ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ, ಪಕ್ಷಿಗಳಿಗಾಗಿ ಕೆರೆ ಅಭಿವೃದ್ಧಿಗೆ ಮುಂದಾದ ವೈದ್ಯ

ನರೇಗಲ್‌– ಬಿನ್ನಾಳ ಗ್ರಾಮ ಮಧ್ಯದ ಸುಣಗಾರ ಕೆರೆ
ಅಕ್ಷರ ಗಾತ್ರ

ನರೇಗಲ್ (ಗದಗ ಜಿಲ್ಲೆ): ಪ್ರಾಣಿ ಪಕ್ಷಿಗಳ ನೀರಿನ ದಾಹ ಇಂಗಿಸಲು ಸ್ವಂತ ಹಣ ಖರ್ಚು ಮಾಡಿ ಅರಣ್ಯ ಪ್ರದೇಶದಲ್ಲಿರುವ ಕೆರೆಯೊಂದರ ಅಭಿವೃದ್ಧಿಗೆ ಪಟ್ಟಣದ ವೈದ್ಯ ಡಾ. ನಾಗರಾಜ ಎಲ್. ಗ್ರಾಮಪುರೋಹಿತ ಮುಂದಾಗಿದ್ದಾರೆ. ಇವರಿಗೆ ಸ್ಥಳೀಯ ನಿವಾಸಿ ಸತೀಶ ಹೂಲಗೇರಿ ಕೈಜೋಡಿಸಿದ್ದಾರೆ.

ಹಲವು ವರ್ಷಗಳಿಂದ ಈ ಕೆರೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ನಾಗರಾಜ ಅವರು ಕೆರೆಯ ಹೂಳು ತೆಗೆಯಲು ಮುಂದಾಗಿರುವುದಕ್ಕೆ ಸಾರ್ವಜನಿಕರು ಹಾಗೂ ಈ ಕೆರೆಯ ಸುತ್ತಮುತ್ತಲಿನ ಜಮೀನುಗಳ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನರೇಗಲ್‌ ಪಟ್ಟಣದಿಂದ ಬಿನ್ನಾಳ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬರುವ ಈ ಕೆರೆಯನ್ನು ‘ಸುಣಗಾರ ಕೆರೆ’ ಎಂದು ಕರೆಯುತ್ತಾರೆ. ಹಲವು ವರ್ಷಗಳಿಂದ ಕೆರೆಯಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗುತ್ತಿರಲಿಲ್ಲ. ಕೆರೆಯಲ್ಲಿ ಮುಳ್ಳಿನ ಗಿಡಗಳು ಬೆಳೆದಿದ್ದವು. ಇದರಿಂದ ಪ್ರಾಣಿಗಳಿಗೆ, ಕುಡಿಯಲು ನೀರು ಸಿಗುತ್ತಿರಲಿಲ್ಲ. ನಾಗರಾಜು ಅವರು ತಮ್ಮ ತಂದೆ ನಿವೃತ್ತ ಶಿಕ್ಷಕ ಲಕ್ಷ್ಮಣ ಗ್ರಾಮಪುರೋಹಿತ್ ಅವರ ಮಾರ್ಗದರ್ಶನದ ಅನ್ವಯ ಜಲಮೂಲ ಉಳಿಸುವ ಈ ಕಾಯಕಕ್ಕೆ ಮುಂದಾಗಿದ್ದಾರೆ.

‘ಬರ ಹಾಗೂ ಬಿಸಿಲಿನ ತಾಪದಿಂದ ಪ್ರಾಣಿಗಳು ಕುಡಿಯಲು ನೀರಿಲ್ಲದೆ ಪರದಾಡುತ್ತಿವೆ. ಕೆಲ ಪ್ರಾಣಿಗಳು ಆಹಾರ, ನೀರು ಅರಸಿ ಪಟ್ಟಣಕ್ಕೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೆರೆ ಹೂಳು ತೆಗೆದು ಸ್ವಚ್ಛಗೊಳಿಸಲು ಮುಂದಾಗಿದ್ದೇನೆ. ಇದಕ್ಕೆ ನದಾಫ್ ಕುಟುಂಬಸ್ಥರು, ಸುತ್ತಮುತ್ತಲಿನ ಹೊಲಗಳ ರೈತರು ಸಹಕಾರ ನೀಡಿದ್ದಾರೆ’ ಎಂದು ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಪಟ್ಟಣದಲ್ಲಿ ಐತಿಹಾಸಿಕ ಹಿರೇಕೆರೆ ಕೆರೆ ಅಭಿವೃದ್ಧಿ ಕಾರ್ಯ ನಡೆದಿದೆ. ನಾಗರಾಜ, ರೋಗಿಗಳ ಆರೋಗ್ಯದ ಜತೆಗೆ ಪ್ರಾಣಿ ಪಕ್ಷಿಗಳ ದಾಹ ನೀಗಿಸಲು ಕೆರೆ ಹೂಳೆತ್ತಲು ಮುಂದಾಗಿರುವುದು ಉತ್ತಮ ಕಾರ್ಯ’ ಎಂದು ನೆಲ, ಜಲ ಸಂರಕ್ಷಣಾ ಸಮಿತಿ ಸದಸ್ಯ ಶಿವನಗೌಡ ಪಾಟೀಲ ಅಭಿಪ್ರಾಯಪಟ್ಟರು.

***

ವೈದ್ಯರೊಬ್ಬರು ಸ್ವಂತ ಖರ್ಚಿನಲ್ಲಿ ಕೆರೆ ಅಭಿವೃದ್ಧಿಗೆ ಮುಂದಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನಾವು ಅವರಿಗೆ ಅಗತ್ಯ ನೆರವು ಒದಗಿಸುತ್ತೇವೆ

–ಸತೀಶ ಹೂಲಗೇರಿ, ಕೆರೆ ಪಕ್ಕದ ಜಮೀನಿನ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT