ಶುಕ್ರವಾರ, ಸೆಪ್ಟೆಂಬರ್ 17, 2021
26 °C

ನರೇಗಾ: ರಾಜ್ಯ ಸರ್ಕಾರ ಭರಿಸಿದ ₹1090 ಕೋಟಿ ಹಣ ಪಾವತಿಸದ ಕೇಂದ್ರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನರೇಗಾದ ಕೂಲಿಕಾರ್ಮಿಕರಿಗೆ ರಾಜ್ಯ ಸರ್ಕಾರ ಪಾವತಿಸಿದ್ದ ₹1090 ಕೋಟಿಯನ್ನು ಕೇಂದ್ರ ಸರ್ಕಾರ ಇನ್ನೂ ಪಾವತಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

 ಅಂಕೋಲಾ ತಾಲ್ಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದರು.

ಎರಡು ವರ್ಷಗಳ ಹಿಂದೆ ನರೇಗಾ ಕೂಲಿ ಕಾರ್ಮಿಕರಿಗೆ ಮೂರ್ನಾಲ್ಕು ತಿಂಗಳು ಸಂಬಳ ನೀಡಲು ಅನನುಕೂಲವಾಗಿತ್ತು. ಆದರೆ ಅವರಿಗೆ ಸಮಸ್ಯೆ ಆಗಬಾರದು ಎಂದು ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದಲೇ ಹಣ ಪಾವತಿಸಿದ್ದೆವು. ದುರಾದೃಷ್ಟವಶಾತ್ ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಭರಿಸಿದ ಹಣವನ್ನು ಕೇಂದ್ರ ಸರ್ಕಾರ ವಾಪಸು ಮಾಡಿಲ್ಲ. ಈ ಬಗ್ಗೆ ಕೇಂದ್ರ ಸಚಿವರಿಗೆ ತ್ವರಿತವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇವೆ. ಜನರಿಗೆ ತೊಂದರೆಯಾಗುತ್ತದೆ ಎಂದು ಪಾವತಿ ಮಾಡಲಾಗಿತ್ತು. ಈ ಹಣವು ಕೇಂದ್ರದಿಂದ ಬರಬೇಕಿರುವ ಅನುದಾನ ಅಲ್ಲ ಎಂದರು.

ಪರಿಶಿಷ್ಠ ಜಾತಿ ಮತ್ತು ಪಂಗಡದ ಸರ್ಕಾರ ನೌಕರರ ಮುಂಬಡ್ತಿಯನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ನಾವು ಬದ್ಧರಾಗಿದ್ದೇವೆ. ಅದಕ್ಕೆ ಸಂಬಂಧಪಟ್ಟ ಬೇರೆ ಪ್ರಕರಣವೊಂದರ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಮುಂಬಡ್ತಿ, ಹಿಂಬಡ್ತಿ ಮೇಲೆ ಪರಿಣಾಮ ಬೀರಲಿದೆ. ಅಲ್ಲಿಯ ತೀರ್ಪು ಬರುವವರೆಗೆ ಸುಮ್ಮನಿರುವುದು ಸೂಕ್ತ ಎಂದು ಅಡ್ವೋಕೇಟ್ ಜನರಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ, ಅದು ಡಿಪಿಆರ್ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ತೀರ್ಪು ಬರುವವರೆಗೂ ಕಾಯುತ್ತೇವೆ ಎಂದರು‌.

ಕಾಂಗ್ರೆಸ್, ಕೇಂದ್ರದಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ (ಸಿಡಬ್ಲ್ಯುಎಸ್ಇ) ಚರ್ಚಿಸಿ ದೇಶದಲ್ಲಿ ಅವಶ್ಯಕತೆ ಇದ್ದಲ್ಲಿ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಅದರಂತೆ ರಾಜ್ಯದಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುವ ತೀರ್ಮಾನವಾಗಿದೆ. ಆದರೆ ಇದನ್ನು ಮನಸ್ಫರ್ವಕವಾಗಿ ಸ್ವಾಗತ ಮಾಡುತ್ತೇವೆ ಎಂದು ಅಲ್ಲ. ನಷ್ಟ ಕಷ್ಟ ಇದ್ದೇ ಇರುತ್ತೆ. ಆದರೆ ಅದೆಲ್ಲವನ್ನು ಸಹಿಸಿಕೊಂಡು ಹೋಗುವ ಅನಿವಾರ್ಯತೆ ಇದೆ. ಮುಂಬರುವ ಚುನಾವಣೆಯಲ್ಲಿ ದೇಶದಲ್ಲಿ ಪರ್ಯಾಯ ಸರ್ಕಾರ ತರಬೇಕೆಂಬ ಮನಸ್ಥಿತಿ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಲ್ಲಿ ಇದೆ. ಎಲ್ಲ ವಿಪಕ್ಷಗಳು ಕೂಡ ಇದೇ ಚಿಂತನೆಯಲ್ಲಿರುವುದರಿಂದ ರಾಜ್ಯದಲ್ಲೂ ಇದೇ ರೀತಿ ಮುಂದುವರಿಯುತ್ತೇವೆ ಎಂದು ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು