ಮಹದಾಯಿ: ತಜ್ಞರ ಜತೆಗೆ ಚರ್ಚೆ ಇಂದು

7
ನದಿ ನೀರು ಹಂಚಿಕೆ: ಎಚ್ಚರಿಕೆಯ ನಡೆ ಇಡಲು ರಾಜ್ಯ ಸರ್ಕಾರ ನಿರ್ಧಾರ

ಮಹದಾಯಿ: ತಜ್ಞರ ಜತೆಗೆ ಚರ್ಚೆ ಇಂದು

Published:
Updated:

ಬೆಂಗಳೂರು: ಮಹದಾಯಿ ನದಿ ನೀರುಹಂಚಿಕೆ ಕುರಿತು ಸರ್ವಪಕ್ಷಗಳ ಮುಖಂಡರ ಜತೆಗೆ ಸಮಾಲೋಚನೆ ನಡೆಸಿ ಎಚ್ಚರಿಕೆಯ ನಡೆ ಇಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ಅಡಿನೀರನ್ನು ನ್ಯಾಯಮಂಡಳಿ ಹಂಚಿಕೆ ಮಾಡಿದೆ. ಮಹದಾಯಿ ನದಿ ನೀರಿನ ಪೂರ್ಣ ಪಾಲು ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಬಹುತೇಕ ಖಚಿತವಾಗಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗುರುವಾರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಕಾನೂನು ತಜ್ಞರು ಹಾಗೂ ಜಲ ತಜ್ಞರ ಸಭೆ ಕರೆದಿದ್ದಾರೆ. ಸರ್ವಪಕ್ಷ ಸಭೆ ಕರೆಯುವ ಹಾಗೂ ಮೇಲ್ಮನವಿ ಸಲ್ಲಿಸುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆ ಇದೆ.

ನ್ಯಾಯಮಂಡಳಿಯ ತೀರ್ಪು 12 ಸಂಪುಟಗಳಷ್ಟಿದ್ದು, ಅದನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ಬಳಿಕ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದು
ಕೊಂಡು ಮುಂದಿನ ನಡೆ ಇಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಬಳ್ಳಾರಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ‘ನ್ಯಾಯಮಂಡಳಿ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಸರ್ವಪಕ್ಷಗಳ ಜೊತೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸಲಾಗುವುದು’ ಎಂದರು.

‘ನ್ಯಾಯಮಂಡಳಿಯು ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಘೋಷಿಸದೇ ಕೇಂದ್ರಕ್ಕೆ ವರದಿ ಸಲ್ಲಿಸಿರುವುದು ಅಚ್ಚರಿ ತಂದಿದೆ. ಯಾವ ಚರ್ಚೆಗಳನ್ನು ಆಧರಿಸಿ ತೀರ್ಪು ಪ್ರಕಟಿಸಲಾಗಿದೆ ಎಂಬುದು ಜನರಿಗೆ ಹೇಗೆ ಗೊತ್ತಾಗಬೇಕು’ ಎಂದು ಅವರು ಪ್ರಶ್ನಿಸಿದರು.

ತೀರ್ಪು ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ ಎಂಬ ಈ ಹಿಂದಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಅವರ ಬಳಿ ತೀರ್ಪಿನ ಬಗ್ಗೆ ಸಂಪೂರ್ಣ ಮಾಹಿತಿ ಇದ್ದಂತಿಲ್ಲ. ನಾನು ಸಂಪೂರ್ಣ ಮಾಹಿತಿ ಪಡೆದೇ ಪ್ರತಿಕ್ರಿಯಿಸುತ್ತಿದ್ದೇನೆ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಿರುವುದು ಸ್ಪಷ್ಟ’ ಎಂದು ಪ್ರತಿಪಾದಿಸಿದರು.

‘ಹದಿಮೂರುವರೆ ಟಿಎಂಸಿ ನೀರು ಲಭಿಸಿರುವುದು ಕುಡಿಯುವುದಕ್ಕೆ, ರೈತರಿಗೆ ಸಾಕಾಗುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ತುಮಕೂರಿನಲ್ಲಿ ಪ್ರತಿಕ್ರಿಯಿಸಿದರು.

‘ತೀರ್ಪು ನಮಗೆ ಸಮಾಧಾನ ತಂದಿಲ್ಲ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

**

ಹುಬ್ಬಳ್ಳಿಯಲ್ಲಿ ಮಹಾ ಸಮಾವೇಶ

ಹುಬ್ಬಳ್ಳಿ: ಕಳಸಾ– ಬಂಡೂರಿ ನೀರು, ಮಲಪ್ರಭಾ ಅಣೆಕಟ್ಟೆ ಸೇರುವವರೆಗೆ ನವಲಗುಂದದಲ್ಲಿ ನಡೆಸುತ್ತಿರುವ ಹೋರಾಟವನ್ನು ಮುಂದುವರಿಸಲು ಮಲಪ್ರಭಾ ಮಹದಾಯಿ, ಕಳಸಾ– ಬಂಡೂರಿ ರೈತ ಹೋರಾಟ ಸಮಿತಿ ನಿರ್ಧರಿಸಿದೆ. ಜತೆಗೆ ಮುಂದಿನ ಹೋರಾಟದ ನಡೆ ಕುರಿತು ಚರ್ಚಿಸಲು ಹುಬ್ಬಳ್ಳಿಯಲ್ಲಿ ಗುರುವಾರ (ಆ.16) ಮಹದಾಯಿಗಾಗಿ ಮಹಾ ಸಮಾವೇಶ ಆಯೋಜಿಸಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !