ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಗಳಲ್ಲಿ ಮಿಂದೆದ್ದ ವಿರಾಗ ಮೂರ್ತಿ

ಧರ್ಮಸ್ಥಳದಲ್ಲಿ ಮನಸೂರೆಗೊಂಡ ಮಹಾಮಸ್ತಕಾಭಿಷೇಕ
Last Updated 16 ಫೆಬ್ರುವರಿ 2019, 20:13 IST
ಅಕ್ಷರ ಗಾತ್ರ

ಧರ್ಮಸ್ಥಳ: ರತ್ನಗಿರಿಯಲ್ಲಿ ಬಾಹುಬಲಿಗೆ ಹಾಲು, ಅಕ್ಕಿಹಿಟ್ಟು, ಅರಿಸಿನ, ಕಷಾಯ, ಚಂದನಗಳಿಂದ ಅಭಿಷೇಕ ಮಾಡುತ್ತಿದ್ದಂತೆ ಬಣ್ಣಗಳ ಕಾಮನಬಿಲ್ಲು ಮೂಡಿತು. ಮುಗಿಲಿನಾಚೆ ಚಾಚಿ ನಿಂತ ವರ್ಣಮಯ ಮಹಾ ವಿರಾಗಿಯ ತುಟಿಯಂಚಿನಲ್ಲಿ ಮುಗುಳ್ನಗುವಿನ ಭಾವ ಮಿಂಚಿತು. ಹಿನ್ನೆಲೆಯಲ್ಲಿ ಭಜನೆ, ಕೀರ್ತನೆಗಳ ಝೇಂಕಾರ ಕರ್ಣಾನಂದ ಕೊಡುತ್ತಿತ್ತು.

ಧರ್ಮಸ್ಥಳದಲ್ಲಿ ಬಾಹುಬಲಿಗೆ ಕ್ಷೀರಾಭಿಷೇಕ-ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಧರ್ಮಸ್ಥಳದಲ್ಲಿ ಬಾಹುಬಲಿಗೆ ಕ್ಷೀರಾಭಿಷೇಕ-ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ

ನಾಲ್ಕು ದಶಕಗಳಿಂದ ಜನರನ್ನು ಸೆಳೆಯುತ್ತಿರುವ ಗೊಮ್ಮಟನಿಗೆಶನಿವಾರ ಸಂಸ್ಥಾಪಕ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರು ಮಾಡಿದ 4ನೇ ಮಹಾಮಸ್ತಕಾಭಿಷೇಕವನ್ನು ಕಂಡಾಗ ಸಾವಿರಾರು ಮಂದಿಗಾದ ಅನುಭವದ ಸಾರಾಂಶ ಇದು.

ರಾಜ್ಯದಲ್ಲಿರುವ ಮುಗಿಲೆತ್ತರಕ್ಕೆ ಚಾಚಿರುವ ಗೊಮ್ಮಟ ವಿಗ್ರಹಗಳ ಪೈಕಿ ಮಾನವ/ ಯಂತ್ರ ಸಹಾಯದಿಂದಪ್ರತಿಷ್ಠಾಪಿಸುವ ಸಾಹಸ ನಡೆದಿರುವುದು ಧರ್ಮಸ್ಥಳದಲ್ಲಿ. ಸುಮಾರು 210 ಟನ್‌ ತೂಕದ ಬಾಹುಬಲಿ ಮೂರ್ತಿಯನ್ನು ಕಾರ್ಕಳದಿಂದ (65 ಕಿ.ಮೀ.ದೂರ) ಸಾಗಿಸಿ ತಂದ ಸಾಹಸವೂ ರಾಜ್ಯದ ರೋಚಕ ಇತಿಹಾಸಗಳಲ್ಲಿ ಒಂದು. ಇಂತಹ ಬಾಹುಬಲಿಗೆ 4ನೇ ಬಾರಿಗೆ ಮಹಾಮಸ್ತಕಾಭಿಷೇಕ ಇದೇ 9ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಆರಂಭವಾಗಿತ್ತು.

ಶನಿವಾರ 1008 ಕಲಶಗಳಿಂದ ಅಭಿಷೇಕ ನಡೆಯುವ ಮೂಲಕ ಸುಮಾರು ಐದೂವರೆ ತಾಸು ರತ್ನಗಿರಿಯಲ್ಲಿ ಭಕ್ತಿಯ ಪರಾಕಾಷ್ಠೆ ಮೇಳೈಸಿತು. ಕಣ್ಣಿಗೆ ಹಬ್ಬದ ಅನುಭವವಾಯಿತು.

ಬೆಳಿಗ್ಗೆ 6.30ಕ್ಕೆ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಿಂದ ಭವ್ಯ ಅಗ್ರೋದಕ ಮೆರವಣಿಗೆರತ್ನಗಿರಿಗೆ ತಲುಪಿದ ಬಳಿಕ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಸ್ತಕಾಭಿಷೇಕ ಆರಂಭವಾಯಿತು.

ಅರಶಿನ ಅಭಿಷೇಕ
ಅರಶಿನ ಅಭಿಷೇಕ

8.45ರ ಮೀನ ಲಗ್ನದಲ್ಲಿ ಮಹಾನ್‌ ವಿರಾಗಿಗೆ ವೀರೇಂದ್ರ ಹೆಗ್ಗಡೆ ಅವರಿಂದ ಮೊದಲಾಗಿ ಜಲಾಭಿಷೇಕ ಆರಂಭವಾಯಿತು. ಶ್ರವಣಬೆಳಗೊಳಗದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು 9 ಗಂಟೆ ಸುಮಾರಿಗೆ ಅಭಿಷೇಕ ಮಾಡಿದರು. ಹೊಂಬುಜ ಜೈನ ಮಠದದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆಯ ಚಾರು
ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೂ ಅಭಿಷೇಕ ಮಾಡಿದರು. ಸುಮಾರು 11.30ರ ವರೆಗೂ ಜಲಾಭಿಷೇಕ ಮುಂದುವರಿಯಿತು. ಬಳಿಕ ಎಳನೀರಿನ ಅಭಿಷೇಕ ನಡೆಯಿತು.

ಕಬ್ಬಿನ ಹಾಲಿನ ಅಭಿಷೇಕದ ಬಳಿಕ ನಡೆದ ಕ್ಷೀರಾಭಿಷೇಕದಲ್ಲಿ ಬಾಹುಬಲಿಯ ಸೊಬಗು ವಿಶಿಷ್ಟ ಅನುಭವ ಕೊಡುವ ಮಹಾಮೂರ್ತಿ
ಯಂತೆ ಕಾಣಿಸಿತು. ಮಸ್ತಕದಿಂದ ಪಾದದವರೆಗೆ ಹರಿದ ಹಾಲಿನ ಹಿನ್ನೆಲೆಯಲ್ಲಿ ಕಂಡ ಕರಿ ಶಿಲೆ ವಿಶಿಷ್ಟ ಅನುಭವ ಒದಗಿಸಿತು. ಬಳಿಕ ಅಕ್ಕಿಹಿಟ್ಟಿನ ಅಭಿಷೇಕ ಗೊಮ್ಮಟನಿಗೆ ಮಂಜಿನ ಪರದೆ ಎಳೆದಂತಹ ಚಿತ್ರಣ ಒದಗಿಸಿತು.

ಅರಶಿನ, ಕಷಾಯ, ಚತುಷ್ಕೋಣ ಕಲಶಾಭಿಷೇಕದಲ್ಲಿ ಪಾವನವಾದ ಮಹಾಮೂರ್ತಿಗೆ ಚಂದನ ಅಭಿಷೇಕ ನಡೆದಾಗ ಕೆಂಪು ಎಲ್ಲೆಲ್ಲೂ ರಾರಾಜಿಸಿತು.ಮಹಾತಪಸ್ವಿಯನ್ನು ಈ ವರ್ಣದಲ್ಲಿ ನೋಡಬೇಕು ಎಂಬ 12 ವರ್ಷಗಳ ಬಯಕೆ ಅಲ್ಲಿ ಈಡೇರಿತು.

ಅಕ್ಕಿಹಿಟ್ಟಿನ ಅಭಿಷೇಕ
ಅಕ್ಕಿಹಿಟ್ಟಿನ ಅಭಿಷೇಕ


ಬಳಿಕ ಅಷ್ಟಗಂಧ ಅಭಿಷೇಕ ನಡೆದು, ಪುಷ್ಪವೃಷ್ಟಿ, ಸುವರ್ಣ, ಬೆಳ್ಳಿ ಹಾಗೂ ರತ್ನಗಳ ವೃಷ್ಟಿ ಬಳಿಕ ಪೂರ್ಣ ಕುಂಭ ಅಭಿಷೇಕ, ಮಹಾಮಂಗಳಾರತಿಯೊಂದಿಗೆ ಶನಿವಾರದ ಮಹಾಮಸ್ತಕಾಭಿಷೇಕಕೊನೆಗೊಂಡಿತು.

ಭಾನುವಾರ ಮತ್ತು ಸೋಮವಾರವೂ ಹೆಗ್ಗಡೆ ಕುಟುಂಬದವರಿಂದಲೇ ಮಹಾಮಸ್ತಕಾಭಿಷೇಕ ನಡೆಯಲಿದೆ. ಇದೇ 19 ರಂದು ಕರ್ನಾಟಕ ಜೈನ ಚಾರಿಟಬಲ್ ಟ್ರಸ್ಟ್ ವತಿಯಿಂದ, ಮಾರ್ಚ್‌ 9 ರಂದು ಕನಕಗಿರಿ ಮಠ, 10ರಂದು ಅರಹಂತ ಗಿರಿ ಮಠ, 16ರಂದು ಬೆಂಗಳೂರಿನ ಜೈನ ಮಹಿಳಾ ಒಕ್ಕೂಟ, 17ರಂದು ಮೂಡುಬಿದಿರೆ ಜೈನ ಸಮಾಜದ ವತಿಯಿಂದ ಮಸ್ತಕಾಭಿಷೇಕ ನಡೆಯಲಿದೆ.

ರತ್ನಗಿರಿಯಲ್ಲಿ ಗೊಮ್ಮಟನ ಸನಿಹದಲ್ಲಿ ಸ್ಥಳಾವಕಾಶ ಕಡಿಮೆ. ಹೀಗಾಗಿ ಅಟ್ಟಳಿಗೆ ನಿರ್ಮಿಸಿ ಸಾವಿರಾರು ಮಂದಿಗೆ ಮಹಾಮಸ್ತಕಾಭಿಷೇಕ ನೋಡುವ ಅವಕಾಶ ಕಲ್ಪಿಸಲಾಗಿತ್ತು. ಇನ್ನೂ ಸಾವಿರಾರು ಮಂದಿ ಹೊರಗೆ ಕಾಯುತ್ತಿದ್ದರು.

ರತ್ನಗಿರಿಯಲ್ಲಿ ಸ್ವಲ್ಪ ಹೊರಭಾಗದಿಂದ ಅಭಿಷೇಕ ನೋಡುವ ಅವಕಾಶವನ್ನು ಅವರೆಲ್ಲರಿಗೂ ಒದಗಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಭಟ್ಟಾರಕರು, ಜೈನ ಮುನಿಗಳು ಬಂದಿದ್ದರು. ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ,ಡಾ.ಕಮಲಾ ಹಂಪನಾ, ಡಾ. ಬಿ.ಪಿ. ಸಂಪತ್ ಕುಮಾರ್ ಮಸ್ತಕಾಭಿಷೇಕದ ವೀಕ್ಷಕ ವಿವರಣೆ ನೀಡಿದರು.

ಬಾಹುಬಲಿಗೆ ಪುಷ್ಪಮಾಲೆ
ಬಾಹುಬಲಿಗೆ ಪುಷ್ಪಮಾಲೆ

ಜೈನ ಚರಿತ್ರೆಯಲ್ಲಿ ಹೆಗ್ಗಡೆ ಛಾಪು

ಆದಿಪುರಾಣ ಮೂಲಕ ಸಾಹಿತ್ಯದಲ್ಲಿ, ಶ್ರವಣಬೆಳಗೊಳ ಮೂಲಕ ಶಿಲೆಯಲ್ಲಿ ವಿರಾಜಮಾನವಾಗಿರುವ ಬಾಹುಬಲಿ, ಪಂಚಮಹಾವೈಭವ ಮೂಲಕ ಸಾಂಸ್ಕೃತಿಕವಾಗಿ ವಿರಾಜಮಾನವಾಗುವ ಅವಕಾಶ ಧರ್ಮಸ್ಥಳದಲ್ಲಿ ಒದಗಿದೆ. ಇಂತಹ ವಿಶಿಷ್ಟ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಪತ್ನಿ ಹೇಮಾವತಿ ಹೆಗ್ಗಡೆ ಅವರು ಜೈನ ಇತಿಹಾಸದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವಂತಾಗಿದೆ ಎಂದು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಬಾಹುಬಲಿಯ ಜೀವನ ಚರಿತ್ರೆಯನ್ನು ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಪಂಚಮಹಾಕಲ್ಯಾಣದ ಮೂಲಕ ಸಾದರಪಡಿಸಲಾಗುತ್ತದೆ. ಆದರೆ ಧರ್ಮಸ್ಥಳದಲ್ಲಿ ಇದೇ 11ರಿಂದ 15ರವರೆಗೆ ನೃತ್ಯ ರೂಪಕಗಳ ರೂಪದಲ್ಲಿ ಪಂಚಮಹಾವೈಭವ ಸಾವಿರಾರು ಜನರ ಹೃದಯವನ್ನು ನಾಟಿತ್ತು. ಈ ಕಾರಣಕ್ಕಾಗಿಯೇ ಭಟ್ಟಾರಕರು ಈ ಅಭಿಮಾನದ ಮಾತನ್ನು ಆಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT