ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕಾದರೂ ಸಮ್ಮೇಳನ ಧಾರವಾಡಕ್ಕೆ ನೀಡಿದೆವೋ: ಡಾ.ಮನು ಬಳಿಗಾರ ಬೇಸರದ ಮಾತು

ವ್ಯಕ್ತಿಯೊಬ್ಬರಿಗೆ ಸನ್ಮಾನ ಮಾಡುವುದನ್ನು ವಿರೋಧಿಸಿ ಬಂದ ಕರೆಗಳಿಗೆ ಬೇಸರ
Last Updated 22 ಡಿಸೆಂಬರ್ 2018, 10:52 IST
ಅಕ್ಷರ ಗಾತ್ರ

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಅಧ್ಯಕ್ಷರೊಬ್ಬರಿಗೆ ಘೋಷಣೆಯಾಗಿರುವ ಸನ್ಮಾನವನ್ನು ರದ್ದುಪಡಿಸಬೇಕು ಎಂಬ ನಿರಂತರ ಕರೆಗಳಿಂದ ಹೈರಾಣಾದ ಕಸಾಪ ಅಧ್ಯಕ್ಷ ಡಾ. ಮನುಬಳಿಗಾರ, ‘ಯಾಕಾದರೂ ಧಾರವಾಡಕ್ಕೆ ಸಮ್ಮೇಳನ ನೀಡಿದೆವೋ’ ಎಂದು ಬೇಸರ ವ್ಯಕ್ತಪಡಿಸಿದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕನ್ನಡ ನವನಿರ್ಮಾಣ ಸೇನೆ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ ಅವರ ಹೆಸರನ್ನು ಸನ್ಮಾನಿತರ ಪಟ್ಟಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂಗ್ರಾಮ ಸೇನೆ ರಾಜ್ಯಾಧ್ಯಕ್ಷ ಸಂಜೀವ ಧುಮಕ್ನಾಳ ಅವರು ಮನು ಬಳಿಗಾರ ಅವರನ್ನು ಒತ್ತಾಯಿಸಿದ ಧ್ವನಿಮುದ್ರಿಕೆ ಈಗ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

‘ಭೀಮಾಶಂಕರ ವಿರುದ್ಧ ವಂಚನೆ ಹಾಗೂ ಭ್ರಷ್ಟಾಚಾರದ ಆರೋಪಗಳಿವೆ. ಇಂಥವರನ್ನು ಸನ್ಮಾನಿಸಲು ಹೊರಟರೆ ಸಮ್ಮೇಳನದಲ್ಲಿ ಪ್ರತಿಭಟನೆಗಳು ನಡೆಯಲಿವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮನು ಬಳಿಗಾರ, ‘ನಿಮ್ಮ ಊರಿನಲ್ಲಿ ಆಗುತ್ತಿರುವ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ಅಥವಾ ವಿಫಲಗೊಳಿಸುವುದು ನಿಮಗೆ ಬಿಟ್ಟಿದ್ದು. ನನಗೆ ಭೀಮಾಶಂಕರ ಪಾಟೀಲ ಅವರು ಒಬ್ಬ ಕನ್ನಡ ಪರ ಹೋರಾಟಗಾರ ಎಂಬುದಷ್ಟೇ ಗೊತ್ತಿದೆ. ಒಂದೊಮ್ಮೆ ನೀವು ಹೇಳಿದಂತೆ ಅವರ ವಿರುದ್ಧ ಆರೋಪಗಳಿದ್ದರೆ ಅವುಗಳನ್ನು ನನಗೆ ಕಳುಹಿಸಿಕೊಡಿ. ಆದರೆ ಒಂದೇ ವಿಷಯಕ್ಕೆ ಹತ್ತತ್ತು ಜನ ಕರೆ ಮಾಡಿದರೆ ನಾನು ಸಮ್ಮೇಳನದ ಕೆಲಸ ಮಾಡುವುದಾದರೂ ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

ಆದರೆ ಸಂಜೀವ ಅವರು ಮತ್ತೆ ತಮ್ಮ ಆಗ್ರಹವನ್ನು ಮುಂದಿಡುತ್ತ ಸನ್ಮಾನ ಕೈಬಿಡುವಂತೆ ಒತ್ತಾಯಿಸುತ್ತಾರೆ. ಆಗ ಮನು ಬಳಿಗಾರ ಅವರು, ‘ಯಾಕಾದರೂ ಧಾರವಾಡಕ್ಕೆ ಸಮ್ಮೇಳನ ನೀಡಿದೆವೋ ಎಂದೆನಿಸುತ್ತಿದೆ. ಸಣ್ಣಪುಟ್ಟ ವಿಷಯಕ್ಕೆ ನನಗೆ ಕರೆ ಮಾಡುವ ಅಗತ್ಯವಾದರೂ ಏನಿದೆ. ಇವೆಲ್ಲವನ್ನೂ ಅಲ್ಲೇ ಬಗೆಹರಿಸಿಕೊಳ್ಳಬಹುದಲ್ಲವೇ?’ ಎಂದೆನ್ನುತ್ತಾರೆ.

ಈ ಕುರಿತಂತೆ ಮನು ಬಳಿಗಾರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ನಾನು ಹಾಗೆಂದು ಹೇಳಿದ್ದು ನಿಜ. ನಿಜಕ್ಕೂ ಒಂದು ಸಣ್ಣ ವಿಷಯಕ್ಕೆ ಬಂದ ಹತ್ತಾರು ಕರೆಗಳನ್ನು ಸ್ವೀಕರಿಸಿದ್ದ ಆ ಕ್ಷಣದಲ್ಲಿ ಹಾಗೆನಿಸಿತು.ನನ್ನ ಅವಧಿಯಲ್ಲಿ ರಾಯಚೂರು ಮತ್ತು ಮೈಸೂರಿನಲ್ಲಿ ಸಮ್ಮೇಳನ ಆಯೋಜಿಸಿದ್ದೇವೆ. ಆದರೆ ಅಲ್ಲಿ ಎಲ್ಲೂ ಇಂಥ ಕ್ಷುಲ್ಲಕ ಕಾರಣಕ್ಕೆ ಹತ್ತಾರು ಕರೆಗಳು ಬಂದಿರಲಿಲ್ಲ’ ಎಂದರು.

‘ಜ್ವಲಂತ ಸಮಸ್ಯೆಗಳು, ಗೋಷ್ಠಿಗಳ ಆಯೋಜನೆ ಇತ್ಯಾದಿ ಕುರಿತು ಕರೆ ಮಾಡಿದರೂ ನಾನು ಸಂತೋಷ ಪಡುತ್ತಿದ್ದೆ. ಸಮ್ಮೇಳನದಲ್ಲಿ ಸಾಕಷ್ಟು ಜನರಿಗೆ ಸನ್ಮಾನ ಮಾಡುತ್ತೇವೆ. ಒಬ್ಬ ವ್ಯಕ್ತಿ ಕುರಿತು ಹತ್ತಾರು ಕರೆಗಳು ಬರುತ್ತಿರುವುದು ಇದೇ ಮೊದಲು’ ಎಂದರು.

‘ಬರುವ ಪ್ರತಿಯೊಂದು ಕರೆಗೂ ಪ್ರತಿಕ್ರಿಯಿಸುತ್ತೇನೆ. ಆದರೆ ಈ ವಿಷಯದಲ್ಲಿ ಕೆಲವೊಬ್ಬರು ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಅದನ್ನೇ ಹೇಳುತ್ತಿದ್ದಾರೆ. ಹೀಗಿದ್ದರೂ ಭೀಮಾಶಂಕರ ವಿರುದ್ಧ ಯಾವುದೇ ಸಾಕ್ಷ್ಯಗಳಿದ್ದಲ್ಲಿ ಕಳುಹಿಸಿದರೆ ಆ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT