ಹಸಿರು ಚಿಗುರಿಸುವ ಯೋಜನೆಗೆ ಅಡ್ಡಿ

7
ಗಣಿಗಾರಿಕೆ ಹಾನಿ: ಪುನಶ್ಚೇತನ ಕಾರ್ಯಕ್ರಮ ನನೆಗುದಿಗೆ

ಹಸಿರು ಚಿಗುರಿಸುವ ಯೋಜನೆಗೆ ಅಡ್ಡಿ

Published:
Updated:

ಬೆಂಗಳೂರು: ಅತಿಯಾದ ಗಣಿಗಾರಿಕೆಯಿಂದ ನಲುಗಿರುವ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಜನರ ಬದುಕನ್ನು ಮರಳಿ ಕಟ್ಟಿಕೊಡುವ; ಹಸಿರು ಚಿಗುರಿಸುವ; ಸ್ಫೋಟದ ಸದ್ದಿಗೆ ಬೆದರಿ ವಲಸೆ ಹೋಗಿರುವ ಜೀವಸಂಕುಲಗಳು ಮೂಲ ನೆಲೆಗಳಿಗೆ ಮರಳುವಂತೆ ಮಾಡುವ ಯೋಜನೆ ಇನ್ನೂ ಮರೀಚಿಕೆಯಾಗಿದೆ.

‘ಮೂರೂ ಜಿಲ್ಲೆಗಳಲ್ಲಿ ಹಾಳಾಗಿರುವ ಪರಿಸರವನ್ನು ಮತ್ತೆ ಕಟ್ಟುವ ಯೋಜನೆ ರೂಪಿಸಿ, ಜಾರಿಗೊಳಿಸಬೇಕು. ಈ ಉದ್ದೇಶಕ್ಕೆ ವಿಶೇಷ ವ್ಯವಸ್ಥೆ ಮಾಡಬೇಕು. ಕಬ್ಬಿಣದ ಅದಿರು ಹರಾಜಿನಿಂದ ಬರುವ ಶೇ 10ರಷ್ಟು ಹಣವನ್ನು ಇದಕ್ಕೆ ಬಳಸಬೇಕು’ ಎಂದು ಸುಪ್ರೀಂ ಕೋರ್ಟ್‌ 2012ರಲ್ಲೇ ಆದೇಶಿಸಿತ್ತು.

ಗಣಿ ಉದ್ಯಮಿಗಳಿಂದ ₹ 7,000 ಕೋಟಿ ಸಂಗ್ರಹಿಸಲಾಗಿದೆ. ಈ ಹಣಕ್ಕೆ ಬಡ್ಡಿಯೂ ಸೇರಿ ₹ 11,000 ಕೋಟಿ ಬ್ಯಾಂಕ್‌ನಲ್ಲಿ ಭದ್ರವಾಗಿದೆ. ಅಭಿವೃದ್ಧಿ ಆಯುಕ್ತರೂ ಆಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ವ್ಯವಸ್ಥೆಯೂ ಇದೆ. ಅಲ್ಲದೆ, ಪರಿಸರ ಪುನರುಜ್ಜೀವನಕ್ಕೆ ಮೂರು ವರ್ಷದ ಹಿಂದೆ ‘ಕರ್ನಾಟಕ ಗಣಿ ಪರಿಸರ ಸಂರಕ್ಷಣೆ ನಿಗಮ’ (ಕೆಎಂಇಆರ್‌ಸಿ) ಸ್ಥಾಪಿಸಲಾಗಿದೆ.

ಆದರೆ, ‘ಆರು ವರ್ಷಗಳಿಂದಲೂ ಯೋಜನೆ ಹೇಗಿರಬೇಕು? ಯಾವ ಕಾರ್ಯಕ್ರಮ ಕೈಗೆತ್ತಿಕೊಳ್ಳಬೇಕು? ಎನ್ನುವ ಚರ್ಚೆಗಳು ನಡೆದಿವೆಯೇ ವಿನಾ ಬೇರೇನೂ ಆಗಿಲ್ಲ.  ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು, ಗುಣಮಟ್ಟದ ಗಾಳಿ, ಉತ್ತಮ ಸಾರಿಗೆ ಹಾಗೂ ಸಂಪರ್ಕ, ಕೃಷಿ, ಪಶುಸಂಗೋಪನೆ, ಪರಿಸರ ಸಂರಕ್ಷಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಗಳಿಗೆ ಹಣ ಬಳಸಬೇಕು ಎಂಬ ವಿಸ್ತೃತ ಮಾರ್ಗಸೂಚಿ ಇದ್ದರೂ, ಯೋಜನೆಗೆ ಸ್ಪಷ್ಟ ರೂಪ ಕೊಡಲು ಸಾಧ್ಯವಾಗಿಲ್ಲ’ ಎಂದು  ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ) ಹೇಳಿದೆ.

ರಾಜಕೀಯ ಹಸ್ತಕ್ಷೇಪದ ಆರೋಪ: ‘ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಯೋಜನೆಗಳು ಅಂತಿಮಗೊಂಡಿವೆ. ಬಳ್ಳಾರಿ ಯೋಜನೆ ರೂಪಿಸುವ ಕೆಲಸ ಮಾತ್ರ ಬಾಕಿ ಇದೆ. ಮಿತಿಮೀರಿದ ರಾಜಕೀಯ ಹಸ್ತಕ್ಷೇಪದಿಂದ ಅಂತಿಮ ತೀರ್ಮಾನ ಕೈಗೊಳ್ಳಲು ಆಗುತ್ತಿಲ್ಲ. ತಾವು ಹೇಳಿದ ಕೆಲಸಗಳಿಗೆ ಹಣ ಖರ್ಚು ಮಾಡಬೇಕು ಎಂದು ಶಾಸಕರು, ಸಂಸದರು ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಫಿಮಿ ಒಪ್ಪುತ್ತಿಲ್ಲ’ ಎಂದು ಕೆಎಂಇಆರ್‌ಸಿ ಮೂಲಗಳು ತಿಳಿಸಿವೆ.

‘ಬಳ್ಳಾರಿ ಜಿಲ್ಲೆ ಯೋಜನೆ ಪದೇ ಪದೇ ಮಾರ್ಪಾಡಾಗುತ್ತಿದೆ. ಇದರಿಂದ ವೆಚ್ಚ ಏರುತ್ತಿದೆ. 2014ರಲ್ಲಿ, ಮೂರು ವರ್ಷದ ಅವಧಿಗೆ ₹ 1517 ಕೋಟಿ ಯೋಜನೆ ರೂಪಿಸಲಾಗಿತ್ತು. ಬಳಿಕ ₹ 7000 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದೀಗ ₹ 22,000 ಕೋಟಿಗೆ ಏರಿದೆ. 10 ವರ್ಷಗಳ ಅವಧಿಗೆ ರೂಪಿಸಲಾಗಿರುವ ಈ ಯೋಜನೆಯನ್ನೂ ಮಾರ್ಪಾಡು ಮಾಡುವಂತೆ ಕೇಂದ್ರ ಉನ್ನತಾಧಿಕಾರಿ ಸಮಿತಿ ಜುಲೈ 17ರಂದು ಸೇರಿದ್ದ ಸಭೆಯಲ್ಲಿ ಸೂಚಿಸಿದೆ. ಈ ತಿಂಗಳ 17ರಂದು ಮತ್ತೆ ಸಭೆ ನಡೆಯಲಿದೆ’ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಗಣಿಗಾರಿಕೆ ಪ್ರದೇಶಗಳಲ್ಲಿನ ಪುನರ್ವಸತಿ ಹಾಗೂ ಪರಿಸರ ಪುನಶ್ಚೇತನ ಯೋಜನೆಯನ್ನು ಸುಪ್ರೀಂ ಕೋರ್ಟ್‌ ಇತ್ತೀಚಿನ ಸೂಚನೆಯಂತೆ ಅಕ್ಟೋಬರ್‌ 10ರೊಳಗೆ ಅಂತಿಮಗೊಳಿಸಬೇಕಿದೆ.

ಖಾಸಗಿ ಏಜೆನ್ಸಿಯಿಂದ ಸಮೀಕ್ಷೆ

ಅಕ್ರಮ ಗಣಿಗಾರಿಕೆಯಿಂದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಆಗಿರುವ ಹಾನಿ ಕುರಿತು ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ) ಖಾಸಗಿ ಏಜೆನ್ಸಿಯಿಂದ ಸಮೀಕ್ಷೆ ನಡೆಸುತ್ತಿದೆ.

ಮೂರು ಜಿಲ್ಲೆಗಳಲ್ಲಿ ಯಾವ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಿದೆ. ಪುನರ್ವಸತಿ ಮತ್ತು ಪರಿಸರ ಪುನಶ್ಚೇತನಕ್ಕೆ ಎಷ್ಟು ಹಣ ಬೇಕಾಗಲಿದೆ ಎಂದು ಸಂಸ್ಥೆ ವರದಿ ಕೊಡಲಿದೆ. ಈ ಉದ್ದೇಶಕ್ಕೆ ₹ 1 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಕಾಯಂ ಸಿಬ್ಬಂದಿ ಇಲ್ಲ’

ಕರ್ನಾಟಕ ಗಣಿ ಪರಿಸರ ಸಂರಕ್ಷಣಾ ನಿಗಮಕ್ಕೆ (ಕೆಎಂಇಆರ್‌ಸಿ) ಕಾಯಂ ಸಿಬ್ಬಂದಿ ಇಲ್ಲ. ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರಿಲ್ಲ. 2014ರಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಲಾಗಿತ್ತು. ಈಗ ಇದು ಖಾಲಿ ಇದೆ.

ಮುಖ್ಯ ಪ್ರಧಾನ ವ್ಯವಸ್ಥಾಪಕ ಹುದ್ದೆ ಸೇರಿದಂತೆ ಬಹುತೇಕ ಜಾಗಗಳಿಗೆ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವವರನ್ನೇ ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ.

* ಉದ್ಯಮಿಗಳಿಂದ ₹ 11,000 ಕೋಟಿ ಸಂಗ್ರಹವಾಗಿದ್ದು, ಮೂರು ಜಿಲ್ಲೆಗಳಿಗೆ ಹಂಚಿಕೆ ಆಗಬೇಕಾಗಿದೆ. ಯೋಜನೆ ಅಂತಿಮಗೊಂಡ ತಕ್ಷಣ ಕೆಲಸ ಆರಂಭವಾಗಲಿದೆ
-ಪ್ರಸನ್ನ ಕುಮಾರ್‌, ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ

* ಅಕ್ರಮ ಗಣಿಗಾರಿಕೆಯಿಂದ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ. ಆರ್‌ ಅಂಡ್‌ ಆರ್‌ ಯೋಜನೆಗೆ ಎಷ್ಟು ಹಣ ಬೇಕು ಎಂದು ನಿಖರವಾಗಿ ಅಂದಾಜಿಸಬೇಕಿದೆ
-ಅಬ್ದುಲ್‌ ಖಯೂಂ, ನಿರ್ದೇಶಕ, ಫಿಮಿ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !