ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಚುರುಕು | ಕರಾವಳಿ ಭಾಗದಲ್ಲಿ ಬಿರುಸಾದ ಮಳೆ

Last Updated 22 ಜೂನ್ 2019, 19:12 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ ಭಾಗದ ಅಲ್ಲಲ್ಲಿ ಮುಂಗಾರು ಚುರುಕಾಗಿದ್ದು, ಶನಿವಾರ ಬಿರುಸಿನ ಮಳೆಯಾಗಿದ್ದು, ಹೈದರಾಬಾದ್‌–ಕರ್ನಾಟಕ ಭಾಗದ ಬೀದರ್‌ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಧಾರಾಕಾರ ಹಾಗೂ ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ಶುಕ್ರವಾರ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಬಿಸಿಲು ತಗ್ಗಿದ್ದು, ಗರಿಷ್ಠ ಉಷ್ಣಾಂಶ32 ಡಿಗ್ರಿ ಸೆಲ್ಸಿಯಸ್‌ಗೆ ಇತ್ತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶನಿವಾರವೂ ಉತ್ತಮ ಮಳೆಯಾಗಿದೆ. ಬೆಳಿಗ್ಗೆ ಕೆಲಕಾಲ ಬಿರುಸಾಗಿ ಸುರಿದ ಮಳೆ, ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಬಿಡುವು ನೀಡಿತ್ತು. ಸಂಜೆಯಿಂದ ಮತ್ತೆ ಬಿರುಸಿನ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ನೇತ್ರಾವತಿ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ ಸುಮಾರು 5 ಮೀಟರ್‌ ನೀರು ಸಂಗ್ರಹಿಸಲಾಗಿದೆ. ಇದರಿಂದ ನೀರಿನ ಸಮಸ್ಯೆ ನಿವಾರಣೆ ಆದಂತಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಹಲವಡೆ ಶನಿವಾರ ತುಂತುರು ಮಳೆಯಾಗಿದೆ. ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಎನ್‌.ಆರ್.ಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿಶುಕ್ರವಾರ ತಡರಾತ್ರಿ ಬಿರುಸಿನ ಮಳೆಯಾಗಿದೆ. ಅಂಕೋಲಾ ತಾಲ್ಲೂಕಿನಲ್ಲಿ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿವೆ. 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಭಾನುವಾರವೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಂಗಾವಳಿ ನದಿ ಪಾತ್ರದಲ್ಲಿರುವ ವಾಸರೆ, ಕೊಡ್ಸಣಿ ಮತ್ತು ಕುರ್ವೆ ದ್ವೀಪಗಳಲ್ಲಿಪ್ರವಾಹದಭೀತಿ ಎದುರಾಗಿದೆ.

ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳದ ಭಾಗದಲ್ಲೂ ಉತ್ತಮ ಮಳೆಯಾಗಿದ್ದು ಹಳ್ಳಗಳಲ್ಲಿ ನೀರು ನಿಂತಿದೆ. ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರದ ವಿವಿಧೆಡೆ ಮಳೆಯಾಗಿದೆ.

ಬೆಳಗಾವಿ, ಬೈಲಹೊಂಗಲ, ರಾಮದುರ್ಗ, ಗೋಕಾಕ, ಸವದತ್ತಿ, ನಿಪ್ಪಾಣಿ ಹಾಗೂ ಹಿರೇಬಾಗೇವಾಡಿಯಲ್ಲಿ ಶನಿವಾರ ಜಿಟಿಜಿಟಿ ಮಳೆಯಾಗಿದೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದರಿಂದ ಲಂಡಿಹಳ್ಳ ತುಂಬಿ ಹರಿಯಿತು. ಮುಂಡರಗಿ, ನರಗುಂದದಲ್ಲಿಯೂ ಸಾಧಾರಣ ಮಳೆಯಾಗಿದೆ.

ಜನ ಸಂಪರ್ಕ ಸಭೆ ರದ್ದು

ತುಮಕೂರು: ಕೊರಟಗೆರೆ ತಾಲ್ಲೂಕು ತೋವಿನಕೆರೆಯಲ್ಲಿ ಶನಿವಾರ ಸಂಜೆ ಮಳೆ ಸುರಿದಿದ್ದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ರದ್ದಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT