ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಸ್ಫೋಟ ಪ್ರಕರಣ: ಬಕೆಟ್‌ ಮೇಲಿತ್ತು ‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’

ಮಹಾರಾಷ್ಟ್ರ ಚುನಾವಣೆ ನಂಟಿನ ಶಂಕೆ
Last Updated 22 ಅಕ್ಟೋಬರ್ 2019, 1:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದ 1ನೇ ಪ್ಲಾಟ್ ಫಾರಂನಲ್ಲಿ ಸೋಮವಾರ ನಿಗೂಢ ವಸ್ತು ಸ್ಫೋಟಗೊಂಡು ಆತಂಕ ಸೃಷ್ಟಿಸಿದೆ. ಸ್ಫೋಟಕ ಇದ್ದ ಪ್ಲಾಸ್ಟಿಕ್‌ ಬಕೆಟ್‌ ಮೇಲೆ ‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’ ಎಂದು ಬರೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಘಟನೆಯಲ್ಲಿ ಅರಳಿಕಟ್ಟಿ ಕಾಲೊನಿ ನಿವಾಸಿ, ರೈಲು ನಿಲ್ದಾಣದಲ್ಲಿ ಟೀ ಮಾರಾಟ ಮಾಡುತ್ತಿದ್ದ ಹುಸೇನ್‌ ಸಾಬ್ ನಾಯಕವಾಲೆ ಅವರ ಬಲಗೈ ಸುಟ್ಟು ಕರಕಲಾಗಿದೆ. ಅವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಂದಿಗಳ ಹಾವಳಿ ತಪ್ಪಿಸಲು ಬಳಸುವ ಫೀಲ್ಡ್‌ ಬಾಂಬ್‌ (ಕಡಿಮೆ ತೀವ್ರತೆಯ ಸ್ಫೋಟಕ) ರೀತಿಯ ಸ್ಫೋಟಕವಾಗಿದ್ದು, ಅದನ್ನು ಯಾವ ಕಾರಣಕ್ಕೆ ರೈಲಿನಲ್ಲಿ ಸಾಗಿಸುತ್ತಿದ್ದರು ಎಂಬುದು ನಿಗೂಢವಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.

ಬಾಂಬ್ ಇಟ್ಟಿದ್ದ ಬಕೆಟ್‌ ಮೇಲೆ ಮಹಾರಾಷ್ಟ್ರ ಶಾಸಕ ಪ್ರಕಾಶ ಅಬೀದ್‌ಕರ್‌ ಅವರ ಹೆಸರು ಕೂಡ ಇದ್ದು, ಇದು ಅಲ್ಲಿನ ಚುನಾವಣೆ ಜತೆಗೂ ತಳಕುಹಾಕಿಕೊಂಡಿರಬಹುದೇ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ವಿಜಯವಾಡದಿಂದ ಬೆಳಿಗ್ಗೆ 11.30ಕ್ಕೆ ಇಲ್ಲಿಗೆ ಬಂದು ನಿಂತಿದ್ದ ವಿಜಯವಾಡ–ಅಮರಾವತಿ ಎಕ್ಸ್‌ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ರಟ್ಟಿನ ಬಾಕ್ಸ್‌ ಇರುವುದು ಆರ್‌ಪಿಎಫ್‌ ಪೊಲೀಸರ ಕಣ್ಣಿಗೆ ಬಿತ್ತು. ಅದನ್ನು ಹುಸೇನ್‌ಸಾಬ್‌ ಅವರಿಂದ ತರಿಸಿ, ಸ್ಟೇಷನ್‌ ಮಾಸ್ಟರ್‌ ಕೊಠಡಿಯಲ್ಲಿ ಬಿಚ್ಚಿದರು. ರಟ್ಟಿನ ಬಾಕ್ಸ್‌ನಲ್ಲಿದ್ದ ಪ್ಲಾಸ್ಟಿಕ್‌ ಬಕೆಟ್‌ ತೆರೆದಾಗ, ಚಿಕ್ಕ ಚಿಕ್ಕ ಎಂಟು ಪ್ಲಾಸ್ಟಿಕ್‌ ಬಾಕ್ಸ್‌ಗಳು ಕಂಡು ಬಂದಿವೆ. ಅವುಗಳು ಅಲುಗಾಡದಂತೆ ಅದರ ಒಳಗೆ ಗೋಧಿ ತುಂಬಲಾಗಿತ್ತು.

ಅನುಮಾನ ಬಂದ ರೈಲ್ವೆ ಪೊಲೀಸರು, ಹುಸೇನ್‌ ಅವರಿಗೆ ಹೊರಗಡೆ ಹೋಗಿ ಒಂದು ಪ್ಲಾಸ್ಟಿಕ್ ಬಾಕ್ಸ್ ತೆರೆಯಲು ಸೂಚಿಸಿದರು. ಬಾಕ್ಸ್ ತೆರೆದಾಗ ಒಣಗಿದ ನಿಂಬೆ ಹಣ್ಣಿನ ಆಕಾರದ ಎರಡು ಉಂಡೆಗಳು ಕಂಡು ಬಂದಿವೆ. ಅವುಗಳಲ್ಲಿ ಒಂದನ್ನು ಹೊರ ತೆಗೆದ ಹುಸೇನ್‌, ಪರಿಶೀಲಿಸಲೆಂದು ನೆಲಕ್ಕೆ ಬಡಿದಾಗ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ 20 ಅಡಿ ದೂರದಲ್ಲಿರುವ ಸ್ಟೇಷನ್‌ ಮಾಸ್ಟರ್‌ ಕಚೇರಿಯ ತಡೆಗೋಡೆಯ ಗಾಜು ಪುಡಿಯಾಗಿದೆ. ಜೋರು ಸದ್ದಿಗೆ ಪ್ರಯಾಣಿಕರು ಭಯಗೊಂಡು ಓಡಿದರು.

ಶ್ವಾನ ದಳ ಹಾಗೂ ಬಾಂಬ್‌ ನಿಷ್ಕ್ರಿಯ ದಳ ಸಿಬ್ಬಂದಿ ತಕ್ಷಣ ಬಂದು ಪರಿಶೀಲಿಸಿದರು. ಬಕೆಟ್‌ನಲ್ಲಿದ್ದ ಏಳು ಪ್ಲಾಸ್ಟಿಕ್ ಬಾಕ್ಸ್‌ಗಳನ್ನು ನಿಲ್ದಾಣದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ತೆಗ್ಗು ತೆಗೆದು ಹೂಳಿ, ಅದರ ಮೇಲೆ ಉಸುಕಿನ ಚೀಲ ಇಟ್ಟು ಭದ್ರಪಡಿಸಿದರು. ತಜ್ಞರು ಬೆಂಗಳೂರಿನಿಂದ ಬಂದು ಪರಿಶೀಲನೆ ನಡೆಸಿದ ನಂತರ, ಅವುಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ.

‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’

ಪ್ಲಾಸ್ಟಿಕ್‌ ಬಕೆಟ್‌ ಮೇಲೆ ‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’ ಹಾಗೂ 'ಪ್ರಕಾಶ ಅಬಿದಕರ್, ಎಂ.ಎಲ್.ಎ. ಗರಗೋಟಿ, ಗುದರಗಡ ತಾಲ್ಲೂಕು, ಕೊಲ್ಲಾಪುರ ಜಿಲ್ಲೆ, ಎಂ.ಎಸ್ ಸ್ಟೇಟ್’ ಎಂದು ಬರೆಯಲಾಗಿದೆ.

ಎಲ್ಲಿಂದ ಬಂತು ಈ ಬಾಕ್ಸ್‌?

ಈ ಸ್ಫೋಟಕ ಇದ್ದ ಬಾಕ್ಸ್‌ ಎಲ್ಲಿಂದ? ಹೇಗೆ ಬಂತು ಎಂಬುದು ನಿಗೂಢವಾಗಿದೆ. ಅಮರಾವತಿಯಿಂದ ರೈಲು ಬಂದಿದ್ದು, ಮಾರ್ಗದಲ್ಲಿ ಸಿಗುವ ಎಲ್ಲ ನಿಲ್ದಾಣಗಳ ಸಿ.ಸಿ.ಟಿ.ವಿ ಕ್ಯಾಮರಾ ದೃಶ್ಯಗಳ ಪರಿಶೀಲನೆಗೆ ರೈಲ್ವೆ ಪೊಲೀಸರು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿನ ಸಿ.ಸಿ.ಟಿ,ವಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದೆ.

***

ಯಾವ ಸ್ಫೋಟಕ ಎಂಬುದು ಗೊತ್ತಾಗಿಲ್ಲ. ತಜ್ಞರು ಪರಿಶೀಲಿಸಿದ್ದು, ತನಿಖೆ ನಡೆದಿದೆ.

– ಎಂ.ಬಿ.ಬೋರಲಿಂಗಯ್ಯ, ರೈಲ್ವೆ ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT