‘ಫಣಿಯಮ್ಮ’ ಖ್ಯಾತಿಯ ಎಲ್‌.ವಿ. ಶಾರದಾ ಇನ್ನಿಲ್ಲ

ಗುರುವಾರ , ಏಪ್ರಿಲ್ 25, 2019
29 °C

‘ಫಣಿಯಮ್ಮ’ ಖ್ಯಾತಿಯ ಎಲ್‌.ವಿ. ಶಾರದಾ ಇನ್ನಿಲ್ಲ

Published:
Updated:
Prajavani

ಬೆಂಗಳೂರು: ‘ಫಣಿಯಮ್ಮ’ ಸೇರಿದಂತೆ ಹಲವು ಕಲಾತ್ಮಕ ಚಿತ್ರಗಳ ಮೂಲಕ ಸಿನಿಮಾ ವೀಕ್ಷಕರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿದ ಎಲ್.ವಿ. ಶಾರದಾ (78) ಅವರು ಶ್ವಾಸಕೋಶದ ತೊಂದರೆಯಿಂದ ಗುರುವಾರ ಮುಂಜಾನೆ ನಿಧನರಾದರು.

ಅವಿವಾಹಿತರಾಗಿದ್ದ ಅವರು ‘ವಂಶವೃಕ್ಷ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಎಸ್.ಎಲ್. ಭೈರಪ್ಪ ಅವರ ಕಾದಂಬರಿ ಆಧರಿಸಿದ ಈ ಸಿನಿಮಾದಲ್ಲಿ ಶಾರದಾ ಅವರದ್ದು ‘ಕಾತ್ಯಾಯಿನಿ’ಯ ಪಾತ್ರ. ತಮ್ಮ ಮೊದಲ ಚಿತ್ರದಲ್ಲಿನ ಅಭಿನಯಕ್ಕೆ ರಾಜ್ಯ ಸರ್ಕಾರದಿಂದ ಶ್ರೇಷ್ಠ ನಟಿ ಪ್ರಶಸ್ತಿ ಪಡೆದ ಹೆಗ್ಗಳಿಕೆ ಅವರದು. ಅಲ್ಲದೆ, ‘ವಾತ್ಸಲ್ಯ ಪಥ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ 1981
ರಲ್ಲಿ ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಕೂಡ ಲಭಿಸಿತ್ತು.

ಬೆಂಗಳೂರು ಸ್ಟಾಕ್‌ ಎಕ್ಸ್‌ಚೇಂಜ್‌ ಸ್ಥಾಪಕರಲ್ಲಿ ಒಬ್ಬರಾದ ಎಲ್.ಎಸ್. ವೆಂಕೋಜಿ ರಾವ್ ಅವರ ಪುತ್ರಿ ಶಾರದಾ. ಬಾಲ್ಯದಿಂದಲೂ ಸಂಗೀತ, ಸಾಹಿತ್ಯದತ್ತ ಒಲವು ಹೊಂದಿದ್ದ ಶಾರದಾ ಅವರು ಬಿ.ವಿ. ಕಾರಂತರ ಬಳಿ ‘ನನಗೆ ಯಾವುದಾದರೂ ನಾಟಕದಲ್ಲಿ ಅವಕಾಶ ಕೊಡಿ’ ಎಂದು ಕೇಳಿದ್ದರಂತೆ. ಇದರ ಪರಿಣಾಮವಾಗಿ ಶಾರದಾ ಅವರಿಗೆ ‘ವಂಶವೃಕ್ಷ’ ಸಿನಿಮಾದಲ್ಲಿ ‘ಕಾತ್ಯಾಯಿನಿ’ ಆಗುವ ಅವಕಾಶ ಲಭ್ಯವಾಯಿತು.

‘ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂದಿದ್ದು ನನ್ನ ಜವಾಬ್ದಾರಿ ಹೆಚ್ಚಿಸಿತು’ ಎಂದು ಶಾರದಾ ಅವರು ಹಿಂದೆ ಹೇಳಿದ್ದರು. ‘ಎರಡು ಕನಸು’ ಚಿತ್ರದಲ್ಲಿ ಕೂಡ ನಟಿಸುವ ಅವಕಾಶ ಶಾರದಾ ಅವರಿಗೆ ಬಂದಿತ್ತು. ಆದರೆ, ‘ವ್ಯಾಪಾರಿ ಚಿತ್ರಗಳಲ್ಲಿ ನಟಿಸುವುದಿಲ್ಲ’ ಎಂಬ ತೀರ್ಮಾನವನ್ನು ಅವರು ತೆಗೆದುಕೊಂಡರು. ಶಾರದಾ ಅವರು 1977ರಲ್ಲಿ ತೆರೆಗೆ ಬಂದ ‘ಒಂದು ಪ್ರೇಮದ ಕಥೆ’ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಜೊತೆ ಅಭಿನಯಿಸಿದ್ದರು.

‘ಫಣಿಯಮ್ಮ’ ಚಿತ್ರದಲ್ಲಿನ ಅವರ ನಟನೆ ಮನೆಮಾತಾಯಿತು. ಅಲ್ಲದೆ, ಈ ಚಿತ್ರದ ನಟನೆಗಾಗಿ ಅವರು ತಲೆಕೂದಲನ್ನು ತೆಗೆಸಿಕೊಂಡಿದ್ದು ಚರ್ಚೆಯ ವಸ್ತುವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಾರದಾ ಅವರು, ‘ಇದೆಲ್ಲ ಚರ್ಚೆಯ ವಿಚಾರವೇ ಅಲ್ಲ. ಪಾತ್ರಕ್ಕಾಗಿ ಕಲಾವಿದರು ಇದನ್ನೆಲ್ಲಾ ಮಾಡಲೇಬೇಕು’ ಎಂದು ಉತ್ತರ ಕೊಟ್ಟಿದ್ದರು.

‘ಭೂತಯ್ಯನ ಮಗ ಅಯ್ಯು’ ಅವರು ನಟಿಸಿದ ಮತ್ತೊಂದು ಅತ್ಯುತ್ತಮ ಚಿತ್ರ. ‘ಆದಿಶಂಕರಚಾರ್ಯ, ‘ಮಧ್ವಾಚಾರ್ಯ, ‘ನಕ್ಕಳಾ ರಾಜಕುಮಾರಿ’, ‘ಕಂಕಣ’, ‘ಹೇಮಾವತಿ’, ‘ಮೈತ್ರಿ’ ಅವರು ಅಭಿನಯಿಸಿದ ಪ್ರಮುಖ ಚಿತ್ರಗಳಾಗಿವೆ. ದೂರದರ್ಶನಕ್ಕಾಗಿ ಕೆಲವು ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !