ಭಾನುವಾರ, ಸೆಪ್ಟೆಂಬರ್ 15, 2019
23 °C

ಖರ್ಗೆಯೇ ಮುಖ್ಯಮಂತ್ರಿ ಆಗಲಿ: ವಿಶ್ವನಾಥ್

Published:
Updated:

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾರೆಲ್ಲ ಮುಖ್ಯಮಂತ್ರಿ ಆಗಬಹುದು ಎಂಬ ಹೇಳಿಕೆಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಅತ್ಯಂತ ಸಮರ್ಥರಿರುವ ಮಲ್ಲಿಕಾರ್ಜುನ ಖರ್ಗೆ ಅವರೇ ಏಕೆ ಮುಖ್ಯಮಂತ್ರಿ ಆಗಬಾರದು ಎಂದಿದ್ದಾರೆ.

‘ಸಾಕಷ್ಟು ಹಿಂದೆಯೇ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು‘ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಗಲು ಸಾಕಷ್ಟು ಮಂದಿ ಸಮರ್ಥರು ಇದ್ದಾರೆ. ಜೆಡಿಎಸ್‌ನಲ್ಲೂ ಎಚ್.ಡಿ.ರೇವಣ್ಣ (ಕುಮಾರಸ್ವಾಮಿ ಸಹೋದರ) ಅವರಂಥವರು ಇದ್ದಾರೆ’ ಎಂದು ಹೇಳಿದ್ದರು. ಸಿದ್ದರಾಮಯ್ಯ ಮಾತು ಗಮನಿಸಿದರೆ, ಕುಮಾರಸ್ವಾಮಿ ಹೇಳಿಕೆಯಿಂದ ಹತಾಶರಾದಂತೆ ಕಾಣುತ್ತಾರೆ ಎಂದು ಟೀಕಿಸಿದ್ದಾರೆ.

‘ಸಿದ್ದರಾಮಯ್ಯ ಅವರೇ ಏಕೆ ಮುಂದಿನ ಮುಖ್ಯಮಂತ್ರಿ ಆಗಬೇಕು. ಅವರಿಗಿಂತ ಸಮರ್ಥರಾಗಿರುವ ಖರ್ಗೆ ಏಕೆ ಆಗಬಾರದು’ ಎಂದು ಪ್ರಶ್ನಿಸಿದ್ದಾರೆ.

‘ಖರ್ಗೆ ಅವರು ಸಮರ್ಥ, ಎತ್ತರಕ್ಕೆ ಬೆಳೆದವರು. ಅವರನ್ನು ಮತ್ತೊಬ್ಬ ನಾಯಕನಿಗೆ ಹೋಲಿಸಲು ಸಾಧ್ಯವಿಲ್ಲ. 2013 ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಖರ್ಗೆ ಅವರನ್ನು ಸೋಲಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆಗುವ ಮೂಲಕ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೇರಿದರು’ ಎಂದಿದ್ದಾರೆ.

ರಾಜ್ಯ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಖರ್ಗೆ ದೊಡ್ಡ ಪ್ರಮಾಣದ ಕೊಡಗೆ ನೀಡಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ.

Post Comments (+)