ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಲ್ಲಿ ಸಂಜೆ 6ರಿಂದಲೇ ನಿರ್ಬಂಧ

ಕೊರೊನಾ ವೈರಾಣು ಹರಡುವಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ–ಸಚಿವ
Last Updated 1 ಜುಲೈ 2020, 14:08 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನಲ್ಲಿ ರಾತ್ರಿ 8 ಗಂಟೆ ಬದಲು ಸಂಜೆ 6ರಿಂದಲೇ ಸಾರ್ವಜನಿಕರ ಓಡಾಟ ಹಾಗೂ ಎಲ್ಲಾ ರೀತಿಯ ವಹಿವಾಟುಗಳಿಗೆ ನಿರ್ಬಂಧ ವಿಧಿಸಲು ನಿರ್ಧರಿಸಿದ್ದು, ಶುಕ್ರವಾರದಿಂದಲೇ ಜಾರಿಗೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.‌

ಕೊರೊನಾ ವೈರಾಣು ಹರಡುವಿಕೆ ನಿಯಂತ್ರಣ ಸಂಬಂಧ ಬುಧವಾರ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಈ ಮಾಹಿತಿ ನೀಡಿದರು.

ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. 6ರ ನಂತರ ವಾಹನ ಸಂಚಾರಕ್ಕೂ ಅವಕಾಶವಿಲ್ಲ. ವ್ಯಾಪಾರ ಕೂಡ ನಡೆಸುವಂತಿಲ್ಲ. ಸಾರ್ವಜನಿಕರ ಸಹಕಾರ ಹಾಗೂ ಜವಾಬ್ದಾರಿ ಸಹ ದೊಡ್ಡದು. ಜಿಲ್ಲೆಯಲ್ಲಿ ತೀವ್ರ ಉಸಿರಾಟ ಸಮಸ್ಯೆ (ಎಸ್‌ಎಆರ್‌ಐ) ಹಾಗೂ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

‘ಮೈಸೂರಿನ ಕೋವಿಡ್‌ ಆಸ್ಪತ್ರೆಯಲ್ಲಿ ನರ್ಸ್ ಹಾಗೂ ‘ಡಿ’ ಗ್ರೂಪ್ ನೌಕರರ ಕೊರತೆ ಇದೆ. ಈ ವಿಚಾರವನ್ನು ಜಿಲ್ಲಾಧಿಕಾರಿ ನನ್ನ ಗಮನಕ್ಕೆ ತಂದಿದ್ದಾರೆ. ಶಾಸಕ ರಾಮದಾಸ್‌ ಕೂಡ ಬೆಂಗಳೂರಿನಲ್ಲಿ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದಾರೆ. ಈ ಬಗ್ಗೆ ಎರಡು ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ 55 ವರ್ಷ ಮೇಲಿನ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಪಡಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದರು.

ಕೋವಿಡ್‌ ಪರೀಕ್ಷೆ ಮಾಡುವುದು, ಹಾಸಿಗೆ ಸಂಖ್ಯೆ ಹೆಚ್ಚಿಸುವುದು ಸೇರಿದಂತೆ ಮುಂದಿನ ಎರಡು ತಿಂಗಳಿಗೆ ಏನು ವ್ಯವಸ್ಥೆ ಮಾಡಬೇಕು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

‘ಮೈಸೂರು ಜಿಲ್ಲಾಡಳಿತ ಹಾಗೂ ವೈದ್ಯರ ತಂಡ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇವೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ನುಡಿದರು. ಸಂಸದ ಪ್ರತಾಪಸಿಂಹ, ಶಾಸಕ ಎಸ್‌.ಎ.ರಾಮದಾಸ್‌, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT