ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ರಸ್ತೆ

ಕಾಮಗಾರಿಗಳಿಂದ ವನ್ಯಜೀವಿಗಳ ಉಳಿವಿಗೆ ಸಂಚಕಾರ l ಪರಿಸರ ಕಾರ್ಯಕರ್ತರ ಕಳವಳ
Last Updated 20 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕೇಂದ್ರ ಭಾಗ (ಕೋರ್‌ ಏರಿಯಾ), ಮೀಸಲು (ಬಫರ್‌) ಪ್ರದೇಶ ಹಾಗೂ ದಾಂಡೇಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಕಡೆ ಅಕ್ರಮವಾಗಿ ರಸ್ತೆ, ಸೇತುವೆ ಕಾಮಗಾರಿಗಳನ್ನು ನಡೆಸಲಾಗಿದೆ.

‘ವನ್ಯಜೀವಿಗಳ ಸಂರಕ್ಷಿತ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆ ಅಗತ್ಯ ಅನುಮತಿಯನ್ನೇ ಪಡೆದುಕೊಂಡಿಲ್ಲ’ ಎಂದು ವನ್ಯಜೀವಿ ಕಾರ್ಯಕರ್ತರು ಆರೋಪಿಸಿದ್ದಾರೆ. ಸಂರಕ್ಷಿತ ಪ್ರದೇಶದಲ್ಲಿ ನಡೆದಿರುವ ಈ ಕಾಮಗಾರಿಗಳಿಂದ ವನ್ಯಜೀವಿಗಳ ಉಳಿವಿಗೆ ಸಂಚಕಾರ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿ
ಸಿದ್ದಾರೆ.

ದೂರುಗಳೇನು?: ಹುಲಿ ಸಂರಕ್ಷಿತ ಪ್ರದೇಶ, ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಲ್ಲಿ ರಸ್ತೆ, ಸೇತುವೆಗಳನ್ನು ದುರಸ್ತಿ ಮಾಡುವುದಕ್ಕೆ ಅವಕಾಶವಿದೆ. ಆದರೆ ಹೊಸ ರಸ್ತೆಗಳನ್ನು ನಿರ್ಮಿಸುವಂತಿಲ್ಲ. ಈಗಿರುವ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದಕ್ಕೆ, ವಿಸ್ತರಣೆ ಮಾಡುವುದಕ್ಕೆ ಹಾಗೂ ಸೇತುವೆಗಳನ್ನು ನಿರ್ಮಿಸುವುದಕ್ಕೆ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ರಾಜ್ಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿ, ಅದಕ್ಕಿಂತಲೂ ಮುಖ್ಯವಾಗಿ ಸುಪ್ರೀಂ ಕೋರ್ಟ್‌ನ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಈ ಎಲ್ಲ ನಿಯಮಗಳನ್ನೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ.

‘ಕಾಮಗಾರಿಗೆ ಅನುಮತಿ ಪಡೆಯುವ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಲೆಯನ್ನೇ ಕೆಡಿಸಿಕೊಂಡಿಲ್ಲ’.

‘ಅಕ್ರಮವಾಗಿ ಕಾಮಗಾರಿ ನಡೆಸುತ್ತಿರುವುದನ್ನು ತಡೆಯಲು ವಲಯ ಅರಣ್ಯ ಅಧಿಕಾರಿಗಳು ಹಾಗೂ ತಳಮಟ್ಟದ ಸಿಬ್ಬಂದಿ ಮುಂದಾಗುತ್ತಾರೆ. ಅವರೇನಾದರೂ ಜಾಸ್ತಿ ಪ್ರಶ್ನೆ ಮಾಡಿದರೆ ಅಂತಹ ಸಿಬ್ಬಂದಿಯನ್ನೇ ವರ್ಗಾವಣೆ ಮಾಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಬದ್ಧತೆಯಿಂದ ಕೆಲಸ ಮಾಡುವುದಾದರೂ ಹೇಗೆ’ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು ಪ್ರಶ್ನಿಸಿದರು.

‘ಕಾಮಗಾರಿ ನಡೆಸುವಾಗ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಂಶಗಳು ಉಲ್ಲಂಘನೆ ಆಗುತ್ತಿರುವ ಅಂಶ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಿಳಿಯದಿರುವ ವಿಚಾರ ಏನಲ್ಲ. ಈ ಕುರಿತು ದೂರು ನೀಡಿದ್ದರೂ ಅವರು ಕಾಮಗಾರಿಗಳನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.

‘ತನಿಖೆಗೆ ಸ್ವತಂತ್ರ ಸಮಿತಿ ರಚಿಸಿ’

‘ಸಂರಕ್ಷಿತ ಪ್ರದೇಶಗಳಲ್ಲಿ ಅಕ್ರವಾಗಿ ಕಾಮಗಾರಿ ನಡೆಸಿರುವ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ಸಮಿತಿಯನ್ನು ರಚಿಸಬೇಕು. ವನ್ಯಜೀವಿ ಪ್ರದೇಶದಲ್ಲಿ ಅನುಮತಿ ಪಡೆಯದೆ ಕಾಮಗಾರಿ ನಡೆಸಿದ್ದರೂ ಕ್ರಮ ಕೈಗೊಳ್ಳದ ದಾಂಡೇಲಿ ಹಾಗೂ ಅಣಶಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು, ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ, ಮುಖ್ಯ ವನ್ಯಜೀವಿ ಪರಿಪಾಲಕರು ಹಾಗೂ ಅರಣ್ಯ ಪಡೆಯ ಮುಖ್ಯಸ್ಥರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ವನ್ಯಜೀವಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

‘ಹುಲಿ ಸಂರಕ್ಷಣಾ ಪ್ರಾಧಿಕಾರವೂ ವನ್ಯಜೀವಿಗಳ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಬಗ್ಗೆ ದೂರು ನೀಡಿದಾಗಲೂ ಅರಣ್ಯ ಇಲಾಖೆಯಿಂದ ವರದಿ ಕೇಳುವುದರ ಹೊರತಾಗಿ ಬೇರಾವ ಕ್ರಮವನ್ನೂ ಈ ಪ್ರಾಧಿಕಾರ ನಡೆಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂರಕ್ಷಿತ ಪ್ರದೇಶ: ಕಾಮಗಾರಿ ಎಲ್ಲೆಲ್ಲಿ?

ಕಾಮಗಾರಿ; ವೆಚ್ಚ (₹ಗಳಲ್ಲಿ)

ಶಿವಪುರ– ನಂದಿಗದ್ದೆ ಬಳಿ ತೂಗುಸೇತುವೆ; 3 ಕೋಟಿ

ಶಿವಪುರ– ಪಂಚಲಿಂಗೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ; 4.9 ಕೋಟಿ

ಕಾಳಿ ನದಿ ಉಗಮ ಸ್ಥಾನದ ರಸ್ತೆ ಅಭಿವೃದ್ಧಿ; 2 ಕೋಟಿ

ಉಳವಿ ಡಿಗ್ಗಿ– ಗೋವಾ ಗಡಿ ರಸ್ತೆಯಲ್ಲಿ 4 ಕಡೆ ಸೇತುವೆ; 7.28 ಕೋಟಿ

ಬಾಜಾರ್‌ ಕುಣಂಗ್‌ ಗ್ರಾಮದ ಗಣಸೋಲಿ ಬಳಿ ಸೇತುವೆ; 1 ಕೋಟಿ

ಡೋಕ್ರಪ್ಪ ಘಾಟಿ ರಸ್ತೆ ಅಭಿವೃದ್ಧಿ; 2 ಕೋಟಿ

ಡೋಕ್ರಪ್ಪ ಘಾಟಿ ರಸ್ತೆಯ ಚಂದ್ರೇಶ್ವರ ದೇವಸ್ಥಾನದ ಅಭಿವೃದ್ಧಿ; 4.85 ಕೋಟಿ

ಕುಂಬಾರವಾಡ ವಲಯದ ವಾಘ್ಬಂದ್‌– ಡೇರಿಯ, ತೇರಾಳಿ, ಪಾತಾಗುಡಿ ರಸ್ತೆ ಅಭಿವೃದ್ಧಿ; 6.10 ಕೋಟಿ

ಉಳವಿ– ಪಂಚಲಿಂಗೇಶ್ವರ ದೇವಸ್ಥಾನದ ರಸ್ತೆ ಅಭಿವೃದ್ಧಿ; 3.9 ಕೋಟಿ

ಡಿಗ್ಗಿ– ದೂಧ್‌ಮಳಾ, ಬೋಂಡೇಲಿ ರಸ್ತೆ ನಿರ್ಮಾಣ; 2 ಕೋಟಿ

***

ಅಂಕಿ–ಅಂಶ

100 ಕೋಟಿ

ಸಂರಕ್ಷಿತ ಪ್ರದೇಶದಲ್ಲಿ ಕೈಗೊಂಡಿರುವ ಕಾಮಗಾರಿಗಳ ಅಂದಾಜು ವೆಚ್ಚ

61

ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT