ವಿದ್ಯುತ್ ಅವಘಡ: ಮೂವರು ಕಾರ್ಮಿಕರ ಸಾವು

ಶುಕ್ರವಾರ, ಏಪ್ರಿಲ್ 19, 2019
27 °C
ತೆಂಗಿನ ಕಾಯಿ ಕೊಯ್ಲು ಮಾಡುವಾಗ ನಡೆದ ಘಟನೆ

ವಿದ್ಯುತ್ ಅವಘಡ: ಮೂವರು ಕಾರ್ಮಿಕರ ಸಾವು

Published:
Updated:
Prajavani

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ವಿರಾಜಪೇಟೆ ತಾಲ್ಲೂಕಿನ ಅರ್ವತೊಕ್ಲು ಗ್ರಾಮದಲ್ಲಿ ಮರದಿಂದ ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ತಂತಿ ಮೇಲೆ ಅಲ್ಯುಮಿನಿಯಂ ಏಣಿ ಜಾರಿ ಬಿದ್ದು, ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾವಡಿ ಗ್ರಾಮದ ಇಗ್ಗುಡ ಸತೀಶ್ (50), ಇಗ್ಗುಡ ರವಿ (45), ಮೊಟ್ಟೇರ ಧರ್ಮಜ (50) ಮೃತಪಟ್ಟವರು.

ಅರ್ವತೋಕ್ಲು ಗ್ರಾಮದ ರಾಮಜನ್ಮ ಅವರ ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿ ಜಾರಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ರಾತ್ರಿ ಮನೆಗೆ ಬಾರದ ಕಾರಣ ಕುಟುಂಬದವರು ಸೋಮವಾರ ಬೆಳಿಗ್ಗೆ ಬಂದು ತೋಟದಲ್ಲಿ ನೋಡಿದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಮೂವರ ದೇಹಗಳೂ ಸಂಪೂರ್ಣ ಕರಕಲಾಗಿವೆ.

ಸತೀಶ್ ತೋಟದಲ್ಲಿ ರೈಟರ್ ಅಗಿ ಕೆಲಸ ಮಾಡುತ್ತಿದ್ದರು. ಧರ್ಮಜ ಚಾಲಕರಾಗಿ ದುಡಿಯುತ್ತಿದ್ದರು. ರವಿ ಇವರೊಂದಿಗೆ ತೋಟಕ್ಕೆ ಬಂದಿದ್ದರು. 

ಘಟನೆ ನಡೆದಿದ್ದು ಹೇಗೆ?: ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡುತ್ತಿದ್ದಾಗ ಮರದ ಹತ್ತಿರದಲ್ಲಿ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿ ಮೇಲೆ ಏಣಿ ಬಿದ್ದ ಕಾರಣ ಅನಾಹುತ ನಡೆದಿದೆ.

ಏಣಿಯ ಬುಡದಲ್ಲಿಯೇ ಮೂವರ ಶವಗಳು ಕರಕಲಾಗಿವೆ. ಏಣಿ ಏರುವಾಗಲೇ ಅನಾಹುತ ನಡೆದಿರಬಹುದು ಎಂದು ಶಂಕಿಸಲಾಗಿದೆ. ಒಬ್ಬ ಏಣಿ ಏರುವಾಗ, ಇಬ್ಬರು ಏಣಿ ಜಾರದಂತೆ ಹಿಡಿದುಕೊಂಡಿರಬಹುದು. ಆಕಸ್ಮಿಕವಾಗಿ ಏಣಿ ಜಾರುವಾಗ ಒಬ್ಬರಿಗೊಬ್ಬರು ತಾಗಿಸಿಕೊಂಡಿದ್ದು, ಮೂವರಿಗೂ ವಿದ್ಯುತ್‌ ಪ್ರವಹಿಸಿದೆ. ಬೆಂಕಿಯಿಂದ ಸ್ಥಳದಲ್ಲಿ ಎಲೆಗಳು ಸುಟ್ಟುಹೋಗಿವೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !