ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಪಟ್ಟಿ ಬಹುತೇಕ ಅಂತಿಮ; ಧಾರವಾಡ, ಬೆಂಗಳೂರು ದಕ್ಷಿಣ ಇನ್ನೂ ಗೊಂದಲ

3 ಶಾಸಕರಿಗೆ ಟಿಕೆಟ್‌?
Last Updated 22 ಮಾರ್ಚ್ 2019, 20:26 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ಎರಡು ದಿನಗಳಿಂದ ಅಳೆದು ತೂಗಿರುವ ಕಾಂಗ್ರೆಸ್ ನಾಯಕರು ತಮ್ಮ ಪಾಲಿಗೆ ಸಿಕ್ಕಿರುವ 20 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದು, ಪಟ್ಟಿ ಘೋಷಣೆ ಮಾತ್ರ ಬಾಕಿ ಇದೆ.

ತುಮಕೂರನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದರಿಂದ ಉಳಿದ 9 ಕಡೆಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ನೀಡಲಾಗಿದೆ. ಧಾರವಾಡ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹೆಸರು ಇನ್ನೂ ತೀರ್ಮಾನವಾಗಿಲ್ಲ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹಲವು ಸುತ್ತಿನ ಮಾತುಕತೆ ನಡೆಸಿದರು.

ಧಾರವಾಡ ಕ್ಷೇತ್ರದಲ್ಲಿ ಮಾಜಿ ಸಂಸದ ಐ.ಜಿ. ಸನದಿ ಪುತ್ರ ಶಾಕಿರ್ ಸನದಿ, ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಯುವ ನಾಯಕ ಸದಾನಂದ ಡಂಗನವರ ಅವರಲ್ಲಿ ಒಬ್ಬರಿಗೆ ಟಿಕೆಟ್‌ ನೀಡುವ ಬಗ್ಗೆ ಸಭೆ ಸಮ್ಮತಿ ಸೂಚಿಸಿದೆ. ತೀರ್ಮಾನವನ್ನು ರಾಹುಲ್ ಗಾಂಧಿ ವಿವೇಚನೆಗೆ ಬಿಡಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಪ್ರಧಾನಿ ನರೇಂದ್ರ ಸ್ಪರ್ಧಿಸಿದಲ್ಲಿ ಪ್ರಬಲ ಅಭ್ಯರ್ಥಿಯನ್ನು ಹಾಕಬೇಕು ಎಂಬ ಚರ್ಚೆ ನಡೆದಿದ್ದರಿಂದಾಗಿ ಅಲ್ಲಿಯ ಅಭ್ಯರ್ಥಿ ಯಾರೆಂದು ತೀರ್ಮಾನ ಮಾಡಿಲ್ಲ ಎನ್ನಲಾಗಿದೆ.

ತುಮಕೂರಿನಿಂದ ದೇವೇಗೌಡ ಸ್ಪರ್ಧೆ

‘ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದು ಇದೇ 25ರಂದು ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಶಿರಾ ಜೆಡಿಎಸ್‌ ಶಾಸಕ ಬಿ. ಸತ್ಯಾನಾರಾಯಣ ತಿಳಿಸಿದರು.

ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಶುಕ್ರವಾರ ರಾತ್ರಿ ತುಮಕೂರು ಜೆಡಿಎಸ್‌ ನಾಯಕರ ಸಭೆ ಬಳಿಕ ಅವರು ಈ ವಿಷಯ ತಿಳಿಸಿದರು. ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೂಡ ಭಾಗವಹಿಸಿದ್ದರು. ತುಮಕೂರು ಸುರಕ್ಷಿತ ಎಂಬ ಕಾರಣಕ್ಕೆ ಗೌಡರು ಅಲ್ಲಿಂದ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.

ಏಳು ಕ್ಷೇತ್ರಗಳಿಗೆ ಬಿಜೆಪಿ ಲೆಕ್ಕಾಚಾರ

ಗೆಲುವಿನ ಸಂಖ್ಯೆಯನ್ನು 22ರ ಗಡಿ ದಾಟಿಸಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ನಾಯಕರು, ಏಳು ಕ್ಷೇತ್ರಗಳ ಆಯ್ಕೆಗೆ ತಾಲೀಮು ನಡೆಸುತ್ತಿದ್ದಾರೆ.‌

ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ (ಮಾ.26) ಕೊನೆ ದಿನ. ಈ ಪೈಕಿ ಕೋಲಾರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಂಗಳೂರು ದಕ್ಷಿಣ ಕ್ಷೇತ್ರಗಳಿವೆ. ಛಲವಾದಿ ನಾರಾಯಣಸ್ವಾಮಿ ಹಾಗೂ ಚಿತ್ರದುರ್ಗ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾನಪ್ಪ ವಜ್ಜಲ್ ಅವರ ಮಧ್ಯೆ ಕೋಲಾರಕ್ಕೆ ಪೈಪೋಟಿ ಶುರುವಾಗಿದೆ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರ, ಕೊಪ್ಪಳ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಘಟಾನುಘಟಿಗಳು ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ಹೆಸರು ಅಂತಿಮಗೊಳಿಸಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT