ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮನಾಭತೀರ್ಥರ ಆರಾಧನೆ ವಿವಾದ: ಮಂತ್ರಾಲಯ ಮಠಕ್ಕೆ ಅಗ್ರಪೂಜೆ ಅವಕಾಶ

Last Updated 4 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ಡಿ.5ರಿಂದ ಆರಂಭವಾಗಲಿರುವ ಪದ್ಮನಾಭ ತೀರ್ಥರ 694ನೇ ಆರಾಧನಾ ಮಹೋತ್ಸವದ ಅಗ್ರಪೂಜೆ ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಪಾಲಿಗೆ ಲಭ್ಯವಾಗಿದೆ.

ಈ ಕುರಿತಂತೆ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದ್ದು, ‘ಮೂರು ದಿನಗಳ ಈ ಆರಾಧನೆಯಲ್ಲಿ ಮೊದಲ ಒಂದೂವರೆ ದಿನ ಅಂದರೆ; 5 ರಿಂದ 6ನೇ ತಾರೀಖಿನ ಮಧ್ಯಾಹ್ನ ಮೂರು ಗಂಟೆಯವರೆಗೆ ಸುಬುಧೇಂದ್ರ ತೀರ್ಥರು, ನಂತರ 3 ಗಂಟೆ 1 ನಿಮಿಷದಿಂದ ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿಗಳು ಆರಾಧನೆಯ ಕೈಂಕರ್ಯ ಕೈಗೊಳ್ಳಬೇಕು’ ಎಂದು ಆದೇಶಿಸಿದರು.

‘ಆರಾಧನಾ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೃಂದಾವನದಲ್ಲಿ ಸೂಕ್ತ ಬಂದೋಬಸ್ತ್‌ ಏರ್ಪಡಿಸಬೇಕು’ ಎಂದೂ ನ್ಯಾಯಮೂರ್ತಿಗಳು ನಿರ್ದೇಶಿಸಿದರು.

‘ವೃಂದಾವನ ಜಮೀನು ಮಾಲೀಕತ್ವಕ್ಕೆ ಸಂಬಂಧಿಸಿದ ಮೂಲ ಕೇಸಿನ ವಿಚಾರಣೆ ಮುಗಿಯುವ ತನಕ ನಮಗೇ ಮೊದಲ ಆರಾಧನೆಗೆ ಅವಕಾಶ ಕಲ್ಪಿಸಬೇಕು’ ಎಂದು ಕೋರಿ ಮಂತ್ರಾಲಯದ ಪೀಠಾಧಿಪತಿ ಸಲ್ಲಿಸಿದ್ದ ಮನವಿಯ ಮೇರೆಗೆ ಈ ಆದೇಶ ನೀಡಲಾಗಿದೆ.

ಮುಂದಿನ ವಿಚಾರಣೆ ವೇಳೆಗೆ ಪ್ರಕರಣದ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳನ್ನು ನ್ಯಾಯಾಲಯಕ್ಕೆ ಒದಗಿಸುವಂತೆ ಅರ್ಜಿದಾರ ಹಾಗೂ ಪ್ರತಿವಾದಿ ಪರ ವಕೀಲರಿಗೆ ಸೂಚಿಸಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಇದೇ 10ಕ್ಕೆ ಮುಂದೂಡಿದರು.

ಸುದೀರ್ಘ ವಿಚಾರಣೆ: ‘ನವ ವೃಂದಾವನದ 14 ಎಕರೆ 7 ಗುಂಟೆ ಜಮೀನಿನ ಡಿಕ್ರಿ ನಮ್ಮ ಪರವಾಗಿದೆ. ಆದ್ದರಿಂದ, ಮಂತ್ರಾಲಯದ ಪೀಠಾಧಿಪತಿಗಳು ಈ ಪ್ರದೇಶದ ಮೇಲೆ ಯಾವುದೇ ಹಕ್ಕು ಸಾಧಿಸಲು ಸಾಧ್ಯವಿಲ್ಲ’ ಎಂಬುದು ಉತ್ತರಾದಿ ಮಠದ ವಾದ.

ಇದಕ್ಕೆ ಪ್ರತಿಯಾಗಿ ಮಂತ್ರಾಲಯದ ಪೀಠಾಧಿಪತಿಗಳು, ‘ವಿವಾದಿತ ಸ್ಥಿರಾಸ್ತಿಯ ಭೂ ದಾಖಲೆಗಳು ಸುಳ್ಳು ಮಾಹಿತಿಯಿಂದ ಕೂಡಿವೆ’ ಎಂಬ ಪ್ರತಿವಾದ ಮಂಡಿಸಿದರು.

ಮೂರು ತಾಸಿಗೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ ಮಂತ್ರಾಲಯದ ಪರ ಕೆ.ಸುಮನ್‌ ಹಾಗೂ ಉತ್ತರಾದಿ ಮಠದ ಪರವಾಗಿ ಹಿರಿಯ ವಕೀಲ ಜಯವಿಠ್ಠಲ ರಾವ್ ಕೋಲಾರ ವಾದ ಮಂಡಿಸಿದರು.

ಅಸಲು ದಾವೆಯ ಮೇಲಿನ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿರುವ ‘ನಿಯಮಿತ ಎರಡನೇ ಮನವಿ’ಯ (ಆರ್‌ಎಸ್‌ಎ) ಅರ್ಜಿಯನ್ನು ಇದೇ ನ್ಯಾಯಪೀಠ ವಿಚಾರಣೆ ನಡೆಸಬೇಕಿದೆ.

ಪದ್ಮನಾಭ ತೀರ್ಥರು ಮಧ್ವಾಚಾರ್ಯರ ಮೊದಲನೇ ಶಿಷ್ಯರಾಗಿದ್ದು ಅವರ ಆರಾಧನೆ ಇದೇ 5ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT