7

ನಾಳೆಯಿಂದ ಜೀವನ ದುಬಾರಿ

Published:
Updated:

ಬೆಂಗಳೂರು: ರೈತ ಸಮುದಾಯಕ್ಕೆ ಸಾಲಮನ್ನಾದ ಮತ್ತೊಂದು ಕಂತಿನ ‘ಸುಗ್ಗಿ’ಯ ಹುಗ್ಗಿ ಕೊಟ್ಟಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸರ್ವರ ಮೇಲೆ ಎಳೆದಿದ್ದ ತೆರಿಗೆಯ ಸುಡು ಬರೆಯನ್ನು ಹಾಗೆಯೇ ಮುಂದುವರಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ಗುರುವಾರ ಉತ್ತರ ನೀಡಿದ ಬಳಿಕ ತೆರಿಗೆ, ಸೆಸ್ ಏರಿಕೆಗೆ ಸಂಬಂಧಿಸಿದ ಧನವಿನಿಯೋಗ ಮಸೂದೆಗಳನ್ನು ಅವರು ಉಭಯ ಸದನಗಳಲ್ಲಿ ಮಂಡಿಸಿದರು. ಶುಕ್ರವಾರ ಈ ಮಸೂದೆಗಳಿಗೆ ಅನುಮೋದನೆ ಸಿಗಲಿದೆ. ತೆರಿಗೆ ಏರಿಕೆ ಪ್ರಹಾರ ತಕ್ಷಣದಿಂದಲೇ ಜಾರಿಗೆ ಬರಲಿದೆ. ಹೀಗಾಗಿ ವಿದ್ಯುತ್‌, ತೈಲ ಹಾಗೂ ಮದ್ಯ ಶನಿವಾರದಿಂದಲೇ ದುಬಾರಿಯಾಗುವುದು ಬಹುತೇಕ ಖಚಿತವಾಗಿದೆ.

ಮೋಟಾರು ವಾಹನಗಳ ಮೇಲಿನ ತೆರಿಗೆ ಮಾತ್ರ ಆಗಸ್ಟ್ 1ರಿಂದ ಜಾರಿಯಾಗಲಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಆಡಳಿತ ಪಕ್ಷದ (ಕಾಂಗ್ರೆಸ್‌–ಜೆಡಿಎಸ್)  ಶಾಸಕರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದರು. ತೆರಿಗೆ ಹೇರಿಕೆ ಕ್ರಮಗಳನ್ನು ಕೈಬಿಟ್ಟು, ಕೆಲವು ಪರಿಹಾರಗಳನ್ನು ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಅದು ಈಡೇರಲಿಲ್ಲ.

ಸುಸ್ತಿಸಾಲದ ಜತೆಗೆ ಚಾಲ್ತಿ ಸಾಲಗಳನ್ನು ಮನ್ನಾ ಮಾಡುವ ‘ಋಣ ಮುಕ್ತ ರೈತ’ ಘೋಷಣೆಯನ್ನು ಮಾಡಿದರು. ಅನ್ನಭಾಗ್ಯ ಯೋಜನೆಯಡಿ ಪ್ರತಿ ಘಟಕಕ್ಕೆ ನೀಡುತ್ತಿದ್ದ 7 ಕೆ.ಜಿ ಅಕ್ಕಿ ಬದಲು 5 ಕೆ.ಜಿಗೆ ಇಳಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದರು. ಈ ಬಗ್ಗೆ ಮರು ಪರಿಶೀಲಿಸುವ ಭರವಸೆ ಕೊಟ್ಟರೇ ವಿನಃ ಯಾವುದೇ ಘೋಷಣೆ ಮಾಡಲಿಲ್ಲ.

* ಸಹಕಾರಿ ಬ್ಯಾಂಕ್‌ಗಳಲ್ಲಿ ಚಾಲ್ತಿ ಖಾತೆಯಲ್ಲಿರುವ ₹ 1 ಲಕ್ಷದವರೆಗಿನ ಬೆಳೆಸಾಲ ಮನ್ನಾ. ಇದರಿಂದ ₹ 10,700 ಕೋಟಿ ಬೊಕ್ಕಸಕ್ಕೆ ಹೊರೆ.

* 2018ರ ಜುಲೈ 10ರವರೆಗೆ ಸಾಲ ಪಡೆದ ಚಾಲ್ತಿ ಖಾತೆಯ 22.23 ಲಕ್ಷ ರೈತರಿಗೆ ಅನುಕೂಲ

* 2017ರ ಡಿಸೆಂಬರ್‌ 31ರವರೆಗೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಬಾಕಿಯಿದ್ದ ₹ 2ಲಕ್ಷ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ

15 ದಿನಗಳಲ್ಲಿ ಶಿಕ್ಷಕರ ವರ್ಗಾವಣೆ

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು 15 ದಿನಗಳಲ್ಲಿ ಆರಂಭಿಸುವುದಾಗಿ ಶಿಕ್ಷಣ ಸಚಿವ ಎನ್‌.ಮಹೇಶ್‌ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ತಾರಾ ಅನೂರಾಧ ಅವರ ಪ್ರಶ್ನೆಗೆ ಉತ್ತರಿಸಿ, ವರ್ಗಾವಣೆಗೆ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ 10 ಅರ್ಜಿ ಸಲ್ಲಿಕೆಯಾಗಿದ್ದವು. ಇದರಲ್ಲಿ ಮೂರು ಪ್ರಕರಣಗಳು ಇತ್ಯರ್ಥಗೊಂಡಿದ್ದು, ಏಳು ಪ್ರಕರಣಗಳು ಒಂದೆರಡು ದಿನಗಳಲ್ಲಿ ಇತ್ಯರ್ಥಗೊಳ್ಳಲಿವೆ. ಅಲ್ಲದೆ, ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮ 2017ಕ್ಕೆ ತಿದ್ದುಪಡಿ ತರಲಾಗುವುದು. ಈ ಮೂಲಕ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಸೇವಾವಧಿ 5 ವರ್ಷಗಳಿಂದ 3 ವರ್ಷಕ್ಕೆ ಇಳಿಸಲಾಗುವುದು, ಕಡ್ಡಾಯ ವರ್ಗಾವಣೆಯಲ್ಲಿ ಕ್ಯಾನ್ಸರ್‌ ಮತ್ತು ಡಯಾಲಿಸಿಸ್‌ ಒಳಗಾಗಿರುವವರಿಗೆ ವಿನಾಯ್ತಿ ನೀಡಲಾಗುವುದು ಎಂದು ಮಹೇಶ್‌ ತಿಳಿಸಿದರು.

** ರಾಷ್ಟ್ರೀಕೃತ ಬ್ಯಾಂಕು ಸಾಲ ಕಟ್ಟದೆ ಎನ್‍ಓಸಿ ಕೊಡುವುದಿಲ್ಲ. ಸಾಲ ಮನ್ನಾ ರೈತರ ಮೂಗಿಗೆ ತುಪ್ಪ ಸವರುವ ಕೆಲಸ. ನಂಬಲು ಸಾಧ್ಯವೇ ಇಲ್ಲ.

-ಬಿ.ಎಸ್‌. ಯಡಿಯೂರಪ್ಪ, ವಿಧಾನಸಭೆ ವಿರೋಧಪಕ್ಷದ ನಾಯಕ

** ರೈತರ ಬಗ್ಗೆ ಬದ್ಧತೆ ನಿಮ್ಮೊಬ್ಬರಿಗೇ (ಯಡಿಯೂರಪ್ಪ) ಅಲ್ಲ; ನಮಗೂ ಇದೆ. ನಿಮಗೆ (ಬಿಜೆಪಿಗೆ) ಸಾಧ್ಯವಾಗದಿರುವುದು, ನಮಗೆ ಸಾಧ್ಯವಾಗುತ್ತದೆ

–ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 6

  Sad
 • 1

  Frustrated
 • 5

  Angry

Comments:

0 comments

Write the first review for this !