ಭಾನುವಾರ, ನವೆಂಬರ್ 29, 2020
20 °C
ಶುಲ್ಕ ಹೆಚ್ಚಳಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಸಮರ್ಥನೆ

ಮೆಡಿಕಲ್‌ಗೆ ₹50 ಸಾವಿರ ಕೊಡೋಕೆ ಆಗಲ್ವ?: ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಯುಕೆಜಿ, ಎಲ್‌ಕೆಜಿಗೆ 50 ಸಾವಿರ ಕೊಟ್ಟು ಸೇರಿಸ್ತಾರೆ. ಮೆಡಿಕಲ್‌ ಓದಿಸ್ಬೇಕು ಅನ್ನೋರಿಗೆ ₹50 ಸಾವಿರ ಕೊಡೋಕೆ ಆಗಲ್ವ? ಡಾಕ್ಟರ್‌ ಆದ್ಮೇಲೆ ಎಷ್ಟು ಸಂಬಳ ತಗೋತಾರೆ ಗೊತ್ತಾ?’

–ಇದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರ ಮಾತು. ಕಳೆದ ವರ್ಷ ₹16 ಸಾವಿರ ಇದ್ದ ವೈದ್ಯಕೀಯ ಕೋರ್ಸ್‌ ಶುಲ್ಕ ಏಕಾಏಕಿ ₹50 ಸಾವಿರಕ್ಕೆ ಏರಿಕೆಯಾದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರ ನೀಡಿದ ಉತ್ತರ ಹೀಗಿತ್ತು.

‘ವೈದ್ಯಕೀಯ ಕೋರ್ಸ್‌ಗೆ ಸರ್ಕಾರ ಒದಗಿಸುವ ಸೌಲಭ್ಯ ಲೆಕ್ಕ ಹಾಕಿದ್ರೆ ಒಬ್ಬ ವಿದ್ಯಾರ್ಥಿಗೆ ₹ 10 ಲಕ್ಷ ಖರ್ಚಾಗ್ತದೆ. ₹16 ಸಾವಿರ ಶುಲ್ಕ ಕೊಡ್ತಿದ್ರಲ್ಲ, ಅದರಲ್ಲಿ ₹15 ಸಾವಿರ ಆಸ್ಪತ್ರೆಗೆ ಹೋಗ್ತಿತ್ತು. ಶುಲ್ಕ ಹೆಚ್ಚು ಮಾಡಿದ್ರೆ ಯಾರೂ ಏನೂ ಹೇಳಲ್ಲ ಬಿಡಿ’ ಎಂದೂ ಹೇಳಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಶನಿವಾರ ದಿಢೀರ್‌ ಭೇಟಿ ನೀಡಿದ ಸಚಿವರು ಕೊನೆಯ ದಿನದ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್‌ ಪ್ರಕ್ರಿಯೆ ವೀಕ್ಷಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಅವಕಾಶ ಅಸಾಧ್ಯ: ‘ಕೇರಳ ಹಾಗೂ ಕೊಡಗಿನಲ್ಲಿ ಪ್ರವಾಹಕ್ಕೆ ಸಿಲುಕಿ, ಸಿಇಟಿ ಕೌನ್ಸೆಲಿಂಗ್‌ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಸೆಪ್ಟೆಂಬರ್‌ 30ರೊಳಗೆ ಕಾಲೇಜುಗಳು ಪ್ರಾರಂಭಿಸಬೇಕು ಎಂಬ ಗಡುವು ಇದೆ. ಈ ವೇಳೆ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ. ಅಲ್ಲದೆ, ಪ್ರವಾಹಕ್ಕೆ ಸಿಲುಕಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಯಾವ ವಿದ್ಯಾರ್ಥಿಗಳೂ ಮನವಿ ಮಾಡಿ‌ಲ್ಲ. ಒಂದು ವೇಳೆ ಈಗ ಯಾರಾದರೂ ಹೇಳಿದರೆ, ಸರ್ಕಾರ ಏನೂ ಮಾಡಲು ಆಗುವುದಿಲ್ಲ’ ಎಂದರು.

‘ಕೌನ್ಸೆಲಿಂಗ್‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ. ಒಟ್ಟು 49 ವೈದ್ಯಕೀಯ ಕಾಲೇಜುಗಳ 6,260 ವೈದ್ಯಕೀಯ ಸೀಟುಗಳಿಗೆ ಕೌನ್ಸೆಲಿಂಗ್‌ ನಡೆದಿದ್ದು, 740 ಸೀಟುಗಳು ಉಳಿದಿದ್ದವು. ದಂತ ವೈದ್ಯಕೀಯ ಕೋರ್ಸ್‌ಗಳಲ್ಲಿ ಉಳಿದಿರುವ 772 ಸೀಟುಗಳಿಗೆ ಸೆ.15ರೊಳಗೆ ಮಾಪ್‌ಅಪ್‌ ಸುತ್ತು ನಡೆಸಲಾಗುತ್ತದೆ’ ಎಂದು ಹೇಳಿದರು.

ಸುಪ್ರೀಂಕೋರ್ಟ್‌ ಮೊರೆ: ‘ಮಾನ್ಯತೆ ರದ್ದಾಗಿರುವ ಆಕಾಶ್‌, ಆಕ್ಸ್‌ಫರ್ಡ್‌, ಸಂಭ್ರಮ ಹಾಗೂ ಶ್ರೀದೇವಿ ಕಾಲೇಜುಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಈ ಕಾಲೇಜುಗಳಲ್ಲಿ 600 ಸೀಟುಗಳಿದ್ದು, ಒಂದು ವೇಳೆ ಆ ಕಾಲೇಜುಗಳಿಗೆ ಅನುಮತಿ ಸಿಕ್ಕರೆ ಆ ಸೀಟುಗಳಿಗೂ ಕೌನ್ಸೆಲಿಂಗ್‌ ನಡೆಸುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು