ಮದ್ಯ ನಿಷೇಧಕ್ಕಾಗಿ ‘ಮನಿ ಆರ್ಡರ್’ ಚಳವಳಿ!
ರಾಯಚೂರು/ಧಾರವಾಡ: ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಲು ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಮನಿ ಆರ್ಡರ್ ಮೂಲಕ ಹಣ ಕಳಿಸುವ ಚಳವಳಿಗೆ ಸೋಮವಾರ ಚಾಲನೆ ನೀಡಿದರು.
ರಾಯಚೂರಿನಲ್ಲಿ ‘ಮದ್ಯ ನಿಷೇಧ ಆಂದೋಲನ’ದ ಆರು ಮಂದಿ ಸದಸ್ಯರು ಕೇಂದ್ರ ಅಂಚೆ ಕಚೇರಿಗೆ ತೆರಳಿ ತಲಾ ₹ 50 ಮನಿ ಆರ್ಡರ್ ಮಾಡಿದರು. ಸಂಘಟನೆ ಸಂಚಾಲಕಿ ವಿದ್ಯಾ ಪಾಟೀಲ, ಪದಾಧಿಕಾರಿಗಳಾದ ಶೋಭಾ, ಮಾಳಮ್ಮ, ಗುರುರಾಜ, ಬಸವರಾಜ ಇದ್ದರು.
‘ಲಾಕ್‌ಡೌನ್‌ನಲ್ಲಿ ಮದ್ಯಮಾರಾಟ ಸ್ಥಗಿತವಾಗಿದ್ದ ಕಾರಣ ಮಹಿಳೆಯರು, ಮಕ್ಕಳು ನೆಮ್ಮದಿಯಾಗಿದ್ದರು. ಈಗ ಆದಾಯದ ನೆಪ ಹೇಳಿ ವಿರೋಧದ ನಡುವೆಯೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ’ ಎಂದು ಟೀಕಿಸಿದರು.
ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿಯೂ ಗ್ರಾಮೀಣ ಕೂಲಿಕಾರ್ಮಿಕರ ಸಂಘದ ಜಿಲ್ಲಾ ಸಂಯೋಜಕಿ ಸಪ್ನಾ ಭಾವಿಮನಿ ನೇತೃತ್ವದಲ್ಲಿ ‘ಮನಿ ಆರ್ಡರ್’ ಕಳಿಸುವ ಚಳವಳಿ ನಡೆಯಿತು.
ಧಾರವಾಡ ವರದಿ: ಹೋರಾಟಗಾರ್ತಿ ಶಾರದಾ ದಾಬಡೆ ನೇತೃತ್ವದಲ್ಲಿ ಜಿಲ್ಲೆಯ ಮಹಿಳೆಯರು ಸಮೀಪದ ಅಂಚೆ ಕಚೇರಿಯಲ್ಲಿ ಸಿ.ಎಂಗೆ ತಲಾ ₹10, ₹20 ಮನಿ ಆರ್ಡರ್ ಮಾಡಿ, ಮದ್ಯ ನಿಷೇಧದ ಫಲಕ ಪ್ರದರ್ಶಿಸಿ ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಶಾರದಾ ದಾಬಡೆ, ‘ಮದ್ಯ ಮಾರಾಟಕ್ಕೆ ಅವಕಾಶ ನೀಡುವುದರಿಂದ ಅಪರಾಧ ಪ್ರಕರಣ, ದೌರ್ಜನ್ಯ ಹೆಚ್ಚಲಿದೆ. ಆದಾಯವಿಲ್ಲದೆ ಮದ್ಯ ವ್ಯಸನಿಗಳು ಮನೆಯಲ್ಲಿದ್ದ ಅಳಿದುಳಿದ ಸಾಮಾನುಗಳನ್ನೆಲ್ಲ ಮದ್ಯದ ಅಂಗಡಿಗಳಿಗೆ ಅಡವು ಇಡುತ್ತಿದ್ದಾರೆ. ಹೀಗಾಗಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ' ಎಂದರು.
‘ಮದ್ಯ ನಿಷೇಧ ಮಾಡಿ ನಮಗೆ ಬದುಕಲು ಅವಕಾಶ ಮಾಡಿಕೊಡಿ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನೆ ಮಾಡುವುದು ಈ ಪ್ರತಿಭಟನೆಯ ಉದ್ದೇಶ‘ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.