ಗುರುವಾರ , ಮಾರ್ಚ್ 4, 2021
30 °C
ವಿಷ್ಣು ದೇಗುಲ ಮಂಟಪ; ಎಸ್ಪಿ ಭೇಟಿ; ರಸ್ತೆತಡೆ

ಹಂಪಿ: ಕಲ್ಲುಗಂಬಗಳನ್ನು ಬೀಳಿಸುವ ವಿಡಿಯೊ ವೈರಲ್‌, ವಶಕ್ಕೆ ಪಡೆದು ಯುವಕನ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಹಂಪಿ ಗಜಶಾಲೆ ಹಿಂಭಾಗದ ವಿಷ್ಣು ದೇವಾಲಯ ಮಂಟಪದ ಕಲ್ಲುಗಂಬಗಳನ್ನು ಯುವಕರು ಬೀಳಿಸುತ್ತಿರುವ ವಿಡಿಯೊಗೆ ಸಂಬಂಧಿಸಿ ಪೊಲೀಸರು ಶನಿವಾರ ಯುವಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನೆ ಜತೆ ತಳಕು ಹಾಕಿಕೊಂಡಿರುವ ಬಲವಾದ ಅನುಮಾನದ ಮೇರೆಗೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಯಾವುದೇ ಸಕಾರಣವಿಲ್ಲದೆ ಯುವಕನನ್ನು ವಶಕ್ಕೆ ಪಡೆದಿರುವುದಕ್ಕೆ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿ, ಕಮಲಾಪುರ ಠಾಣೆ ಬಳಿ ಸೇರಿದ್ದರು. ಈ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಹಾಗೂ ಸ್ಥಳೀಯರ ನಡುವೆ ವಾಗ್ವಾದ, ಜಟಾಪಟಿ ಕೂಡ ನಡೆದಿದೆ. 

‘ಯಾವ ಕಾರಣಕ್ಕೆ ಯುವಕನನ್ನು ವಶಕ್ಕೆ ಪಡೆದಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು. ಕೂಡಲೇ ಯುವಕನನ್ನು ಬಿಡುಗಡೆ ಮಾಡಬೇಕು’ ಎಂದು ಸ್ಥಳೀಯರು ಪಟ್ಟು ಹಿಡಿದರು. ಅದಕ್ಕೆ ಎಸ್ಪಿ ಜಗ್ಗಲಿಲ್ಲ. ‘ಅದನ್ನೆಲ್ಲ ನಿಮಗೆ ತಿಳಿಸಲು ಆಗುವುದಿಲ್ಲ. ನೀವೆಲ್ಲರೂ ಇಲ್ಲಿಂದ ಹೋಗಬೇಕು’ ಎಂದು ತಾಕೀತು ಮಾಡಿ, ಕಳುಹಿಸಿದರು.

ಇದನ್ನೂ ಓದಿ: ಹಂಪಿ ಸ್ಮಾರಕದ ಕಲ್ಲು ಬೀಳಿಸುವ ವಿಡಿಯೊ ವೈರಲ್‌

ಈ ಕುರಿತು ಅರುಣ್‌ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ‘ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಈಗ ಏನನ್ನೂ ಕೇಳಬೇಡಿ’ ಎಂದಷ್ಟೇ ಪ್ರತಿಕ್ರಿಯಿಸಿದರು. 

ಇದಕ್ಕೂ ಮುನ್ನ ಅವರು ಘಟನೆ ನಡೆದ ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಟಪದ ಬಳಿ ಸಾಲಾಗಿ ಬಿದ್ದಿರುವ ಕಲ್ಲುಗಂಬಗಳನ್ನು ಪರಿಶೀಲಿಸಿದರು. ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಂದ ಭದ್ರತೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೈರಲ್‌ ಆಗಿರುವ ವಿಡಿಯೊ ನೋಡಿದ್ದೇನೆ. ನಾಲ್ವರು ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಆರು ತಿಂಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆ ಇದೆ. ಆದರೆ, ಭಾರತೀಯ ಪುರಾತತ್ವ ಇಲಾಖೆಯ (ಎ.ಎಸ್‌.ಐ.) ಅಧಿಕಾರಿಗಳು, ಈ ಘಟನೆ ಎರಡು ವರ್ಷಗಳ ಹಿಂದೆ ನಡೆದಿರಬಹುದು ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ಎಲ್ಲ ಕೋನಗಳಲ್ಲಿ ತನಿಖೆ ನಡೆಸಿ, ಶೀಘ್ರವೇ ತಪ್ಪಿತಸ್ಥರನ್ನು ಬಂಧಿಸಲಾಗುವುದು’ ಎಂದು ಹೇಳಿದರು.

* ಇದನ್ನೂ ಓದಿ: ಸ್ಮಾರಕದ ಕಲ್ಲು ಬೀಳಿಸಿದ ದುಷ್ಟರನ್ನು ಬಂಧಿಸಿ: ಪೊಲೀಸರಿಗೆ ಜನರ ತಾಕೀತು

ಈ ಕುರಿತು ಮಾಹಿತಿಗೆ ಸಂಪರ್ಕಿಸಿದಾಗ ಎ.ಎಸ್‌.ಐ. ಕಿರಿಯ ಅಧಿಕಾರಿಗಳಿಂದ ಹಿಡಿದು ಹಿರಿಯ ಅಧಿಕಾರಿಗಳ ವರೆಗೆ ಎಲ್ಲರೂ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದಾರೆ. ಶುಕ್ರವಾರ ಕೂಡ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ರಸ್ತೆತಡೆ

ಹಂಪಿ ಸ್ಮಾರಕಗಳಿಗೆ ಹಾನಿ ಉಂಟು ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸಮಾನ ಮನಸ್ಕರ ವೇದಿಕೆಯ ಕಾರ್ಯಕರ್ತರು ಕೆಲಕಾಲ ಹೊಸಪೇಟೆ–ಕಂಪ್ಲಿ ರಸ್ತೆತಡೆ ನಡೆಸಿದರು. ‘ದುಷ್ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್ಪಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು