ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮಾದೇವಿಗೆ, ಪುಷ್ಪಾ ‘ನಾರಿಶಕ್ತಿ’ಪುಷ್ಪಾ, ಉಮಾದೇವಿಗೆ ‘ನಾರಿಶಕ್ತಿ’ ಪುರಸ್ಕಾರ

Last Updated 7 ಮಾರ್ಚ್ 2018, 20:02 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕೊಡಮಾಡುವ ಪ್ರಸಕ್ತ ಸಾಲಿನ ‘ನಾರಿಶಕ್ತಿ’ ಪುರಸ್ಕಾರಕ್ಕೆ ಇಬ್ಬರು ಕನ್ನಡತಿಯರು ಸೇರಿದಂತೆ ರಾಷ್ಟ್ರದ 39 ಸಾಧಕಿಯರು ಆಯ್ಕೆಯಾಗಿದ್ದಾರೆ.

ಗ್ರಾಹಕರ ಹಕ್ಕುಗಳ ಕುರಿತು ಜನಜಾಗೃತಿ ಮೂಡಿಸುತ್ತಿರುವ ಪತ್ರಕರ್ತೆ– ಬರಹಗಾರ್ತಿ ಪುಷ್ಪಾ ಗಿರಿಮಾಜಿ ಹಾಗೂ ಬಿಲಿಯರ್ಡ್ಸ್‌ ಆಟಗಾರ್ತಿ ಆರ್‌.ಉಮಾದೇವಿ ನಾಗರಾಜ್‌ ಪುರಸ್ಕಾರಕ್ಕೆ ಒಳಗಾಗಿರುವ ಕನ್ನಡತಿಯರು.

ಗ್ರಾಹಕ ವ್ಯವಹಾರಗಳ ಕುರಿತು ಕಳೆದ 42 ವರ್ಷಗಳಿಂದ ದೇಶದ ವಿವಿಧ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಅಂಕಣ ಬರೆಯುತ್ತಿರುವ ಪುಷ್ಪಾ ಗಿರಿಮಾಜಿ, ಗ್ರಾಹಕ ಹಕ್ಕುಗಳ ರಕ್ಷಣೆ ಕುರಿತು ಅರಿವು ಮೂಡಿಸುತ್ತಿದ್ದಾರೆ.

ಗ್ರಾಹಕರ ರಕ್ಷಣೆ ಕಾಯ್ದೆ–1986ರ ಜಾರಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದಾರೆ. ಸಾಮಾನ್ಯ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತಿರುವ ಇವರ ಸಾಧನೆ ಪರಿಗಣಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಸ್ತುತ ದೆಹಲಿಯಲ್ಲಿ ವಾಸವಾಗಿರುವ ಇವರು, ‘ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿ’ ಪತ್ರಿಕಾ ಸಮೂಹದ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಯಲ್ಲೂ ಕೆಲ ಕಾಲ ಕೆಲಸ ಮಾಡಿದ್ದರು.

ಬಿಲಿಯರ್ಡ್ಸ್‌ ಆಟಗಾರ್ತಿ: ತೋಟಗಾರಿಕೆ ಇಲಾಖೆಯಲ್ಲಿ ಟೈಪಿಸ್ಟ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಆರ್‌.ಉಮಾದೇವಿ ನಾಗರಾಜ್‌ ಅವರು ಆರಂಭದಲ್ಲಿ ಟೇಬಲ್‌ ಟೆನ್ನಿಸ್‌ ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರಾಗಿದ್ದರೂ, ಬಿಲಿಯರ್ಡ್ಸ್‌ನಲ್ಲಿ ಹೆಸರು ಮಾಡಿದವರು.

2002ರಲ್ಲಿ ಬಿಲಿಯರ್ಡ್ಸ್‌ನ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದ ಇವರು, 2013, 2004, 2011 ಮತ್ತು 2012ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿದ್ದಾರೆ.

2012ರಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ನಲ್ಲಿ ಪ್ರಶಸ್ತಿ ಗಳಿಸಿರುವ ಇವರ ಸಾಧನೆಯನ್ನು ಪರಿಗಣಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT