ಸಂಸದ ಪ್ರತಾಪ ಸಿಂಹಗೆ ರೈತರ ಘೇರಾವ್

ಹುಣಸೂರು: ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರಿಗೆ ಪೂರಕವಾದ ವಾತಾವರಣ ಇಲ್ಲವಾಗಿದೆ. ಬೆಳೆಗಾರರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸಂಸದ ಪ್ರತಾಪ ಸಿಂಹ ಅವರನ್ನು ರೈತರು ತಡೆದು ಘೇರಾವ್ ಹಾಕಿದರು.
ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬುಧವಾರ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ ಉದ್ಘಾಟಿಸಿ ತೆರಳುವ ಸಮಯದಲ್ಲಿ ಸಂಸದರನ್ನು ಮಾತನಾಡಿಸಲು ರೈತರು ಮುಂದಾದರು. ಆ ಸಮಯದಲ್ಲಿ ಮಾತಿನ ಚಕಮಕಿ ನಡೆಯಿತು.
ತಂಬಾಕು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿದ್ದರೂ, ರೈತರು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಾಪ ಸಿಂಹ ಸಿಟ್ಟಿಗೆದ್ದರು. ಆಗ ರೈತರ ಜತೆ ವಾಗ್ವಾದ ನಡೆಯಿತು.
ಸಂಸದರ ಪ್ರತಿಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸಿದ ತಂಬಾಕು ಹರಾಜು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಎಂ.ಎಚ್.ಶಿವಣ್ಣ, ‘ಹರಾಜು ಮಾರುಕಟ್ಟೆಯಲ್ಲಿ ರೈತರಿಗೆ ಮೂಲಸೌಕರ್ಯ ಇಲ್ಲವಾಗಿದೆ. ಈ ಬಗ್ಗೆ ಮಾರುಕಟ್ಟೆ ವ್ಯವಸ್ಥಾಪಕರು ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಆರೋಪಿಸಿದರು.
‘ಶೀಘ್ರ ಸಭೆ ನಡೆಸಿ ರೈತರ ಸಮಸ್ಯೆಗಳಗೆ ಸ್ಪಂದಿಸಲಾಗುವುದು. ಗುಣಮಟ್ಟದ ತಂಬಾಕಿಗೆ ಉತ್ತಮ ದರ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದು, ಮಾರುಕಟ್ಟೆಗೆ 15 ದಿನಗಳಿಗೆ ಒಮ್ಮೆ ಭೇಟಿ ನೀಡುತ್ತೇನೆ’ ಎಂದು ಸಿಂಹ ಭರವಸೆ ನೀಡಿದರು.
ರೈತ ಮುಖಂಡ ನಾಗರಾಜಪ್ಪ ಮಾತನಾಡಿ, ತಂಬಾಕು ಕೆ.ಜಿ.ಗೆ ₹ 180 ಬೆಲೆ ಸಿಗಬೇಕು. ಇಲ್ಲವಾದಲ್ಲಿ 10 ದಿನಗಳಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.