ಮಂಗಳೂರು ವಿವಿ: ನೇಮಕಕ್ಕೆ ಮುನ್ನವೇ ಭ್ರಷ್ಟ ವಾಸನೆ

7
ಕುಲಪತಿ ಹುದ್ದೆಗೆ ಪ್ರೊ.ಸೋಮಶೇಖರ್‌ ಹೆಸರು ಶಿಫಾರಸು

ಮಂಗಳೂರು ವಿವಿ: ನೇಮಕಕ್ಕೆ ಮುನ್ನವೇ ಭ್ರಷ್ಟ ವಾಸನೆ

Published:
Updated:

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಶಿಫಾರಸುಗೊಂಡವರ ಮೂವರ ಪೈಕಿ ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಪ್ರೊ.ಆರ್‌.ಕೆ. ಸೋಮಶೇಖರ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಅವರ ವಿರುದ್ಧ ಈಗಾಗಲೇ ಭ್ರಷ್ಟಾಚಾರದ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿವೆ.

ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರಾಗಿದ್ದ ವೇಳೆ ಸೋಮಶೇಖರ್‌ ಅವ್ಯಹಾರದಲ್ಲಿ ಶಾಮೀಲಾಗಿದ್ದ ಆರೋಪ ಹೊತ್ತಿದ್ದರು. ಅದಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಸಿದ್ಧಪಡಿಸುವಂತೆ ಸರ್ಕಾರ ವಿಶ್ರಾಂತ ಕುಲಪತಿ ಪ್ರೊ. ಎಂ.ಐ. ಸವದತ್ತಿ ಅವರಿಗೆ 2013ರಲ್ಲಿ ಸೂಚಿಸಿತ್ತು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಭಾಗದ ಮುಖ್ಯಸ್ಥರಾಗಿದ್ದಾಗ ವಿವಿಗೆ ಬರಬೇಕಾಗಿದ್ದ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದು, ವಿವಿಗೆ ಕೋಟಿಗಟ್ಟಲೆ ನಷ್ಟು ಉಂಟು ಮಾಡಿರುವುದು, ಬ್ಲಾಕ್‌ ಲಿಸ್ಟ್‌ನಲ್ಲಿರುವ ಉಪನ್ಯಾಸಕರನ್ನು ವಿವಿ ಪರಿನಿಯಮ ಉಲ್ಲಂಘಿಸಿ ಪರೀಕ್ಷಾ ಕಸ್ಟೋಡಿಯನ್‌ ಆಗಿ ನೇಮಿಸಿರುವುದು ಮತ್ತು ಮೌಲ್ಯಮಾಪನ‌ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳನ್ನು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ 2013ರಲ್ಲಿ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಅವರು ಆದೇಶಿಸಿದ್ದರು.

ಆರೋಪಗಳ ಕುರಿತು ಸುದೀರ್ಘ ತನಿಖೆ ನಡೆಸಿದ ಪ್ರೊ. ಎಂ. ಐ. ಸವದತ್ತಿ ಅವರು, ಪ್ರೊ. ಕೆ. ಆರ್‌. ಸೋಮಶೇಖರ್‌ ಅವರು ವಿಶ್ವವಿದ್ಯಾಲಯ ನಿಯಮಗಳನ್ನು ಉಲ್ಲಂಘಿಸಿ ವಿವಿಗೆ ಬೃಹತ್‌ ಪ್ರಮಾಣದ ಆರ್ಥಿಕ ನಷ್ಟ ಉಂಟು ಮಾಡಿರುವುದು ನಿಜ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದರು.

ವಿಶ್ವವಿದ್ಯಾಲಯಕ್ಕೆ ಸೇರಬೇಕಾಗಿದ್ದ ಹಣವನ್ನು ಬಳಸಿಕೊಂಡಿರುವುದಲ್ಲದೆ, ಅದಕ್ಕೆ ಉತ್ತರದಾಯಿಯಾಗದೇ ಅವ್ಯವಹಾರ ಮಾಡಿರುವುದು, ಖರೀದಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಮೀರಿ ನಷ್ಟ ಉಂಟು ಮಾಡಿರುವುದು, ಮೌಲ್ಯಮಾಪಕರ ನೇಮಕಾತಿಯಲ್ಲಿ ಎಡವಿರುವ ಬಗ್ಗೆ ವರದಿಯಲ್ಲಿ ಅವರು ವಿವರಿಸಿದ್ದರು.

ತುಮಕೂರು ವಿಶ್ವವಿದ್ಯಾಲಯದ ಅಧ್ಯಕ್ಷ ಪ್ರೊ. ಸಿದ್ದೇಗೌಡ ಅವರ ನೇತೃತ್ವದ ಸಮಿತಿಯಲ್ಲಿ ಡಿ.ಬಿ. ನಾಯಕ್‌, ಪ್ರೊ. ಎನ್‌.ಎಸ್‌. ರಾಮೇಗೌಡ, ಪ್ರೊ. ತ್ರಿಪಾಠಿ ಅವರು ಸದಸ್ಯರಾಗಿದ್ದರು. ಪ್ರೊ. ಆರ್.ಕೆ. ಸೋಮಶೇಖರ್‌ ಅವರ ಬಳಿಕ ಮಂಗಳೂರು ವಿವಿಯ ಪ್ರೊ. ಪಿ.ಎಸ್‌. ಯಡಪಡಿತ್ತಾಯ ಮತ್ತು ಡಾ.ಬಿ.ನಾರಾಯಣ ಅವರ ಹೆಸರನ್ನು ಸಮಿತಿ ಶಿಫಾರಸು ಮಾಡಿದೆ.

**

ಮುಖ್ಯಾಂಶಗಳು 

2013ರಲ್ಲಿ ತನಿಖೆಗೆ ಆದೇಶಿಸಿದ್ದ ಸರ್ಕಾರ

ಪ್ರೊ.ಎಂ.ಐ.ಸವದತ್ತಿ ಸಮಿತಿಯಿಂದ ಬಂದ ನಕಾರಾತ್ಮಕ ವರದಿ

ನಿಯಮ ಗಾಳಿಗೆ ತೂರಿ ವಿವಿಗೆ ನಷ್ಟ ಉಂಟುಮಾಡಿದ್ದು ಬಹಿರಂಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !