ಟ್ವಿಟರ್‌ನಲ್ಲಿ ‘ಅಂಗಡಿ’ ಹಿಂಬಾಲಿಸುವವರ ಸಂಖ್ಯೆ ಏರಿಕೆ

ಸೋಮವಾರ, ಜೂನ್ 17, 2019
31 °C
ಕೆಲವೇ ದಿನಗಳಲ್ಲಿ ಸಾವಿರಾರು ಮಂದಿಯಿಂದ ‘ಫಾಲೋ’

ಟ್ವಿಟರ್‌ನಲ್ಲಿ ‘ಅಂಗಡಿ’ ಹಿಂಬಾಲಿಸುವವರ ಸಂಖ್ಯೆ ಏರಿಕೆ

Published:
Updated:
Prajavani

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ 4ನೇ ಬಾರಿಗೆ ಆಯ್ಕೆಯಾದ ಸಂಸದ ಸುರೇಶ ಅಂಗಡಿ ಅವರು ಸಚಿವರಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅವರನ್ನು‘ಫಾಲೋ’ ಮಾಡುವವರ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ.

ಹ್ಯಾಟ್ರಿಕ್ ಸಂಸದರಾಗಿ ಆಯ್ಕೆಯಾಗಿದ್ದ ಅವರು, 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಟ್ವಿಟರ್‌ ಬಳಕೆಯಲ್ಲಿ ಸಕ್ರಿಯವಾಗಿದ್ದರು. @AngadiMP ಹೆಸರಿನ ಖಾತೆಯಲ್ಲಿ ಟ್ವೀಟ್ ಮಾಡುತ್ತಿದ್ದರು. ತಮ್ಮ ಕಾರ್ಯಕ್ರಮಗಳು, ಸರ್ಕಾರದ ಯೋಜನೆಗಳ ಸಂಕ್ಷಿಪ್ತ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಆದರೆ, ಈಗ ಕೇಂದ್ರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೇ 30ರಿಂದೀಚೆಗೆ ಸಾವಿರಾರು ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದ ‘ನಾನೂ ಚೌಕಿದಾರ್’ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೆಸರಿನ ಮುಂದೆ ಚೌಕಿದಾರ್ ಎಂದು ಹಾಕಿಕೊಂಡಿದ್ದರು. ಫಲಿತಾಂಶ ಪ್ರಕಟಗೊಂಡ ನಂತರ ‘ಚೌಕಿದಾರ್‌’ ಪದ ಅಳಿಸಿ ಹಾಕಿದ್ದಾರೆ. ಸುರೇಶ ಅಂಗಡಿ ಎನ್ನುವ ಹೆಸರನ್ನಷ್ಟೇ ಉಳಿಸಿಕೊಂಡಿದ್ದಾರೆ.

ಆಗ ನೂರಾರು, ಈಗ ಸಾವಿರಾರು:

ಮೇ 30ಕ್ಕಿಂತ ಮುಂಚೆ ಅವರನ್ನು ಫಾಲೋ ಮಾಡುವವರ ಸಂಖ್ಯೆ ಒಂದು ಸಾವಿರವಷ್ಟೇ ಇತ್ತು. ಈಗ, ಅವರನ್ನು 4261ರ ಗಡಿ ದಾಟಿದೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅವರ ಮುಂದಿನ ನಡೆಗಳನ್ನು ತಿಳಿದುಕೊಳ್ಳುವ ಕುತೂಹಲವನ್ನು ನೆಟ್ಟಿಗರು ವ್ಯಕ್ತ ಮಾಡುತ್ತಿದ್ದಾರೆ. ಗಂಟೆ ಗಂಟೆಗೂ ಫಾಲೋವರ್ಸ್‌ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಐದಂಕಿಗೆ ತಲುಪುವುದರಲ್ಲಿ ಅಚ್ಚರಿ ಏನಿಲ್ಲ.

ರೈಲ್ವೆ ಇಲಾಖೆಯಲ್ಲಿ ಆಗಬೇಕಾದ ಕೆಲಸಗಳ ವೇಳೆ, ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಬಹಳಷ್ಟು ಮಂದಿ ಅದರಲ್ಲೂ ಅತರ್ಜಾಲ ಸೌಲಭ್ಯವುಳ್ಳ ಮೊಬೈಲ್‌ ಹೊಂದಿರುವ ಯುವಕ, ಯುವತಿಯರು ಟ್ವಿಟರ್‌ನಲ್ಲೇ ಕೋರಿಕೆ ಸಲ್ಲಿಸುವುದು ಸಾಮಾನ್ಯವಾಗಿ ಹೋಗಿದೆ. ಅದರಲ್ಲಿ ಸಂಬಂಧಿಸಿದ ಸಚಿವರನ್ನು ಟ್ಯಾಗ್‌ ಮಾಡುವುದು ಕೂಡ ಕಂಡುಬರುತ್ತದೆ. ಹೀಗೆ, ಟ್ವೀಟ್ ಗಮನಿಸಿದ ಹಿಂದಿನ ಸಚಿವರು ಕೂಡಲೇ ಸಕ್ರಿಯರಾಗಿ ಸ್ಪಂದಿಸಿದ ಉದಾಹರಣೆಗಳೂ ಇವೆ. ಈಗ, ಹೊಸ ಸಚಿವರಿಂದಲೂ ಪ್ರತಿಕ್ರಿಯೆಯನ್ನು ಟ್ವಿಟರ್‌ ಬಳಸುವವರು ನಿರೀಕ್ಷಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

ಗಮನಿಸುತ್ತೇನೆ:

ಕಳೆದ ಚುನಾವಣೆ ಸಂದರ್ಭದಲ್ಲೂ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದ ಅವರು, ಯುವ ಮತದಾರರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ವಿಶೇಷವಾಗಿ ಕ್ಷೇತ್ರದಲ್ಲಿ ತಾವು ಮಾಡಿದ ಅಭಿವೃದ್ಧಿ ಕಾಮಗಾರಿಗಳು, ನೀಡಿದ ಕೊಡುಗೆಗಳು, ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಗಳು, ಪ್ರಧಾನಿ ನರೇಂದ್ರ ಮೋದಿ ಸಾಧನೆ ಮೊದಲಾದ ಅಂಶಗಳನ್ನು ಬಿಂಬಿಸುತ್ತಿದ್ದರು. ಬಹುತೇಕ ಟ್ವೀಟ್‌ಗಳನ್ನು ಅವರು ಕನ್ನಡದಲ್ಲಿಯೇ ಮಾಡಿರುವುದು ವಿಶೇಷ. ಸಚಿವರಾದ ನಂತರ ಕನ್ನಡದೊಂದಿಗೆ ಇಂಗ್ಲಿಷ್‌ನಲ್ಲೂ ಸಂವಹನ ಮುಂದುವರಿಸಿದ್ದಾರೆ. ನೂರಾರು ಟ್ವೀಟ್‌ಗಳನ್ನು ಮಾಡಿರುವ ಅವರಿಗೆ ಫಾಲೋ ಮಾಡುತ್ತಿರುವವರಿಂದ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದೆ.

‘ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಮಹತ್ವದ್ದಾಗಿದೆ. ನಾವೂ ಹೊಂದಿಕೊಳ್ಳಬೇಕಲ್ಲವೇ? ಸಚಿವನಾದ್ದರಿಂದ ಸಾವಿರಾರು ಮಂದಿ ನನ್ನನ್ನು ಫಾಲೋ ಮಾಡುತ್ತಾರೆ. ಅವರಿಗೆ ಕಾಲಕಾಲಕ್ಕೆ ಮಾಹಿತಿ ಕೊಡುತ್ತಿರುತ್ತೇನೆ. ಬಹಳಷ್ಟು ಮಂದಿ ಸಲಹೆ–ಸೂಚನೆ ಕೊಡುತ್ತಿದ್ದಾರೆ, ಕೆಲವರು ಬೇಡಿಕೆ ಮುಂದಿಡುತ್ತಿದ್ದಾರೆ. ಟ್ವೀಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ, ಸ್ಪಂದಿಸುತ್ತೇನೆ’ ಎಂದು ಅಂಗಡಿ ಪ್ರತಿಕ್ರಿಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !