ಹಂಪಿ ಎಕ್ಸ್‌ಪ್ರೆಸ್ ರೈಲು ವಿಳಂಬ: ‘ನೀಟ್’ ವಂಚಿತ ವಿದ್ಯಾರ್ಥಿಗಳು

ಬೆಂಗಳೂರು: ಏಳು ಗಂಟೆ ವಿಳಂಬವಾಗಿ ತಲುಪಿದ ಹಂಪಿ ಎಕ್ಸ್‌ಪ್ರೆಸ್ ರೈಲು ಹಾಗೂ ಪರೀಕ್ಷಾ ಕೇಂದ್ರ ಬದಲಾವಣೆಯಿಂದಾಗಿ ನಗರದಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಲು ಸುಮಾರು 500 ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿಲ್ಲ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಗತ್ಯವಾಗಿರುವ ರಾಷ್ಟ್ರೀಯ ಅರ್ಹತಾ–ಪ್ರವೇಶ ಪರೀಕ್ಷೆ (ನೀಟ್) ಭಾನುವಾರ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಯಿತು.
ಪರೀಕ್ಷೆ ತಪ್ಪುವುದು ನಿಶ್ಚಿತ ಎಂದು ರೈಲಿನಲ್ಲೇ ಅಂದಾಜಿಸಿದ್ದ ಕೆಲವು ವಿದ್ಯಾರ್ಥಿಗಳು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೇ ಟ್ವೀಟ್ ಮೂಲಕ ಅಳಲು ತೋಡಿಕೊಂಡರು. ಮರು ಪರೀಕ್ಷೆ ನಡೆಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ನೈರುತ್ಯ ರೈಲ್ವೆ ಸಹ ಸೋಮವಾರ ಪತ್ರ ಬರೆದು ಮರು ಪರೀಕ್ಷೆ ನಡೆಸುವಂತೆ ಕೋರಲಿದೆ.
–ಪ್ರಜಾವಾಣಿ ಚಿತ್ರ
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ರೈಲು ಭಾನುವಾರ ಬೆಳಿಗ್ಗೆ 7ಕ್ಕೆ ತಲುಪಬೇಕಿತ್ತು. ಆದರೆ ಬಂದುದು ಮಧ್ಯಾಹ್ನ 2.30ಕ್ಕೆ.
ಮಾರ್ಗ ಬದಲಾಯಿಸಿದ ಕಾರಣ ಈ ರೈಲು ಅರಸೀಕೆರೆಗೆ ಬಂದಾಗಲೇ ಮಧ್ಯಾಹ್ನ 1 ಗಂಟೆಯೊಳಗೆ ಬೆಂಗಳೂರು ತಲುಪುವುದು ಅಸಾಧ್ಯ ಎಂಬುದು ವಿದ್ಯಾರ್ಥಿಗಳಿಗೆ ಗೊತ್ತಾಗಿತ್ತು. ಆಗಲೇ ಕೆಲವು ವಿದ್ಯಾರ್ಥಿಗಳು ‘ಪ್ರಜಾವಾಣಿ’ ಜತೆ ತಮ್ಮ ಅಳಲು ತೋಡಿಕೊಂಡಿದ್ದರು. ‘ಬಳ್ಳಾರಿ, ಕೊಪ್ಪಳ, ಹೊಸಪೇಟೆ ಭಾಗದಿಂದ ನೂರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲು ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದೇವೆ. ಬೆಳಿಗ್ಗೆ 7 ಗಂಟೆಗೆ ಬೆಂಗಳೂರು ತಲುಪಬೇಕಿತ್ತು. ಮಧ್ಯಾಹ್ನ 1 ಗಂಟೆ ಒಳಗೆ ತಲುಪುವಂತೆ ಮಾಡಿ’ ಎಂದು ಕೋರಿದ್ದರು.
ಇದನ್ನೂ ಓದಿ: ಹಂಪಿ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆಯ ಮಾಹಿತಿ ನೀಡಲಾಗಿತ್ತು: ರೈಲ್ವೆ ಇಲಾಖೆ
ರೈಲು ತುಮಕೂರು ನಿಲ್ದಾಣಕ್ಕೆ ಮಧ್ಯಾಹ್ನ 1.15ಕ್ಕೆ ಬಂದಿತ್ತು. ಬಹುತೇಕ ವಿದ್ಯಾರ್ಥಿಗಳು ಹತಾಶರಾಗಿ ಗೋಳಾಡುತ್ತಿದ್ದ ದೃಶ್ಯ ಕಂಡುಬಂತು. ತಿಪಟೂರು ನಿಲ್ದಾಣದಲ್ಲೂ ಇದೇ ಪರಿಸ್ಥಿತಿ ಇತ್ತು. ತುಮಕೂರು ನಿಲ್ದಾಣದಲ್ಲಿ ಇಳಿದ ಕೆಲವು ವಿದ್ಯಾರ್ಥಿಗಳು ಕಾರನ್ನು ಬಾಡಿಗೆಗೆ ಪಡೆದು ಬೆಂಗಳೂರಿಗೆ ಧಾವಿಸಿದರು.
ಪರೀಕ್ಷಾ ಕೇಂದ್ರ ಬದಲಾವಣೆ: ನೀಟ್ ಪರೀಕ್ಷಾ ಕೇಂದ್ರ ಬದಲಾವಣೆ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಎರಡು ದಿನಗಳ ಹಿಂದೆಯೇ ಸೂಚನೆ ನೀಡಿತ್ತು. ಮಾಧ್ಯಮಗಳಲ್ಲೂ ಇದು ಪ್ರಕಟವಾಗಿತ್ತು. ಆದರೆ ಇದನ್ನು ಸರಿಯಾಗಿ ಗಮನಿಸದ ವಿದ್ಯಾರ್ಥಿಗಳು ತಮಗೆ ಮೊದಲೇ ಸೂಚಿಸಿದ್ದ ಯಲಹಂಕ ಬಳಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಬದಲಿ ಕೇಂದ್ರ ಇದ್ದುದು ಹೊಸೂರು ರಸ್ತೆಯಲ್ಲಿ. ಕೊನೇ ಕ್ಷಣದಲ್ಲಿ 30 ಕಿ.ಮೀ ಪ್ರಯಾಣ ಮಾಡಿ ಅವಸರದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳುವ ಕಷ್ಟ ಅಲ್ಲಿನ ವಿದ್ಯಾರ್ಥಿಗಳಿಗೆ ಒದಗಿತು. ಇನ್ನೂ ಕೆಲವರಿಗೆ ಬದಲಿ ಕೇಂದ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ.
ಫೋನ್ ಮಾಡಲಾಗಿತ್ತು: ಪರೀಕ್ಷಾ ಕೇಂದ್ರಗಳು ಬದಲಾಗಿರುವ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಕರೆ ಮಾಡಿ ಧ್ವನಿಮುದ್ರಿತ ಸಂದೇಶ ನೀಡಲಾಗಿತ್ತು. ಎಲ್ಲ ಅಭ್ಯರ್ಥಿಗಳಿಗೂ ಇ ಮೇಲ್ ಮೂಲಕವೂ ತಿಳಿಸಲಾಗಿತ್ತು ಎಂದು ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
3.15ಕ್ಕೂ ಪರೀಕ್ಷೆಗೆ ಅವಕಾಶ: ಪರೀಕ್ಷಾ ಕೇಂದ್ರ ಬದಲಾವಣೆಯ ಗೊಂದಲದಿಂದ ವಿಚಲಿತರಾಗಿ ಯಲಹಂಕದಿಂದ ಹೊಸೂರು ರಸ್ತೆಯ ದಯಾನಂದ ಸಾಗರ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ 3.15ಕ್ಕೆ ಬಂದ ವಿದ್ಯಾರ್ಥಿಗಳಿಗೆ ಸಹ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: ಆಸ್ಪತ್ರೆಯಿಂದ ಆಂಬುಲೆನ್ಸ್ನಲ್ಲಿ ಬಂದು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿ
* ನಮ್ಮದೇನೂ ತಪ್ಪಿಲ್ಲ, ರಾಜಕಾರಣಿಗಳ ಮಕ್ಕಳೂ ನಮ್ಮಂತೆ ಪರೀಕ್ಷೆ ತಪ್ಪಿಸಿಕೊಂಡಿದ್ದರೆ ಸುಮ್ಮನೆ ಇರುತ್ತಿದ್ದರೇ?
- ಶ್ರೀನಿವಾಸ್, ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ವಿದ್ಯಾರ್ಥಿ
ಮರು ಪರೀಕ್ಷೆಗೆ ಆಗ್ರಹ
ಹಂಪಿ ಎಕ್ಸ್‌ಪ್ರೆಸ್ ರೈಲು 7 ಗಂಟೆ ವಿಳಂಬವಾಗಿದ್ದರಿಂದ ಉತ್ತರ ಕರ್ನಾಟಕ ಭಾಗದ ನೂರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಕೊನೆಯ ಹಂತದಲ್ಲಿ ಪರೀಕ್ಷಾ ಕೇಂದ್ರ ಬದಲಾವಣೆ ಹಾಗೂ ಸೂಕ್ತ ಸಂವಹನ ಕೊರತೆಯಿಂದಾಗಿಯೂ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾದರು. ಪರೀಕ್ಷೆಯಿಂದ ವಂಚಿತರಾದವರಿಗೆ ಮರು ಪರೀಕ್ಷೆ ನಡೆಸಬೇಕು.
-ಎಚ್.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ
I request PM @narendramodi, Rail Minister @PiyushGoyal, @HRDMinistry , @PrakashJavdekar
to intervene and ensure that students who have missed the opportunity today get another chance to write the #NEET2019 Exam— CM of Karnataka (@CMofKarnataka) May 5, 2019
Mr. @narendramodi,
You pat your own back for others' achievements but will you also take the responsibility for your cabinet min' incapabilities.
Hundreds of students in Karnataka may not be able to take up NEET because of delay in the train services.
1/2— Siddaramaiah (@siddaramaiah) May 5, 2019
ಹೊಣೆ ಹೊರಲು ಸಿದ್ಧರಿದ್ದೀರಾ?
ಇತರರ ಸಾಧನೆಯನ್ನು ನಿಮ್ಮದೇ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ನೀವು, ನಿಮ್ಮ ಸಂಪುಟದ ಸಚಿವರ ಅಸಾಮರ್ಥ್ಯದ ಹೊಣೆ ಹೊರಲು ಸಿದ್ಧರಿದ್ದೀರಾ?. ರೈಲು ವಿಳಂಬದಿಂದಾಗಿ ಕರ್ನಾಟಕದಲ್ಲಿ ನೂರಾರು ಮಂದಿಗೆ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ. ರೈಲ್ವೆ ಸಚಿವ ಪೀಯೂಷ್ ಗೋಯಲ್‌ಗೆ ಮುಂದಿನ ಕೆಲವು ದಿನವಾದರೂ ಸರಿಯಾಗಿ ಕೆಲಸ ಮಾಡಲು ತಿಳಿಸಿ. ಮುಂದೆ ನಾವು ಅವ್ಯವಸ್ಥೆಯನ್ನು ಸರಿಪಡಿಸಲಿದ್ದೇವೆ. ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಿ.
- ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ
ಮೊದಲೇ ಮಾಹಿತಿ ನೀಡಲಾಗಿತ್ತು
ಹುಬ್ಬಳ್ಳಿಯಿಂದ ಮೈಸೂರಿಗೆ ತೆರಳುವ ಹಂಪಿ ಎಕ್ಸ್‌ಪ್ರೆಸ್ ರೈಲಿನ ಮಾರ್ಗವನ್ನು ಮೇ 3ರಿಂದ 9ರ ವರೆಗೆ ಬದಲಾವಣೆ ಮಾಡಲಾಗುತ್ತದೆ ಎಂದು ಮೇ 1ರಂದೇ ಪ್ರಕಟಣೆ ಮೂಲಕ ತಿಳಿಸಲಾಗಿತ್ತು ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಗುಂತಕಲ್ ಮತ್ತು ಕಲ್ಲೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಮಾರ್ಗ ಬದಲಾವಣೆ ಮಾಡಲಾಗಿದೆ. ಹೀಗಾಗಿ ರೈಲು ಬಳ್ಳಾರಿ– ಗುಂತಕಲ್– ಧರ್ಮಾವರ– ಪೆನುಕೊಂಡ– ಯಲಹಂಕ ಮಾರ್ಗದ ಬದಲಾಗಿ ಬಳ್ಳಾರಿ– ರಾಯದುರ್ಗ– ಚಿಕ್ಕಜಾಜೂರು– ಅರಸೀಕೆರೆ– ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬಂದಿದೆ. ರೈಲು 120 ಕಿ.ಮೀ ಹೆಚ್ಚುವರಿ ಪ್ರಯಾಣ ಮಾಡಿದೆ. ಅಲ್ಲದೇ, ಬಳ್ಳಾರಿಯಲ್ಲಿ ಎಂಜಿನ್ ತಿರುಗಿಸಿಕೊಳ್ಳಬೇಕಿತ್ತು. ಒಟ್ಟು 2.55 ಗಂಟೆ ವಿಳಂಬವಾಗಿ ಭಾನುವಾರ ಮಧ್ಯಾಹ್ನ 2.36ಕ್ಕೆ ಬೆಂಗಳೂರು ತಲುಪಿದೆ‘ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಹುಬ್ಬಳ್ಳಿಯಿಂದ ಶನಿವಾರ ಸಂಜೆ 6.20ಕ್ಕೆ ಹೊರಡಬೇಕಿದ್ದ ರೈಲು 8.20ಕ್ಕೆ ಹೊರಟಿದೆ. ಮಾರ್ಗ ಬದಲಾವಣೆ ಮತ್ತು ಎರಡು ಗಂಟೆ ತಡವಾಗಿ ಪ್ರಯಾಣ ಆರಂಭಿಸಿದ ಮಾಹಿತಿಯನ್ನು ಸೀಟು ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಎಸ್ಎಂಎಸ್ ಮೂಲಕ ಶನಿವಾರವೇ ತಿಳಿಸಲಾಗಿದೆ’ ಎಂದೂ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.