಸಾಹಿತ್ಯದ ಓದು ಮತ್ತು ವಿಚಾರ ಧಾರೆಯನ್ನು ತಿಳಿಯುವ ‘ಯುವಜನತೆಗಾಗಿ ಕುವೆಂಪು: ಕುವೆಂಪು ಓದು ಅಭಿಯಾನ’ಕ್ಕೆ ನಗರದ ಶೇಷಾದ್ರಿಪುರ ಪಿ.ಯು.ಕಾಲೇಜಿನಲ್ಲಿ ಗುರುವಾರ ಚಾಲನೆ ನೀಡಲಾಯಿತು.

‘ಜೀವನ ಮತ್ತು ಸಮಾಜದಲ್ಲಿನ ಪ್ರತಿಯೊಂದು ಸಮಸ್ಯೆಗೂ ಕುವೆಂಪು ಅವರ ಸಾಹಿತ್ಯದಲ್ಲಿ ಪರಿಹಾರವಿದೆ’ ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌ ಅವರು ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

‘ಇಂದಿನ ಕಾಲೇಜುಗಳಲ್ಲಿ ಪಠ್ಯ ಶಿಕ್ಷಣ ನೀಡುತ್ತಿದ್ದಾರೆ ಹೊರತು, ನೀತಿ ಕಲಿಸುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳು ವಿಚಾರ, ನಂಬಿಕೆ, ಶಿಕ್ಷಣಾರ್ಹತೆ, ಪ್ರತಿಭೆಗೆ ಅನುಗುಣವಾದ ಉದ್ಯೋಗಗಳನ್ನು ಹೊಂದಲು ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಪೋಷಕರ ವೃತ್ತಿಗಳನ್ನೆ ಮಕ್ಕಳು ಅನುಸರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ನಾನು ಸಂಸ್ಕೃತದ ವಿದ್ಯಾರ್ಥಿ. ನನ್ನ 21ನೇ ವಯಸ್ಸಿನವರೆಗೂ ಕನ್ನಡ ಪುಸ್ತಕಗಳನ್ನು ಓದಿರಲಿಲ್ಲ. ಮೇಷ್ಟ್ರಾಗಿದ್ದ ತಂದೆಯವರು 22ನೇ ವರ್ಷಕ್ಕೆ ಕಾಲಿರಿಸಿದ ದಿನ, ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಕೇವಲ ₹ 2 ಪುಸ್ತಕ ತಂದುಕೊಟ್ಟರು. ಅದು ಎಷ್ಟು ವಿಚಾರಪೂರಿತವಾಗಿದೆಯೆಂದರೆ, ಓದಲು ಆರಂಭಿಸಿದಾಗ ಕೆಳಗಿಡಲು ಮನಸ್ಸಾಗಲೇ ಇಲ್ಲ. ಬೆಳಗಿನ ಜಾವ 3.30ರವರೆಗೂ ಓದಿ ಮುಗಿಸಿದೆ’ ಎನ್ನುತ್ತಾ ತಮ್ಮೊಂದಿಗೆ ತಂದಿದ್ದ ಆ ಹಳೆಯ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ತೋರಿಸಿದರು.

‘ಆ ಸಣ್ಣ ಪುಸ್ತಕದ ಪ್ರಭಾವದಿಂದಲೇ ನಾನು ಪ್ರೀತಿಸಿ, ಅಂತರ್ಜಾತಿಯ ವಿವಾಹವಾದೆ. ಪತ್ನಿ ಮರಾಠಿ ಭಾಷೆಯವರು ಎಂಬ ಭಾಷಾಭೇದ ತೋರಲಿಲ್ಲ. ಕಂದಾಚಾರ ಧಿಕ್ಕರಿಸಲೆಂದೇ ಅಮವಾಸ್ಯೆಯ ರಾಹುಕಾಲದಂದೇ ಮದುವೆಯಾದೆ.  ಕೇವಲ ₹ 5 ರ ಎರಡು ಹೂವಿನ ಹಾರಗಳಿಂದ ಸಂಗಾತಿಯೊಂದಿಗೆ ದಾಂಪತ್ಯಕ್ಕೆ ಕಾಲಿರಿಸಿದೆ. ಐದು ಜನ ಆಹ್ವಾನಿತರು ಮಾತ್ರ ಮದುವೆಗೆ ಬಂದಿದ್ದರು’ ಎಂದು ಮಂತ್ರ ಮಾಂಗಲ್ಯದ ಮದುವೆ ನೆನಪಿಸಿಕೊಳ್ಳುತ್ತ ಆಡಂಬರದ ಮದುವೆ ಮತ್ತು ವರದಕ್ಷಿಣೆಯಿಂದಾಗುವ ಹಣಕಾಸಿನ ತಾಪತ್ರಯಗಳನ್ನು ತಿಳಿಸಿದರು. ತಮ್ಮ ಮಗಳು ಬೆಳ್ಳಿ ಎಂಬುವರು ಮುಸ್ಲಿಂ ಯುವಕನನ್ನು ಮದುವೆಯಾಗಿರುವ ಕುರಿತು ಹೆಮ್ಮೆಯಿಂದ ಹೇಳಿಕೊಂಡರು.

‘ನಾವಿಂದು ಹಣದಾಸೆ, ಜಾತಿ, ಧರ್ಮದ ವ್ಯಾಮೋಹ ಹಾಗೂ ಭಾಷಾಂಧತೆಗೆ ಬಲಿಯಾಗಿ ಅನರ್ಹರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡುತ್ತಿದ್ದೇವೆ. ಸಮಾಜದಲ್ಲಿ ಧರ್ಮ, ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರ ಮತ್ತು ಮರ್ಯಾದೆ ಗೇಡು ಹತ್ಯೆಗಳು ನಡೆಯುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ನೀವು ಕುವೆಂಪು ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಆರಂಭಿಸಿ. ನಿಮ್ಮ ಉತ್ತಮ ಆಲೋಚನೆಗಳಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಶೋಕ್‌ ಕುಮಾರ್, ‘ಕುವೆಂಪು ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಇದೆ. ಅವರ ಸಾಹಿತ್ಯದಲ್ಲಿ ಅರ್ಥವಾಗದ ಪದಗಳ ಕುರಿತು ಅಧ್ಯಾಪಕರಿಂದ ವಿವರಣೆ ಪಡೆದು ಅರ್ಥೈಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಕುವೆಂಪು ಓದು ಅಭಿಯಾನ

ನೆಲಸಿರಿ ಚಾರಿಟಬಲ್‌ ಟ್ರಸ್ಟ್‌ ಮತ್ತು ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ.

ಟ್ರಸ್ಟ್‌ ಮತ್ತು ವಿದ್ಯಾಲಯ ಜಂಟಿಯಾಗಿ ಕುವೆಂಪು ಅವರ ವೈಚಾರಿಕ ಲೇಖನಗಳನ್ನು ಮುದ್ರಿಸಿ, ಕಿರುಹೊತ್ತಗೆಯನ್ನು ಪ್ರಕಟಿಸಿವೆ. ಅದನ್ನು ಆಸಕ್ತ ವಿದ್ಯಾರ್ಥಿಗಳಿಗೆ ಓದಲು ನೀಡಲಾಗುತ್ತಿದೆ. ನಂತರ ಓದಿನ ಅನುಭವವನ್ನು ಪ್ರಬಂಧ ರೂಪದಲ್ಲಿ ಅತ್ಯುತ್ತಮವಾಗಿ ಕಟ್ಟಿಕೊಡುವ ವಿದ್ಯಾರ್ಥಿಗಳಿಗೆ ಸೂಕ್ತ ಬಹುಮಾನ ನೀಡಲು ಟ್ರಸ್ಟ್‌ ನಿರ್ಧರಿಸಿದೆ.

ಈ ಅಭಿಯಾನವನ್ನು ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ 350 ಪಿ.ಯು.ಕಾಲೇಜುಗಳಲ್ಲಿ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸಹ ಕೈಜೋಡಿಸಿದ್ದಾರೆ.

ಮಾಹಿತಿಗೆ: 8861136933

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು