ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಜರಾತಿ ಕೊರತೆ: ಪರೀಕ್ಷೆಗಿಲ್ಲ ಅವಕಾಶ

ಎಫ್‌ಎಂಸಿ ಕಾಲೇಜು ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ 
Last Updated 25 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಮಡಿಕೇರಿ: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಫೀಲ್ಡ್ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಗುರುವಾರದಿಂದ ಪದವಿ ಪರೀಕ್ಷೆಗಳು ಆರಂಭಗೊಂಡಿದ್ದು, ಹಾಜರಾತಿ ಕೊರತೆಯಾದ 70 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ.

ಪ್ರವೇಶ ಪತ್ರ ವಿತರಣೆ ಮಾಡದ ಕಾರಣ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಆಡಳಿತ ಮಂಡಳಿ ಹಾಜರಾತಿ ಕೊರತೆಯ ನೆಪ ಹೇಳಿ ಪ್ರವೇಶ ಪತ್ರ ವಿತರಿಸಿಲ್ಲ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡರು.

ವಿವಿಧ ಪದವಿಯ 70 ವಿದ್ಯಾರ್ಥಿಗಳು 2, 4 ಹಾಗೂ 6ನೇ ಸೆಮಿಸ್ಟರ್‌ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಕಾಲೇಜು ಪ್ರಾಂಶುಪಾಲ ತಿಮ್ಮಯ್ಯ ವಿರುದ್ಧ ಪರೀಕ್ಷಾ ವಂಚಿತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ಆರೋಗ್ಯ ಸಮಸ್ಯೆಯಿಂದ ನನಗೆ ಹಾಜರಾತಿ ಕೊರತೆಯಾಗಿದೆ. ಪ್ರಾಂಶುಪಾಲರು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ನಮ್ಮ ವಿದ್ಯಾಭ್ಯಾಸಕ್ಕೆ ಪ್ರಾಂಶುಪಾಲರೇ ಅಡ್ಡಿಯಾಗುತ್ತಿದ್ದಾರೆ. ಮಾನವೀಯ ನೆಲೆಯಲ್ಲಿ ಅವಕಾಶ ನೀಡಬೇಕಿತ್ತು’ ಎಂದು ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಯೊಬ್ಬ ನೋವು ತೋಡಿಕೊಂಡ.

‘ಮಂಗಳೂರು ವಿಶ್ವವಿದ್ಯಾಲಯದ ನಿಯಮದಂತೆ ಹಾಜರಾತಿ ಕಡ್ಡಾಯಗೊಳಿಸಿದ್ದೇವೆ. ಹಾಜರಾತಿ ಕೊರತೆಯಾಗಿದ್ದ 70 ವಿದ್ಯಾರ್ಥಿಗಳಿಗೆ ಮೂರು ತಿಂಗಳ ಮೊದಲೇ ಸೂಚನೆ ನೀಡಲಾಗಿತ್ತು. ಆದರೂ, ಹಾಜರಾತಿ ಕೊರತೆಯಾದ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳದೇ ಈಗ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಕಾಲೇಜು ಪ್ರಾಂಶುಪಾಲ ಟಿ.ಡಿ. ತಿಮ್ಮಯ್ಯ ತಿಳಿಸಿದರು.

ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದೂ ಪ್ರತಿಕ್ರಿಯಿಸಿದರು. ಪಿಎಸ್‌ಐ ಷಣ್ಮುಗಂ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT