ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತಾ ಜೀವ ಉಳಿಸಿದ ಪಿಟೀಲು ವಾದನ!

ಸ್ವರ ಚಿಕಿತ್ಸೆಗೆ ಕೋಮಾದಿಂದ ಹೊರಬಂದ ಪಶ್ಚಿಮ ಬಂಗಾಳದ ಯುವತಿ
Last Updated 16 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ಮಂಡ್ಯ: ಎನ್‌.ರಾಜಂ ಅವರ ಪಿಟೀಲು ನಾದ ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ಜೀವ ಉಳಿಸಿದೆ. ಶಾಂತ ನದಿ
ಯಂತೆ ಹರಿಯುವ ‘ದರ್ಬಾರಿ ಕಾನಡ’ ರಾಗವು ಮಿದುಳಿಗೆ ಚೈತನ್ಯ ತುಂಬಿದೆ.

ವೈದ್ಯಕೀಯ ವಿಜ್ಞಾನವನ್ನೂ ಮೀರಿದ ಈ ಸಂಗೀತ ಚಿಕಿತ್ಸೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಳ್ಳಿಯೊಂದರ ಸಂಗೀತಾ ದಾಸ್‌ ಡೆಂಗಿ ಜ್ವರದಿಂದ ಬಳಲುತ್ತಿದ್ದರು. ನ.7ರಂದು
ಕೋಮಾಕ್ಕೆ ಜಾರಿದ್ದರು. ವಿವಿಧೆಡೆ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಲಿಲ್ಲ. 27ರಂದು ಕೋಲ್ಕತ್ತದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ (ಎಸ್‌ಎಸ್‌ಕೆಎಂ) ದಾಖಲಿಸಲಾಯಿತು. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಪ್ರಜ್ಞಾಹೀನರಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.

ವೈದ್ಯ ಪಿಟೀಲು ವಾದಕ:ಎಸ್‌ಎಸ್‌ಕೆಎಂ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್‌ ಕಾರ್‌ ಸ್ವತಃ ಪಿಟೀಲು ವಾದಕ. ಪಶ್ಚಿಮ ಬಂಗಾಳ ಆಕಾಶವಾಣಿಯಲ್ಲಿ ಕಲಾವಿದರಾಗಿದ್ದವರು. ಹೃದ್ರೋಗ ಅರಿವಳಿಕೆ ತಜ್ಞರಾದ ಅವರು 2011ರಿಂದಲೂ ಸಂಗೀತ ಚಿಕಿತ್ಸೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಸಂಗೀತಾ ಅವರಿಗೆ ಸ್ವರ ಚಿಕಿತ್ಸೆ ಕೊಡಿಸಲು ಅವರು ನಿರ್ಧರಿಸಿದರು. ಎನ್‌.ರಾಜಂ ನುಡಿಸಿರುವ 24 ನಿಮಿಷಗಳ ‘ದರ್ಬಾರಿ ಕಾನಡ’ ರಾಗದ ಪ್ರಸ್ತುತಿಯನ್ನು ನಿತ್ಯ ಮೂರು ಬಾರಿ ಕೇಳಿಸಿದರು. ಜೊತೆಗೆ ಔಷಧವನ್ನೂ ಮುಂದುವ
ರಿಸಿದರು. ಎರಡು ವಾರಗಳಲ್ಲಿ ಕೋಮಾದಿಂದ ಹೊರಬಂದರು. ‘ತೆರೆದ ಹೃದಯದ ಶಸ್ತ್ರಚಿಕಿತ್ಸೆ ವೇಳೆ ರಾಗ ಚಿಕಿತ್ಸೆ ನೀಡುತ್ತಿದ್ದೆ. ಆದರೆ, ಫಲಿತಾಂಶ ತಿಳಿಯುತ್ತಿರಲಿಲ್ಲ. ಈಗ ನನ್ನ ಸಂಶೋಧನೆಗೆ ಮೊದಲ ಬಾರಿ ಫಲ ಸಿಕ್ಕಿದೆ. ಇನ್ನು 15 ದಿನಗಳಲ್ಲಿ ಸಂಗೀತಾ ಸಂಪೂರ್ಣ ಗುಣಮುಖರಾಗುವರು’ ಎಂದು ಡಾ. ಸಂದೀಪ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಾನವೀಯ ಸ್ಪರ್ಶದ ರಾಗ’

‘ಸಂಗೀತಾ ವಿಷಯ ಕೇಳಿ ನನ್ನ ಮನಸ್ಸು ತುಂಬಿ ಬಂದಿದೆ. ದರ್ಬಾರಿ ಕಾನಡದಲ್ಲಿ ರೋಗ ಗುಣಪಡಿಸುವ ಶಕ್ತಿ ಇರುವುದಂತೂ ಸತ್ಯ. ರಾಗ ರಸದಲ್ಲಿ ಮಾನವೀಯ ಸ್ಪರ್ಶ ಕಂಡಿದ್ದೇನೆ. ಶಾಂತವಾಗಿ ಆರಂಭವಾಗುವ ವಿಲಂಬಿತ ಲಯ ಒಮ್ಮೆಲೇ ತಾರಕಕ್ಕೇರಿ ಆರ್ಭಟಿಸುತ್ತದೆ. ಆಲಾಪ ಆಲಿಸುವಾಗ ನಿಮ್ಮ ಹೃದಯ ಬಡಿತ ಲೆಕ್ಕ ಹಾಕಿ, ಈ ರಾಗದ ಶಕ್ತಿ ತಿಳಿಯುತ್ತದೆ’ ಎಂದು ಮುಂಬೈನಲ್ಲಿರುವ ಎನ್‌.ರಾಜಂ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲ್ಲು ಹೃದಯವೂ ಕರಗುತ್ತದೆ: ‘ಕಾನಡದ ಮೂಲ ಕರ್ನಾಟಕ ಶಾಸ್ತ್ರೀಯ ಸಂಗೀತ. ಕಾನಡ ರಾಗವನ್ನು ರಾಜರ ದರ್ಬಾರ್‌ನಲ್ಲಿ ಹೆಚ್ಚು ಹಾಡುತ್ತಿದ್ದ ಕಾರಣ ದರ್ಬಾರಿ ಕಾನಡ ಎಂಬ ಹೆಸರು ಬಂದಿದೆ’ ಎಂದು ಧಾರವಾಡದ ಪಂಡಿತ್ ಅರಣ್ಯಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT