ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಪ್‌ಟಾಪ್‌ ಹಗರಣ: ಮೇಲ್ಮನೆಯಲ್ಲಿ ಧರಣಿ

ಸದನ ಸಮಿತಿಗೆ ಪಟ್ಟು; ಹಿಂದಿನ ಸರ್ಕಾರದತ್ತ ತಿರುಗೇಟು
Last Updated 23 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌, ವೈದ್ಯಕೀಯ ಹಾಗೂ ಪದವಿ ಕಾಲೇಜುಗಳ ಆರ್ಥಿಕವಾಗಿ ಹಿಂದುಳಿದವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವಲ್ಲಿ ಭ್ರಷ್ಟಾಚಾರ ನಡೆದಿದ್ದು, ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್‌ನಲ್ಲಿ ಸೋಮವಾರ ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸಿದರು.

ಕಾಂಗ್ರೆಸ್‌ನ ಕೆ.ಸಿ.ಕೊಂಡಯ್ಯ ಅವರು ಮಂಡಿಸಿದ ಗಮನ ಸೆಳೆಯುವ ಗೊತ್ತುವಳಿ ಮೇಲೆ ನಡೆದ ಚರ್ಚೆಯಲ್ಲಿ ತೀವ್ರ ವಾಗ್ವಾದ ನಡೆಯಿತು. ‘ಈ ಹಿಂದಿನ ಸರ್ಕಾರದ ಅವಧಿಯಲ್ಲೇ ಟೆಂಡರ್‌ ಕರೆದು, ಲ್ಯಾಪ್‌ಟಾಪ್‌ ಖರೀದಿಗೆ ಆದೇಶವನ್ನೂ ನೀಡಲಾಗಿತ್ತು, ಇದು ತಾವೇ ಮಾಡಿದ ಹಗರಣಕ್ಕೆ ತಾವೇ ಸದನ ಸಮಿತಿಗೆ ಒತ್ತಾಯ ಮಾಡಿದಂತಾಗಿದೆ’ ಎಂದು ಆಡಳಿತ ಪಕ್ಷದ ತಿರುಗೇಟಿನಿಂದ ರೊಚ್ಚಿಗೆದ್ದ ವಿರೋಧ ಪಕ್ಷದ ಸದಸ್ಯರು, ಸಭಾಪತಿ ಅವರ ಪೀಠದ ಮುಂಭಾಗಕ್ಕೆ ಬಂದು ಧರಣಿ ನಡೆಸಿದರು.

ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಕಲಾಪವನ್ನು 10 ನಿಮಿಷ ಮುಂದೂಡಿದರು. ಮತ್ತೆ ಸದನ ಸೇರಿದಾಗಲೂ ಧರಣಿ ಮುಂದುವರಿದ್ದುದರಿಂದ ಕಲಾಪವನ್ನು ಮಂಗಳವಾರ ಬೆಳಿಗ್ಗೆ 10.30ಕ್ಕೆ ಮುಂದೂಡಲಾಯಿತು.

‘2016–17ರಲ್ಲಿ ಇದೇ ಲ್ಯಾಪ್‌ಟಾಪ್‌ ಹಗರಣದ ಬಗ್ಗೆ ₹ 300 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬಿ.ಎಸ್.ಯಡಿಯೂರಪ್ಪ ಅವರು ಆರೋಪಿಸಿದ್ದರು. ಬಳಿಕ ಸದನ ಸಮಿತಿಯನ್ನೂ ರಚಿಸಲಾಗಿತ್ತು. ಅಂದು ₹ 14 ಸಾವಿರಕ್ಕೆ ನೀಡಲಾಗಿದ್ದ ಲ್ಯಾಪ್‌ಟಾಪ್‌ಗೆ2017–18ನೇ ಸಾಲಿನಲ್ಲಿ ₹ 28 ಸಾವಿರಕ್ಕೆ ಖರೀದಿಸಲಾಗಿದೆ’ ಎಂದು ಕೆ.ಸಿ.ಕೊಂಡಯ್ಯ ಮತ್ತು ಬಸವರಾಜ ಹೊರಟ್ಟಿ ಆರೋಪಿಸಿದರು.

‘ಇದು ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಆಗಿರುವ ಒಪ್ಪಿಗೆಯೇ ಇರಬಹುದು, ಇತರ ಹಲವಾರು ಯೋಜನೆಗಳನ್ನು ನಿಮ್ಮ ಸರ್ಕಾರ ಬಂದ ಬಳಿಕ ರದ್ದು ಮಾಡಿದ್ದೀರಿ, ಇದನ್ನು ಸಹ ರದ್ದುಪಡಿಸಬೇಕಿತ್ತು’ ಎಂದು ಎಚ್‌.ಎಂ.ರೇವಣ್ಣ, ಎಂ.ನಾರಾಯಣಸ್ವಾಮಿ, ಶರಣಪ್ಪ ಮಟ್ಟೂರು ಹೇಳಿದರು.

‘ಇದು ನಿಮ್ಮ ಅವಧಿಯಲ್ಲೇ ಆಗಿರುವ ಹಗರಣ, ಮೇಲಕ್ಕೆ ನೋಡಿ ಉಗಿದರೆ ನಿಮ್ಮ ಮುಖಕ್ಕೇ ಬೀಳುವುದು’ ಎಂದು ಸಚಿವ ಸಿ.ಟಿ.ರವಿ ಛೇಡಿಸಿದರು. ವಿರೋಧ ಪಕ್ಷದ ನಾಯಕ ಎಸ್‌.ಆರ್.ಪಾಟೀಲ ಅವರು ಸಭಾಪತಿ ಅವರು ತಮಗೆ ಹೆಚ್ಚು ಹೊತ್ತು ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಸಿಟ್ಟಾದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಉತ್ತರ ನೀಡಲು ಸಜ್ಜಾದರೂ ಕೇಳಿಸಿಕೊಳ್ಳದ ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT