ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಲ ಇಚ್ಛಾ ಶಕ್ತಿಯಿಂದ 370ನೇ ವಿಧಿ ರದ್ದು: ಜೆ.ಪಿ.ನಡ್ಡಾ

‘ಒಂದು ದೇಶ ಒಂದು ಸಂವಿಧಾನ’ ಅಭಿಯಾನ
Last Updated 22 ಸೆಪ್ಟೆಂಬರ್ 2019, 18:47 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾ ಶಕ್ತಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ರಣತಂತ್ರದ ಕಾರಣ ಜಮ್ಮು– ಕಾಶ್ಮೀರದಲ್ಲಿ ತಾರತಮ್ಯ ಮತ್ತು ಅಭಿವೃದ್ಧಿಗೆ ತೊಡಕಾಗಿದ್ದ 370 ನೇ ವಿಧಿ ರದ್ದಾಯಿತು ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಒಂದು ದೇಶ– ಒಂದು ಸಂವಿಧಾನ’ ರಾಷ್ಟ್ರೀಯ ಅಭಿಯಾನ ಮತ್ತು 370 ನೇ ವಿಧಿ ರದ್ಧತಿ ಬಗ್ಗೆ ಜನ ಜಾಗರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಮ್ಮು– ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು ಎಂಬುದು ಐತಿಹಾಸಿಕ ಸುಳ್ಳು. ಏಕೆಂದರೆ ಆ ಸ್ಥಾನಮಾನ ತಾತ್ಕಾಲಿಕವಾಗಿ ನೀಡಲಾಗಿತ್ತು. ಅದು ಶಾಶ್ವತವಾಗಿರಲಿಲ್ಲ’ ಎಂದು ಹೇಳಿದರು.

‘ವಿಶೇಷ ಸ್ಥಾನಮಾನ ನೀಡುವುದನ್ನು ಡಾ.ಅಂಬೇಡ್ಕರ್‌ ಅವರೂ ವಿರೋಧಿಸಿದ್ದರು. ಕಾಶ್ಮೀರಕ್ಕೆ ಗಡಿ ಸುರಕ್ಷತೆ, ಆಹಾರ ವಿತರಣೆ, ರಸ್ತೆ ಸಂಪರ್ಕ, ರಕ್ಷಣಾ ವ್ಯವಸ್ಥೆ ಬಲವರ್ಧನೆ ಸಹಕಾರ ನೀಡಬಹುದು. ಆದರೆ, ಅಲ್ಲಿ ಭಾರತೀಯರಿಗೆ ಸಾಂವಿಧಾನಿಕ ಅಧಿಕಾರಗಳನ್ನು ನಿರಾಕರಿಸುವುದನ್ನು ಒಪ್ಪುವುದಿಲ್ಲ ಎಂಬುದಾಗಿ ಸ್ಪಷ್ಟ ಮಾತುಗಳಲ್ಲೇ ಅಂಬೇಡ್ಕರ್‌ ಹೇಳಿದ್ದರು’ ಎಂದು ನಡ್ಡಾ ವಿವರಿಸಿದರು.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಇಡೀ ದೇಶವೇ ಸಂತಸದಿಂದ ಸ್ವಾಗತಿಸಿದೆ. ಕಾಶ್ಮೀರದ ಜನರೂ ಸಂಭ್ರಮಿಸಿದ್ದಾರೆ. ಹಲವು ದಶಕಗಳಿಂದ ದ್ವಿತೀಯ ದರ್ಜೆ ನಾಗರಿಕರಂತೆ ಜೀವನ ನಡೆಸಿದ್ದ, ಪರಿಶಿಷ್ಟ ಜಾತಿ ಮತ್ತು ಹಿಂದುಳಿದವರು, ಸಫಾಯಿ ಕರ್ಮಚಾರಿಗಳಿಗೆ ಇದರಿಂದ ಸಂತಸವಾಗಿದೆ. ಇನ್ನು ಮುಂದೆ ಅಲ್ಲಿ ಅವರಿಗೆ ಎಲ್ಲ ರೀತಿ ಅಧಿಕಾರ ಮತ್ತು ಮೀಸಲು ಸೌಲಭ್ಯಗಳೂ ಸಿಗಲಿದೆ ಎಂದು ತಿಳಿಸಿದರು.

70 ವರ್ಷಗಳ ಕಳಂಕಕ್ಕೆ ಮುಕ್ತಿ: 370 ನೇ ವಿಧಿಯನ್ನು ರದ್ದು ಮಾಡುವ ಮೂಲಕ 70 ವರ್ಷಗಳ ಕಳಂಕವನ್ನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ತೊಡೆದು ಹಾಕಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ದೇಶದ ಅಖಂಡತೆ, ಸಾರ್ವಭೌಮತ್ವಕ್ಕೆ ಅಡ್ಡಿಯಾಗಿದ್ದ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸುವ ಪ್ರಯತ್ನವನ್ನು ಕಾಂಗ್ರೆಸ್‌ ನಾಯಕರು ಮಾಡಿರಲಿಲ್ಲ. ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗುವುದಕ್ಕೆ ಏನು ಆಗ ಬೇಕಿತ್ತೋ ಅದನ್ನು ಮಾಡಿತ್ತು ಎಂದು ಹರಿಹಾಯ್ದರು.

‘ಜಮ್ಮು– ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ವಿಚಾರವನ್ನು ಜನಸಂಘ ಮತ್ತು ಬಿಜೆಪಿ ಮೊದಲಿನಿಂದ ಪ್ರತಿಪಾದನೆ ಮಾಡಿಕೊಂಡೇ ಬಂದಿವೆ. ನಾವು ಹೇಳಿದ್ದನ್ನು ಮಾಡಿದ್ದೇವೆ. ಮುಂದೆ ಅಲ್ಲಿ ಅಭಿವೃದ್ಧಿ ಪರ್ವ ಆರಂಭಿಸುತ್ತೇವೆ. ಅಲ್ಲಿಯೂ ಬೆಳವಣಿಗೆ ಮತ್ತು ಅಭಿವೃದ್ಧಿ ಆಗಬೇಕು’ ಎಂದು ಸದಾನಂದಗೌಡ ತಿಳಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ವಿ.ಸೋಮಣ್ಣ, ರಾಜ್ಯ ಬಿಜೆಪಿ ಉಸ್ತುವಾರಿ
ಮುರುಳೀಧರರಾವ್‌ ಅವರು ಈ ಕಾರ್ಯಕ್ರಮದಲ್ಲಿ ಇದ್ದರು.

ರಾಷ್ಟ್ರ ವಿರೋಧಿಗಳು ಅದನ್ನು ವಿರೋಧಿಸಿದ್ದಾರೆ

370 ನೇ ವಿಧಿ ರದ್ದು ಮಾಡಿರುವುದನ್ನು ದೇಶ ಭಕ್ತರು ಸ್ವಾಗತಿಸಿದ್ದರೆ, ರಾಷ್ಟ್ರ ವಿರೋಧಿಗಳು ಅದನ್ನು ವಿರೋಧಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನರೇಂದ್ರ ಮೋದಿಯವರು 5 ವರ್ಷಗಳಲ್ಲಿ ಕಾಶ್ಮೀರವನ್ನು ಮಾತ್ರವಲ್ಲ, ಪಾಕ್‌ ಆಕ್ರಮಿತ ಕಾಶ್ಮೀರವನ್ನೂ ಭಾರತದೊಳಗೆ ತರುತ್ತಾರೆ ಎಂಬುದನ್ನು ರಾಷ್ಟ್ರ ವಿರೋಧಿಗಳು ಮನಸ್ಸಿನಲ್ಲಿ ಇಟ್ಟುಕೊಳ್ಳಲಿ ಎಂದು ತಿಳಿಸಿದರು.

ಜ್ಞಾನವಂತರು, ಪಂಡಿತರು ರೂಪುಗೊಳ್ಳಬೇಕಿದ್ದ ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ತಾಂಡವವಾಡುತ್ತಿದೆ. ಭಯೋತ್ಪಾದನೆ ಮೂಲೋತ್ಪಾಟನೆ ಮಾಡುತ್ತೇವೆ. ಕಾಶ್ಮೀರ ಮತ್ತೊಮ್ಮೆ ಶಾರದೆ ನೆಲೆವೀಡಾ ಗಬೇಕು. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT