ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೂ ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ?

ಕಾರ್ಮಿಕ ಕಾನೂನು ಸಡಿಲಿಕೆಗೆ ಸರ್ಕಾರದ ಚಿಂತನೆ * ಕೈಗಾರಿಕೆಗಳ ಮುಖ್ಯಸ್ಥರೊಂದಿಗೆ ಕಾರ್ಯದರ್ಶಿ ಸಂವಾದ
Last Updated 9 ಮೇ 2020, 20:17 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಆಡಳಿತದಲ್ಲಿರುವ ಕೆಲವು ರಾಜ್ಯಗಳು ಘೋಷಿಸಿರುವಂತೆ, ಕರ್ನಾಟಕದಲ್ಲಿಯೂ ಕೆಲಸದ ಅವಧಿ ಹೆಚ್ಚಿಸುವ ಮೂಲಕ ಕಾರ್ಮಿಕ ಕಾನೂನುಗಳನ್ನು ಸಡಿಲಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ)ಸದಸ್ಯರೊಂದಿಗೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರು ಶನಿವಾರ ನಡೆಸಿದ ಸಂವಾದದಲ್ಲಿ ಈ ಕುರಿತು ಚರ್ಚೆ ನಡೆದಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಅಖಿಲ ಭಾರತೀಯ ವ್ಯಾಪಾರ ಒಕ್ಕೂಟಗಳ ಕೇಂದ್ರ ಮಂಡಳಿಯ (ಎಐಸಿಸಿಟಿಯು) ರಾಜ್ಯ ಘಟಕ, ‘ದಿನಕ್ಕೆ 12ರಿಂದ 14 ತಾಸುಗಳ ಕಾಲ ಕೆಲಸ ಮಾಡಲು ಎಲ್ಲರೂ ಸಿದ್ಧರಾಗಿ. ಏಕೆಂದರೆ, ಸಿಐಐಗೆ ಈ ಕುರಿತು ಭರವಸೆ ನೀಡಿರುವ ಕಾರ್ಮಿಕ ಇಲಾಖೆ ಸಚಿವ ಸಂಪುಟದ ಅನುಮೋದನೆ ಪಡೆಯುವುದಾಗಿ ಹೇಳಿದೆ. ಈ ನಿಯಮ ಜಾರಿಗೆ ಬಂದರೆ, ಅದು ಫ್ಯಾಕ್ಟರಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಈ ಕಾಯ್ದೆಯ ಪ್ರಕಾರ, ವಾರಕ್ಕೆ 48 ಗಂಟೆ ಮಾತ್ರ ಕೆಲಸದ ಅವಧಿ ಇರಬೇಕು’ ಎಂದು ಹೇಳಿದೆ.

ಈ ಕುರಿತು ಮಣಿವಣ್ಣನ್‌ ಅವರನ್ನು ಸಂಪರ್ಕಿಸಿದಾಗ, ‘ನಾಲ್ಕು ತಿಂಗಳಿಗೆ ಹೆಚ್ಚುವರಿಯಾಗಿ 100 ತಾಸುಗಳನ್ನು ಕೆಲಸದ ಅವಧಿಗೆ ಸೇರಿಸುವ ಕುರಿತು ಚರ್ಚೆ ನಡೆಯುತ್ತಿದೆಯೇ ವಿನಾ, ವಾರಕ್ಕೆ 100 ತಾಸು ಹೆಚ್ಚುವರಿಯಾಗಿ ಸೇರಿಸಬೇಕು ಎಂದಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಿಐಐ ತನ್ನ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಅವುಗಳನ್ನು ಆಲಿಸಿದ್ದೇನೆ. ಆದರೆ, ಕೆಲಸದ ಅವಧಿ ಹೆಚ್ಚಳದ ಕುರಿತು ಸರ್ಕಾರದ ಮಟ್ಟದಲ್ಲಿ ಈವರೆಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ಅವರು ಹೇಳಿದರು.

ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‌ ಸರ್ಕಾರಗಳು, ‘ಲಾಕ್‌ಡೌನ್‌ನಿಂದ ಕುಂಠಿತಗೊಂಡಿರುವ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಕಾರ್ಮಿಕ ಕಾನೂನನ್ನು ಸಡಿಲಗೊಳಿಸಲಾಗುವುದು’ ಎಂದು ಈಗಾಗಲೇ ಘೋಷಿಸಿವೆ.

***

ಕೆಲಸದ ಅವಧಿ ಹೆಚ್ಚಳದ ಬಗ್ಗೆಯಾಗಲಿ, ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವ ಕುರಿತಾಗಲಿ ಸರ್ಕಾರ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

-ಶಿವರಾಮ್‌ ಹೆಬ್ಬಾರ್, ಕಾರ್ಮಿಕ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT